ಬೆಂಗಳೂರು: ಕೃಷಿಕರಿಗೆ ಉತ್ತಮ ಬೆಳೆ ಮತ್ತು ಬೆಲೆ ಎರಡೂ ದೊರೆತಾಗ ಮಾತ್ರ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ವಿಶ್ರಾಂತ ಮಹಾನಿರ್ದೇಶಕ ಡಾ.ಎಸ್.ಅಯ್ಯಪ್ಪನ್ ಅಭಿಪ್ರಾಯಪಟ್ಟರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಂಡಿರುವ ಕೃಷಿಮೇಳ-2017ರ ಎರಡನೇ ದಿನದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ರೈತ ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹಾಗೂ ಬೆಂಬಲ ಬೆಲೆ ದೊರೆಯುವಂತಾದರೆ ಕೃಷಿ ಚಟುವಟಿಕೆ ಕೈಗೊಳ್ಳಲು ಪ್ರೋತ್ಸಾಹ ದೊರೆಯುತ್ತದೆ ಎಂದು ಹೇಳಿದರು.
ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಡಿ.ಎಲ್.ಮಹೇಶ್ವರ್ ಮಾತನಾಡಿ, ಕೃಷಿ ಸಂಶೋಧನೆ ಹಲವು ದಶಕಗಳಿಂದ ಪಾರಂಪರಿಕವಾಗಿ ಮುಂದುವರೆಯಲು ಸರ್ಕಾರಗಳ ಸಹಕಾರವೇ ಕಾರಣ. ಕೃಷಿ ಕೇವಲ ಉತ್ಪಾದನಾ ಕ್ಷೇತ್ರವಷ್ಟೇ ಆಗದೆ ಆದಾಯ ತರುವ ಕ್ಷೇತ್ರವೂ ಕೂಡ ಆಗಬೇಕು.
ಮುಂದಿನ ಪರಂಪರೆಗೆ ರೈತಶಕ್ತಿಯನ್ನು ಇಂದಿನ ರೈತರಿಂದಲೇ ನಿರೀಕ್ಷಿಸಲಾಗುತ್ತದೆ. ಈ ನಿಟ್ಟಿನಲ್ಲಿ ಕೃಷಿಕರು ತಮ್ಮ ಜಾnನ ಹಾಗೂ ಕೌಶಲ್ಯತೆಯನ್ನು ವೃದ್ಧಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆೆ ನೀಡಬೇಕು ಎಂದರು. ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ, ಸಂಸ್ಕರಣೆ, ಶೇಖರಣೆ ಇವುಗಳ ಜತೆಗೆ ಮಾರುಕಟ್ಟೆ ವ್ಯವಸ್ಥೆ ಸಹ ಬಹಳ ಮುಖ್ಯವಾಗುತ್ತದೆ.
ಇಂತಹ ಕೃಷಿ ಮೇಳಗಳಿಂದ ರೈತರಿಗೆ ಅಗತ್ಯ ಕೌಶಲ್ಯತೆ ದೊರೆತರೆ ಕೃಷಿಮೇಳ ಸಾರ್ಥಕತೆ ಪಡೆಯುತ್ತದೆ. ಮುಂದಿನ ದಿನಗಳಿಗೆ ಅಗತ್ಯ ಮಾಹಿತಿಯನ್ನು ಕೃಷಿಕರು ಇಂತಹ ಮೇಳಗಳಿಂದ ಪಡೆಯಬಹುದಾಗಿದ್ದು, ಇದರಿಂದ ಕೃಷಿ ಕ್ಷೇತ್ರ ಸುಸ್ಥಿರವಾಗುವಂತಾಗಬೇಕು ಎಂದು ಹೇಳಿದರು.
ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಚ್.ಶಿವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಜ್ಞಾನಿ, ಸ್ನಾತಕೋತ್ತರ ವಿಭಾಗದ ಡೀನ್ ಶೈಲಜಾ ಹಿತ್ತಲಮನಿ, ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಎಂ.ಎಸ್.ನಟರಾಜ್ ಮತ್ತಿತರರು ಪಾಲ್ಗೊಂಡಿದ್ದರು.
ರೈತ ಪ್ರಶಸ್ತಿ ಪ್ರದಾನ: ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳು ಹಾಗೂ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ತಾಲೂಕು ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳನ್ನು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಚ್.ಶಿವಣ್ಣ ಪ್ರದಾನ ಮಾಡಿದರು.