Advertisement

ಪ್ರಧಾನಿ ಭೇಟಿಗೆ ರೈತರ ನಿಯೋಗ

04:56 PM Jun 13, 2018 | Team Udayavani |

ಹುಬ್ಬಳ್ಳಿ: ಮಹದಾಯಿ ಹಾಗೂ ಕಳಸಾ ಬಂಡೂರಿ ಸಮಸ್ಯೆ ಇತ್ಯರ್ಥಕ್ಕೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಒತ್ತಾಯಿಸಲು ರೈತರ ನಿಯೋಗ ಮಂಗಳವಾರ ದೆಹಲಿಗೆ ಪ್ರಯಾಣ ಬೆಳಸಿತು. ಜೂ.14 ಅಥವಾ 15 ರಂದು ಪ್ರಧಾನಿ ಭೇಟಿಗೆ ಅವಕಾಶ ದೊರೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮಹಾ ವೇದಿಕೆ ವತಿಯಿಂದ ನಾಲ್ಕು ಜಿಲ್ಲೆಯ ಪ್ರಮುಖ ಮುಖಂಡರು ಒಳಗೊಂಡಂತೆ 23 ರೈತ ಹೋರಾಟಗಾರರು ರೈಲಿನ ಮೂಲಕ ದೆಹಲಿ ಪ್ರಯಾಣ ಬೆಳೆಸಿದರು.

Advertisement

ಮಹದಾಯಿ ಹೋರಾಟಗಾರ ಶಂಕ್ರಣ್ಣ ಅಂಬಲಿ ಮಾತನಾಡಿ, ಮಹದಾಯಿ ನೀರಿಗಾಗಿ ನಡೆಯುತ್ತಿರುವ ಹೋರಾಟ ಸಾವಿರ ದಿನ ಪೂರೈಸಿದರೂ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯೆ ಪ್ರವೇಶಿಸಿ ಇದಕ್ಕೆ ಪರಿಹಾರ ಸೂಚಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಸಮಸ್ಯೆಯನ್ನು ವಿವರಿಸಿ ಪರಿಹಾರ ನೀಡುವಂತೆ ಒತ್ತಾಯಿಸಲಿದ್ದೇವೆ. ಜೂ.14 ಅಥವಾ 15ರಂದು ನಮ್ಮ ನಿಯೋಗದ ಭೇಟಿಗೆ ಪ್ರಧಾನಿಗಳು ಅವಕಾಶ ನೀಡಲಿದ್ದಾರೆ ಎಂದರು.

ನಮ್ಮ ಹೋರಾಟದಲ್ಲಿ ಯಾವುದೇ ಬಿರುಕಿಲ್ಲ. ಕೆಲವರು ಹೋರಾಟವನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಕೆ ಮಾಡಿಕೊಂಡ ಕಾರಣ ಇಷ್ಟು ವಿಳಂಬಕ್ಕೆ ಕಾರಣವಾಗಿದೆ. ಗುರಿ ಮುಟ್ಟುತ್ತೇವೆ ಎಂಬ ನಿರೀಕ್ಷೆಯಿಂದ ಹೋರಾಟ ಮಾಡುತ್ತಿದ್ದೇವೆ. ಇದರೊಂದಿಗೆ ಸರಕಾರಗಳ ಗಮನ ಸೆಳೆಯುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಪ್ರಧಾನಿಗಳನ್ನು ಒತ್ತಾಯಿಸಲು ನಿಯೋಗ ತೆಗೆದುಕೊಂಡು ಹೋಗುತ್ತಿರುವುದಾಗಿ ಅಂಬಲಿ ತಿಳಿಸಿದರು.

ರೈತ ಮುಖಂಡರಾದ ಬಸವರಾಜ ಸಾಬಳೆ, ವಿಠ್ಠಲ ಜಾಧವ, ಗುರುನಗೌಡ್ರ ರಾಯನಗೌಡ್ರ, ಲಕ್ಷ್ಮಣ ಬಕಾಯಿ, ಶ್ರೀಶೈಲ ಮೇಟಿ, ಬಾಳಪ್ಪ ಚುಂಚನೂರ, ಶಂಕರಗೌಡ ಪಾಟೀಲ, ಹನುಮಂತಗೌಡ ಪಾಟೀಲ, ವೆಂಕಟೇಶ ಹಿರೇರಡ್ಡಿ, ಬಾಳಪ್ಪ ರಡ್ಡರಟ್ಟಿ ಸೇರಿದಂತೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next