Advertisement

ಕೆರೆಗಳಿಗೆ ನೀರು ಹರಿಸಲು ರೈತರ ಒತ್ತಾಯ

07:04 AM Jun 25, 2019 | Team Udayavani |

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಕೆರೆ ಅಂಗಳದಿಂದ 4ನೇ ಹಂತದ ಏತ ನೀರಾವರಿ ಯೋಜನೆಯಡಿ ಹನ್ನೊಂದು ಕೆರೆಗಳಿಗೆ ನೀರು ಹರಿಸಲು ಕ್ರಿಯಾ ಯೋಜನೆ ರೂಪಿಸಿದ್ದು, ಅದರಂತೆ ಒಂದೇ ಹಂತದಲ್ಲಿ, ಏಕ ಕಾಲದಲ್ಲಿ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ನಿಗಮ ಮುಂದಾಗಬೇಕು ಎಂದು ಅರಕಲವಾಡಿ, ಸುವರ್ಣನಗರ ಹಾಗೂ ಬೊಮ್ಮನಹಳ್ಳಿ ಕೆರೆಗಳ ವ್ಯಾಪ್ತಿಯ ರೈತರು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರನ್ನು ಭೇಟಿಯಾಗಿ ಸೋಮವಾರ ಮನವಿ ಸಲ್ಲಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿಗೆ ಜಿಪಂ ಸದಸ್ಯೆ ಶಶಿಕಲಾ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎ.ಎಸ್‌.ಗುರುಸ್ವಾಮಿ, ಜಿಪಂ ಸದಸ್ಯ ಎಸ್‌.ಸೋಮನಾಯಕ, ತಾಪಂ ಅಧ್ಯಕ್ಷೆ ದೊಡ್ಡಮ್ಮ ನೇತೃತ್ವದಲ್ಲಿ 200ಕ್ಕೂ ಹೆಚ್ಚು ರೈತರು ತೆರಳಿ ಜಿಲ್ಲಾಧಿಕಾರಿ ಕಾವೇರಿ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು. ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಜನ ಹಾಗೂ ಜಾನುವಾರು ಪರಿತಪಿಸುವ ಕುರಿತು ಮನವರಿಕೆ ಮಾಡಿಕೊಟ್ಟರು.

ಅರಕಲವಾಡಿ ಗ್ರಾಮದ ಮುಖಂಡ ಎ.ಎಸ್‌. ಗುರುಸ್ವಾಮಿ ಮಾತನಾಡಿ, ಹುತ್ತೂರು ಕೆರೆ ಅಂಗಳದಿಂದ ನೀರು ಹರಿಸುವ ಯೋಜನೆಯಡಿ ಗುಂಡ್ಲುಪೇಟೆ ತಾಲೂಕಿನ 9 ಕೆರೆ, ಚಾಮರಾಜನಗರ ತಾಲೂಕಿನ 2 ಕೆರೆಗಳು ಸೇರಿವೆ. ಈ ಯೋಜನೆ ಕಾಮಗಾರಿ ಪ್ರಾರಂಭವಾಗಿ 2ವರ್ಷಗಳಾಗಿದೆ. 53 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.

ಇದುವರೆಗೆ 26 ಕೋಟಿ ರೂ. ವೆಚ್ಚವಾಗಿದ್ದು, ಇನ್ನು 27 ಕೋಟಿ ರೂ.ನ ಕಾಮಗಾರಿ ಬಾಕಿ ಇದೆ. ಈ ಯೋಜನೆಯಲ್ಲಿ ಗುರುತ್ವಾಕರ್ಷಣೆಯಲ್ಲಿ ಹರಿಯುವ ನೀರನ್ನು ಅಳವಡಿಸಿ, ನೀರು ಹರಿಸಲು ಅನುಮತಿ ನೀಡಿದ್ದು, ಈಗ ಪ್ರಾರಂಭದ ಒಂದು ಕೆರೆಗೆ ಮಾತ್ರ ಪೈಪ್‌ ಅಳವಡಿಸಲಾಗಿದೆ. ಇನ್ನುಳಿದ ಕೆರೆಗಳಿಗೆ ಸುಮಾರು 9 ತಿಂಗಳಿಂದಲೂ ಪೈಪ್‌ ಅಳವಡಿಸಿಲ್ಲ. ಹೀಗಾಗಿ ವಿಳಂಬವಾಗುತ್ತಿದೆ ಎಂದು ದೂರಿದರು.

11 ಕೆರೆಗಳಿಗೆ ನೀರು ತುಂಬಿಸಲು ವರ್ಷದಲ್ಲಿ 30 ದಿನ ಅನುಮತಿ ನೀಡಿದ್ದು, ಪರಿಪೂರ್ಣ ಯೋಜನೆಯಾಗಿ ಪೈಪ್‌ ಲೈನ್‌ ಅಳವಡಿಸಿ, ನೀರು ಹರಿಸಿದರೆ ಮಾತ್ರ ಇದು ಸಾಧ್ಯ. ಕೆಲವರ ಒತ್ತಡಕ್ಕೆ ನೀರು ಬಿಡುವ ಪ್ರಯತ್ನ ಮಾಡಿದರೆ ಈ ಯೋಜನೆಗೆ ಒಳಪಡುವ ಶೇ.90 ರೈತರು ಹಾಗೂ ನಾಗರಿಕರಿಗೆ ಅನ್ಯಾಯವಾಗಲಿದೆ.

Advertisement

ಹೀಗಾಗಿ 4 ತಿಂಗಳ ಕಾಲಾವಕಾಶದಲ್ಲಿ ಉಳಿಕೆ 27 ಕಿ.ಮೀ. ಪೈಪ್‌ ಲೈನ್‌ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಿ, ಶೀಘ್ರವಾಗಿ ಎಲ್ಲಾ ಕೆರೆಗಳಿಗೂ ನೀರು ಹರಿಸಬೇಕು ಎಂದರು. ಯೋಜನೆ ವ್ಯಾಪ್ತಿಯ ಯರಗನಹಳ್ಳಿ ಸುವರ್ಣನಗರ ಕೆರೆ, ಅರಕಲವಾಡಿ ಕೆರೆ ಮತ್ತು ಬೊಮ್ಮನಹಳ್ಳಿ ಕೆರೆ ಭಾಗದ ರೈತರು ಹಾಗೂ ಸಾರ್ವಜನಿಕರೆಲ್ಲರ ಒತ್ತಾಯ ಇದಾಗಿದೆ ಎಂದರು.

ನಂತರ ಜಿಲ್ಲಾಡಳಿತ ಭವನದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ತೆರಳಿ ಅವರ ಅನುಪಸ್ಥಿತಿಯಲ್ಲಿ ಕಚೇರಿ ಸಹಾಯಕಿಗೆ ಮನವಿ ನೀಡಿದರು. ಈ ವೇಳೆ ತಾಪಂ ಅಧ್ಯಕ್ಷೆ ದೊಡ್ಡಮ್ಮ, ಸದಸ್ಯೆ ರತ್ನಮ್ಮ, ಎಪಿಎಂಸಿ ನಿರ್ದೇಶಕಿ ಮಹದೇವಮ್ಮ, ಮುಖಂಡರಾದ ರಾಜೇಂದ್ರಪ್ರಸಾದ್‌, ಕೊಂಗಳಪ್ಪ, ಸೋಮಲಿಂಗಪ್ಪ, ಶೇಖರಪ್ಪ, ಚನ್ನಪ್ಪನಪುರ ಪ್ರಸಾದ್‌ ಮತ್ತಿತರರಿದ್ದರು.

ಯಾವುದೇ ರಾಜಕೀಯ ಒತ್ತಡವಿಲ್ಲ: ಎಲ್ಲಾ ಕೆರೆಗಳಿಗೆ ಏಕ ಕಾಲಕ್ಕೆ ನೀರು ಬಿಡಬೇಕು ಎಂಬುದು ನಮ್ಮ ಕರ್ತವ್ಯ. ಹೀಗಾಗಿ ಇಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ. ವಡ್ಡಗೆರೆ ಕೆರೆ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಮುಂದಿನ 3 ತಿಂಗಳ ಅವಧಿಯಲ್ಲಿ ಪೈಪ್‌ಲೈನ್‌ ಕಾಮಗಾರಿ ಪೂರ್ಣ ಮಾಡಿ ಯೋಜನೆ ವ್ಯಾಪ್ತಿಯ 11 ಕೆರೆಗಳಿಗೆ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾಧಿಕಾರಿ ಕಾವೇರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next