ನವದೆಹಲಿ: ನಾಲ್ಕು ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ಜನವರಿ 26 ರಂದು ನಡೆಯುವ ಟ್ರ್ಯಾಕ್ಟರ್ ರ‍್ಯಾಲಿಗೆ ಅಡ್ಡಿ ಉಂಟುಮಾಡಲು ನಿಯೋಜಿಸಲಾದ ವ್ಯಕ್ತಿಯನ್ನು ಶುಕ್ರವಾರ (ಜ.22) ಸಿಂಘು ಗಡಿ ಪ್ರತಿಭಟನಾ ಸ್ಥಳದಲ್ಲಿ ರೈತರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಹಲವು ದಿನಗಳಿಂದ ರೈತರು ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಪೊಲೀಸ್ ಸಮವಸ್ತ್ರ ಧರಿಸಿ ರೈತ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದಲ್ಲದೆ ರ‍್ಯಾಲಿಗೆ ಅಡ್ಡಿಯುಂಟು ಮಾಡುವ ಸಂಚನ್ನು ರೂಪಿಸಿದ್ದ ವ್ಯಕ್ತಿಯೊಬ್ಬನನ್ನು ರೈತರೇ ಹಿಡಿದಿದ್ದಾರೆ. ಈ ವೇಳೆ ಮಾತನಾಡಿದ ಬಂಧಿತ ಆರೋಪಿ, ಸಂಚು ರೂಪಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದು, ಹರಿಯಾಣದ ರಾಯ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಈ ಯೋಜನೆ ಕಾರ್ಯಗೊತಗೊಳಿಸಲು ನಮಗೆ ತರಬೇತಿ ನೀಡಿದ್ದಾರೆ ಎಂದು ಆರೋಪಿಸಿದ್ದಾನೆ.
ಇದನ್ನೂ ಓದಿ: ಅಪ್ಪ ಕೊಡಿಸಿದ ಸೈಕಲ್‌ನಲ್ಲೇ ಊರು ಸುತ್ತುವ ರವೀಂದ್ರ ಕುಮಾರ್ :36 ವರ್ಷಗಳಿಂದ ಸೈಕಲೇ ಆಧಾರ
ಪತ್ರಿಕಾಗೋಷ್ಠಿಯಲ್ಲಿ ಕುಳಿತು ಮಾತನಾಡಿದ ಬಂಧಿತ ಆರೋಪಿ, ತಮ್ಮ ತಂಡಕ್ಕೆ ಎರಡು ಸ್ಥಳಗಳಲ್ಲಿ ಶಸ್ತ್ರಾಸ್ತ್ರಗಳನ್ನು ನೀಡಲಾಗಿದೆ. ರ‍್ಯಾಲಿ ಸಂದರ್ಭದಲ್ಲಿ ರೈತರ ಗುಂಪುಗಳನ್ನು ಚದುರಿಸಲು ಪೊಲೀಸ್ ಸಮವಸ್ತ್ರ ಧರಿಸಿ ಯೋಜನೆ ರೂಪಿಸಲಾಗಿತ್ತು. ಮಾತ್ರವಲ್ಲದೆ ನಾಲ್ವರು ರೈತರ ಫೋಟೋಗಳನ್ನು ನೀಡಿ ಅವರ ಮೇಲೆ ಗುಂಡು ಹಾರಿಸುವಂತೆ ನಿರ್ದೇಶನ ನೀಡಲಾಗಿತ್ತು ಎಂದಿದ್ದಾನೆ.
Related Articles
ಕಳೆದ ಹಲವು ದಿನಗಳಿಂದ ರೈತರು ಕೇಂದ್ರದ ಮೂರು ಹೊಸ ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಮತ್ತು ಸರ್ಕಾರ ನಡುವಿನ ಹಲವು ಸುತ್ತಿನ ಮಾತುಕತೆಗಳು ಕೂಡ ವಿಫಲವಾಗಿದೆ. ಏತನ್ಮಧ್ಯೆ ಜ.26ರಂದು ರೈತರು ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಉದ್ದೇಶಿಸಿದ್ದಾರೆ.
ಇದನ್ನೂ ಓದಿ: ಈ ರಾಶಿಯವರು ಇಂದು ಮನದನ್ನೆಯೊಡನೆ ಮನಬಿಚ್ಚಿ ಮಾತನಾಡಿ: ಹೇಗಿದೆ ಇಂದಿನ ದಿನಭವಿಷ್ಯ !