ಅಡಹಳ್ಳಿ: ಸಮೀಪದ ಯಲ್ಲಮ್ಮನವಾಡಿ 110/11 ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರದ ಎದುರು ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಗುರುವಾರ ಬಳವಾಡ ಸರ್ಕ್ನೂಟ್ ಲೈನ್‌ಗೆ ಒಳಪಡುವ ರೈತರು ಪ್ರತಿಭಟನೆ ನಡೆಸಿದರು.
ಈ ವೇಳೆ ಅರುಣ ಮುದಕಣ್ಣವರ ಮಾತನಾಡಿ. ಕಳೆದ ಹಲವು ದಿನದಿಂದ ಅ ಧಿಕಾರಿಗಳು ಮತ್ತು ಲೈನ್‌ಮನ್‌ಗಳ ನಿರ್ಲಕ್ಷ್ಯದಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೇ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿವೆ. ಸರಿಯಾಗಿ ವಿದ್ಯುತ್ ನೀಡಬೇಕು ಎಂದು ಹಲವು ಬಾರಿ ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ, ಇದಕ್ಕೆ ಸ್ಪಂಸದಿಸದಿದ್ದಾಗ ನೂರಾರು ರೈತರು ಸೇರಿ ಯಲ್ಲಮ್ಮನವಾಡಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಲ ಸಮಯದ ನಂತರ ಅಥಣಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತ ವಿಜಯಕುಮಾರ ಕೋಲೆ ಸ್ಥಳಕ್ಕೆ ಆಗಮಿಸಿ ರೈತರು, ಜನರ ಮನವೊಲಿಸಿಸಲು ಯತ್ನಿಸಿದರೂ ಉಪಯೋಗವಾಗಲಿಲ್ಲ. ಇಲ್ಲಿಯ ಶಾಖಾಧಿಕಾರಿ ಮಂಜುನಾಥ ಲಮಾಣಿ ಹಾಗೂ ಲೈನ್‌ಮ್ಯಾನ್‌ಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ನಮಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇವರನ್ನು ಬದಲಾಯಿಸಿ, ನಮಗೆ ಸರಿಯಾಗಿ ವಿದ್ಯುತ್ ನೀಡಬೇಕು ಎಂದು ಪಟ್ಟು ಹಿಡಿದರು.
ಇಲ್ಲಿಯವರೆಗೆ ನಮ್ಮ ಸಿಬ್ಬಂದಿಯಿಂದ ಆಗಿರುವ ಲೋಪ ಸರಿಪಡಿಸಿ ತಮಗೆ ಇನ್ನು ಮುಂದೆ ದಿನದ 7 ಗಂಟೆ ವಿದ್ಯುತ್ ನೀಡಲಾಗುವುದು. ಮುಂದೆ ಲೋಪಗಳು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ಅರ್ಜುನ ಪೂಜಾರಿ, ಪಾರೀಸ್ ಚಿವಟೆ, ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಮುದಕಣ್ಣವರ, ಮಾನಸಿಂಗ ಮಗರ, ಬಾವುಸಾಬ ಭೋಸಲೆ, ಮುದ್ದು ಅಡಹಳ್ಳಿ, ನಾನಾಸಾಬ ವೀರಗೌಡ, ಸಂಗಪ್ಪ ಅಡಹಳ್ಳಿ, ಲಕ್ಕಪ್ಪ ವೀರಗೌಡ, ಸುರಪ್ಪ ಮುದಕಣ್ಣವರ, ಮಹೇಶ ವಿರಕ್ತಮಠ, ಪರಪ್ಪ ಮಶಾಳ, ಮಹಾದೇವ ಚವ್ಹಾಣ, ಮಹಾದೇವ ಅಂಬಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.