ಜೇವರ್ಗಿ: ಅತಿವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ಪರಿಹಾರ, ಗ್ರಾಮೀಣ ಪ್ರದೇಶಗಳಲ್ಲಿ ಹಾಳಾದ ರಸ್ತೆ ಸುಧಾರಣೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕದ ವತಿಯಿಂದ ಸೋಮವಾರ ತಾಲೂಕಿನ ಸೊನ್ನ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-50 ತಡೆದು ನೂರಾರು ಜನ ರೈತರು ಎತ್ತಿನ ಬಂಡಿಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಿದರು.
ಸೋಮವಾರ ಬೆಳಗ್ಗೆ 11 ಗಂಟೆಗೆ ಹತ್ತಾರು ಎತ್ತಿನ ಬಂಡಿಗಳ ಜತೆ ನೂರಾರು ಜನ ರೈತರು ಸೊನ್ನ ಕ್ರಾಸ್ ಬಳಿಯ ಹೆದ್ದಾರಿ ತಡೆದು ಸ್ಥಳೀಯ ಶಾಸಕ ಡಾ| ಅಜಯಸಿಂಗ್, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ಸುಭಾಷ ಹೊಸಮನಿ ಮಾತನಾಡಿ, ಕಳೆದ 5 ವರ್ಷಗಳಿಂದ ಶಾಸಕ ಡಾ| ಅಜಯಸಿಂಗ್ ರಾಜ್ಯ ಬಿಜೆಪಿ ಸರ್ಕಾರ ಅನುದಾನ ನೀಡುತ್ತಿಲ್ಲ ಎಂಬ ಮಾತುಗಳು ಕೇಳಿ
ಕ್ಷೇತ್ರದ ಜನ ಬೇಸತ್ತು ಹೋಗಿದ್ದಾರೆ.
ರೈತರು ಹಾಗೂ ಗ್ರಾಮೀಣ ಪ್ರದೇಶದ ಜನ ನಿಮ್ಮ ಆಡಳಿತಕ್ಕೆ ರೋಸಿ ಹೋಗಿದ್ದಾರೆ. ನೀರಲಕೋಡ, ಹೆಗ್ಗಿನಾಳ ರಸ್ತೆಗಳು ಸೇರಿದಂತೆ ಗ್ರಾಮೀಣ ಪ್ರದೇಶದ ಹತ್ತು ಹಲವಾರು ಗ್ರಾಮಗಳ ರಸ್ತೆ ತುಂಬಾ ಹದಗೆಟ್ಟು ಹೋಗಿದ್ದು, ತಗ್ಗು ಗುಂಡಿಗಳು ಬಿದ್ದು ನಿತ್ಯ ಅಪಘಾತ ಸಂಭವಿಸುತ್ತಿವೆ. ಈ ಬಗ್ಗೆ ಹಲವಾರು ಬಾರಿ ಶಾಸಕರ ಬಳಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಅತಿವೃಷ್ಟಿಯಿಂದ ತಾಲೂಕಿನಲ್ಲಿ ಸಾವಿರಾರು ಎಕರೆ ಬೆಳೆ ಹಾಳಾಗಿದ್ದು, ಪ್ರತಿ ಎಕರೆಗೆ 25 ಸಾವಿರ ರೂ.ಪರಿಹಾರ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ಎಲ್ಲ ರೈತರ 5 ಲಕ್ಷ ರೂ.ವರೆಗಿನ ಸಾಲಮನ್ನಾ ಮಾಡಿ, ಹೊಸ ಸಾಲವನ್ನು ಪ್ರತಿ ಎಕರೆಗೆ 50 ಸಾವಿರ ಕೊಡಬೇಕು, ರೈತರು ಬೆಳೆದ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ ಡಾ| ಸ್ವಾಮಿನಾಥನ ವರದಿ ಜಾರಿ ಮಾಡಬೇಕು. ತೊಗರಿಗೆ ಪ್ರತಿ ಕ್ವಿಂಟಲ್‌ಗೆ 12 ಸಾವಿರ ರೂ.ಬೆಂಬಲ ಬೆಲೆ ನಿಗದಿ ಮಾಡಬೇಕು. ಉದ್ಯೋಗ ಖಾತರಿ ಸಂಪೂರ್ಣ ಜಾರಿ ಮಾಡಿ, ವರ್ಷಕ್ಕೆ ಕುಟುಂಬವೊಂದಕ್ಕೆ 250 ದಿನ ಕೆಲಸ ಕೊಡಬೇಕು. ಕೂಲಿ ದರ 600 ರೂ.ಗೆ ಹೆಚ್ಚಳ ಮಾಡಬೇಕು. 60 ವಯಸ್ಸಿನ ವೃದ್ಧ ರೈತರಿಗೆ ಹಾಗೂ ಕೃಷಿ ಕೂಲಿಕಾರ್ಮಿಕರಿಗೆ ತಿಂಗಳಿಗೆ 7500 ಮಾಸಾಶನ ಮಂಜೂರಿ ಮಾಡಬೇಕು ಎಂದು ಆಗ್ರಹಿಸಿದರು.
ಗ್ರೇಡ್-2 ತಹಶೀಲ್ದಾರ್ ಪ್ರಸನ್ನ ಮೋಘೇಕರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಎರಡು ಗಂಟೆಗಳ ಕಾಲ ಹೆದ್ದಾರಿ ತಡೆದ ಹಿನ್ನೆಲೆಯಲ್ಲಿ ನೂರಾರು ವಾಹನಗಳು ನಿಂತು ಟ್ರಾಫಿಕ್ ಜಾಮ್ ಉಂಟಾಯಿತು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಾಯಬಣ್ಣ ಗುಡುಬಾ, ಎಂ.ಬಿ.ಸಜ್ಜನ್, ಗಿಡ್ಡಮ್ಮ ನಾಯಕ, ದಿಲೀಪ್ ನಾಗೂರೆ, ಹಿರಿಯ ರೈತ ಮುಖಂಡ ವೆಂಕೋಬರಾವ ವಾಗಣಗೇರಾ, ಪ್ರಧಾನ ಕಾರ್ಯದರ್ಶಿ ಶಂಕರಲಿಂಗ ಹನ್ನೂರ, ನಿಂಗಪ್ಪ ನಾಯ್ಕೋಡಿ ಹೆಗ್ಗಿನಾಳ, ಸಿದ್ದಣ್ಣ ನೀರಲಕೋಡ, ಲಕ್ಷ್ಮಣ ಹಂಚಿನಾಳ, ಈರಣ್ಣ ರಾಠೊಡ, ಶರಣಬಸವ ಕಲ್ಲಹಂಗರಗಾ,ಮಲ್ಲಿಕಾರ್ಜುನ ವರ್ಚನಳ್ಳಿ, ಸಿದ್ದು ಮುತ್ತಕೋಡ, ಸಿದ್ದು ಹೆಗ್ಗಿನಾಳ, ದೇವಿಂದ್ರಪ್ಪ ರಾವೂರ, ಸಕ್ರೆಪ್ಪ ಹರನೂರ, ಹಣಮಂತ ಜನಿವಾರ, ಭೀಮಾಶಂಕರ ಬಿಲ್ಲಾ, ಸಿದ್ದು ಅಂದಾನಿ ಸೇರಿದಂತೆ ನೂರಾರು ಜನ ರೈತರು, ಮಹಿಳೆಯರು ಭಾಗವಹಿಸಿದ್ದರು.