ಯಲ್ಲಾಪುರ: ತಾಲೂಕಿನ ಜನರೆಲ್ಲ ಗಣೇಶ ಚತುರ್ಥಿಯ ಖುಷಿಯಲ್ಲಿದ್ದರು. ಆದರೆ ಹಬ್ಬದ ದಿವಸ ಮುಸ್ಸಂಜೆಯಿಂದ ಇದ್ದಕಿದ್ದಂತೆ ಪ್ರಾರಂಭವಾದ ಭಾರೀ ಮಳೆಗೆ ಉಮ್ಮಚ್ಗಿ ಪಂಚಾಯತ್ ವ್ಯಾಪ್ತಿಯ ತುಡುಗುಣಿ ಭಾಗದ ಹಲವು ಊರುಗಳಲ್ಲಿ ತೋಟ, ಗದ್ದೆಗಳೆಲ್ಲ ನೀರು ತುಂಬಿ ಬೆಳೆದ ಬೆಳೆಗಳೆಲ್ಲ ನೀರು ಪಾಲಾದ ಘಟನೆ ನಡೆದಿದೆ.
ಕಲ್ಲರೆಜಡ್ಡಿಯ ಉಲ್ಲಾಸ್ ನುರೋನ, ಆನಂದ ಡಿಸೋಜ, ಪಾತೀಮ ಜೊಜೆ ಡಿಸೋಜ ಮುಂತಾದವರಿಗೆ ಸೇರಿದ ಗದ್ದೆ, ಅಡಿಕೆ ತೋಟಗಳಲ್ಲಿ ಆಳೆತ್ತರ ನೀರು ಹರಿದ ಪರಿಣಾಮ ಕೃಷಿಗಳು ನೀರು ಪಾಲಗಿವೆ.
ತುಡುಗುಣಿಯ ರತ್ನಾಕರ ಬಲ್ಸೆ, ರಾಜಾರಾಮ ರಾಯರು, ಓಮನ್ ರಾಯ ಮೊದಲಾದವರಿಗೆ ಸೇರಿದ ತೋಟ,ಗದ್ದೆಗಳಲ್ಲದೆ ಹಂದಿಮನೆಯ ಹರೀಶ ಹೆಗಡೆ, ಪ್ರಕಾಶ ಹೆಗಡೆ ಮೊದಲಾದವರಿಗೆ ಸೇರಿದ ಜಮೀನುಗಳಲ್ಲಿಯೂ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಸುಮಾರು ಹದಿನಾರು ಎಕರೆಗೂ ಹೆಚ್ಚು ಭತ್ತದ ಬೆಳೆಗೆ ಅತಿ ಹೆಚ್ಚು ಹಾನಿಯಾಗಿದ್ದು, ಭತ್ತ ಬೆಳೆಯಬೇಕೆಂಬ ರೈತರ ಆಸಕ್ತಿಯನ್ನೇ ಕುಂಟಿತಗೊಳಿಸಿದಂತಾಗಿದೆ.
ಇದನ್ನೂ ಓದಿ: ರೈಲ್ವೆ ಇಲಾಖೆ ನೌಕರನ ಸೋಗಿನಲ್ಲಿ ಗಾಂಜಾ ಸಾಗಾಟ: ಆರೋಪಿ ಸೆರೆ
ಸುದ್ದಿ ತಿಳಿದ ತಕ್ಷಣ ಕೆಲವು ಮಳೆ ಪೀಡಿತ ಕೆಲವು ಪ್ರದೇಶಗಳಿಗೆ ಉಮ್ಮಚ್ಗಿ ಗ್ರಾ.ಪಂ. ಅಧ್ಯಕ್ಷೆ ರೂಪಾ ಪೂಜಾರಿ, ಸದಸ್ಯರುಗಳಾದ ಖೈತಾನ್ ಡಿಸೋಜ, ಅಶೋಕ ಪೂಜಾರಿ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.