Advertisement

ಫ‌ಸಲು ಕೈಗೆ ಸಿಗದೆ ಸಂಕಟ: ಕಂಗಾಲಾದ ಕೃಷಿಕರು

11:32 AM Feb 21, 2023 | Team Udayavani |

ಕಾರ್ಕಳ: ತಾಲೂಕಿನ ಹಲವು ಕಡೆಗಳಲ್ಲಿ ಕೃಷಿ ಫ‌ಸಲು ನೀಡಿದರೂ ರೈತರ ಕೈಗೆ ಸಿಗದ ಪರಿಸ್ಥಿತಿ ಉಂಟಾಗಿದೆ. ಕೃಷಿ ಉಳಿಸುವುದೇ ಈಗ ಕೃಷಿಕರಿಗೆ ಸಮಸ್ಯೆಯಾಗಿದೆ. ಇದಕ್ಕೆ ಕಾರಣ ಕಾಡು ಪ್ರಾಣಿಗಳ ಹಾವಳಿ. ತಾಲೂಕಿನೆಲ್ಲೆಡೆ ಮಂಗ, ಹಂದಿ, ನವಿಲು ಹಾವಳಿ ಹೆಚ್ಚಾಗಿದ್ದು, ಅದರ ಜತೆ ಕಾಡುಕೋಣ ಉಪಟಳವೂ ಸಮಸ್ಯೆ ಹೆಚ್ಚಿಸಿದೆ. ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾಡುಕೋಣಗಳು ಬೇಸಗೆಯ ಈ ಅವಧಿಯಲ್ಲಿ ಅಧಿಕವಾಗಿ ಕಾಣಿಸಿಕೊಂಡು ಕೃಷಿ ಭೂಮಿಗಳಿಗೆ ಹಾನಿ ಮಾಡುತ್ತಿವೆ. ಹಿಂಡು ರೀತಿ ಕಾಣ ಬರುವ ಕಾಡುಕೋಣಗಳು ಗುಂಪಾಗಿ ಕೃಷಿ ಭೂಮಿಗೆ ಲಗ್ಗೆ ಇಡುತ್ತಿರುವುದರ ಪರಿಣಾಮ ಕೃಷಿಕರು ಕಷ್ಟಪಟ್ಟು ಬೆಳೆದ ಬೆಳೆ ಫ‌ಸಲು ಸಂಪೂರ್ಣ ಹಾನಿಗೊಳಗಾಗುತ್ತಿದೆ.

Advertisement

ರಾತ್ರಿ ಹಗಲು ಎನ್ನದೆ ಕಾಡು ಕೋಣಗಳು ಕೃಷಿ ಭೂಮಿಗೆ ದಾಳಿ ಮಾಡುತ್ತಿರುತ್ತವೆ. ಭತ್ತ, ಅಡಿಕೆ, ತೆಂಗು, ಬಾಳೆ ಸೇರಿದಂತೆ ಅನೇಕ ಬಗೆಯ ಕೃಷಿ ಬೆಳೆಗಳು ಇವುಗಳಿಂದ ಹಾನಿಯಾಗಿದ್ದು ಕೃಷಿಕರು ನಷ್ಟದ ಮೇಲೆ ನಷ್ಟ ಅನುಭವಿಸುವಂತಾಗಿದೆ ತಾಲೂಕಿನ ಮಂದಿ ಬಹುತೇಕ ಕೃಷಿಕರು. ಭತ್ತ, ಅಡಿಕೆ, ತೆಂಗು, ಸೇರಿದಂತೆ ಇತರ ಕೃಷಿಗಳ ಮೇಲೂ ಕಾಡುಪ್ರಾಯಿಗಳು ಅಪಾರ ಹಾನಿಯನ್ನುಂಟು ಮಾಡುತ್ತಿದೆ.

ರೈತರ ಕಣ್ಣ ಮುಂದೆಯೇ ಫ‌ಸಲು ನಷ್ಟವಾದರೂ ಏನೂ ಮಾಡದೆ ಅಸಹಾಯಕತೆಯನ್ನು ಕೃಷಿಕರು ವ್ಯಕ್ತಪಡಿಸುತ್ತಿದ್ದಾರೆ. ಕೃಷಿ ಫ‌ಸಲನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಕೃಷಿಕರು ಕಷ್ಟಪಟ್ಟು ದುಡಿದು ಬೆಳೆ ಬೆಳೆಯುತ್ತಾರೆ. ಬೆಳೆದ ಬೆಳೆಗಳು ಕಾಡು ಪ್ರಾಣಿಗಳ ಹಾವಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗುತ್ತಿದೆ.

ಯಾವೆಲ್ಲ ಕಡೆಗಳಲ್ಲಿ ಹೆಚ್ಚು?

ಕಾರ್ಕಳ ತಾಲೂಕಿನ ಗ್ರಾಮೀಣ ಭಾಗಗಳಾದ ಪಳ್ಳಿ, ಬೆಳ್ಮಣ್‌, ಹಿರ್ಗಾನ, ದುರ್ಗ, ಶಿರ್ಲಾಲು, ಈದು, ಮುನಿಯಾಲು, ಅಂಡಾರು, ಬೈಲೂರು, ಕೌಡೂರು, ನೀರೆ, ಕಣಜಾರು, ಹೊಸ್ಮಾರು ಈ ಭಾಗಗಳಲ್ಲಿ ಕಾಡುಕೋಣಗಳ ಹಾವಳಿ ಅತೀವವಾಗಿದೆ. ಈ ಪ್ರದೇಶಗಳ ಒಂದಲ್ಲ ಒಂದು ಕಡೆ ಪ್ರತಿನಿತ್ಯ ಎಕರೆಗಟ್ಟಲೆ ಕೃಭೂಮಿಯನ್ನು ಕಾಡುಕೋಣಗಳು ಹಾನಿಗೊಳಿಸುತ್ತಿವೆ. ವಾರದ ಹಿಂದೆ ಬೆಳ್ಮಣ್‌ ಪರಿಸರದ 10ಕ್ಕೂ ಅಧಿಕ ಕುಟುಂಬಗಳ ಕೃಷಿಭೂಮಿಗೆ ಕಾಡುಕೋಣಗಳು ಹಾನಿ ಮಾಡಿದ್ದವು.

Advertisement

ನಾವು ಸ್ಪಂದಿಸುತ್ತಿದ್ದೇವೆ

ಕಸಬಾ ವ್ಯಾಪ್ತಿಯಲ್ಲಿ ಕಾಡುಕೋಣ ಹಾವಳಿ ಇಲ್ಲ. ಶಿರ್ಲಾಲು, ಮುಟುಪ್ಪಾಡಿ, ಬೆಳ್ಮಣ್‌ ಇಂತಹ ತೀರಾ ಗ್ರಾಮೀಣ ಭಾಗದಲ್ಲಿ ಹಾವಳಿಯಿದೆ. ಪರಿಹಾರ ಅನ್ವಯಿಸುವ ಫ‌ಸಲಿಗೆ ಅರ್ಜಿ ಸ್ವೀಕರಿಸಿ ನೀಡುತ್ತಿದ್ದೇವೆ. ಹೆಚ್ಚು ಉಪಟಳ ಕಂಡುಬಂದಂತಹ ಸ್ಥಳಗಳಿಗೆ ತೆರಳಿ ಸ್ಥಳೀಯರ ಸಹಕಾರ ಪಡೆದು ಪ್ರಾಯಿಗಳನ್ನು ಕಾಡಿನೊಳಗೆ ಓಡಿಸುವ ಕೆಲಸ ಮಾಡುತ್ತಿದ್ದೇವೆ. ನಾಗರಿಕರೂ ಮುನ್ನೆಚ್ಚರಿಕೆ ವಹಿಸಬೇಕು.

-ಪ್ರಕಾಶ್ಚಂದ್ರ, ಹುಕ್ರಪ್ಪ ಗೌಡ, ಅರಣ್ಯಾಧಿಕಾರಿಗಳು

ಎಲ್ಲದಕ್ಕೂ ಪರಿಹಾರವೂ ಇಲ್ಲ!
ಕಾಡು ಪ್ರಾಣಿ ಹಾವಳಿಗೆ ಒಳಗಾದ ಕೃಷಿ ಭೂಮಿಯ ಪೈಕಿ 1 ಎಕರೆ ಭತ್ತದ ಫ‌ಸಲಿಗೆ 13,200 ರೂ. ಪರಿಹಾರ ನೀಡಲಾಗುತ್ತದೆ. ಅಡಿಕೆ, ತೆಂಗು ಬೆಳವಣಿಗೆ ಆಧಾರದಲ್ಲಿ ಸಸಿಯೊಂದಕ್ಕೆ 250 ರೂ. ಗಳಿಂದ 700 ರೂ.ವರೆಗೂ ನೀಡಲಾಗುತ್ತದೆ. ನವಿಲು ಹಾನಿಮಾಡಿದರೂ ಪರಿಹಾರವಿದೆ. ಆದರೆ ಅತೀವವಾಗಿ ಕಾಡುವ ಹಂದಿ, ಮಂಗಗಳ ಹಾವಳಿಯಿಂದ ಹಾನಿಗೊಳಗಾದ ಫ‌ಸಲಿಗೆ ಇದುವರೆಗೂ ಸರಕಾರ ಪರಿಹಾರ ಘೋಷಿಸಿಲ್ಲ. ಚಿರತೆಯಿಂದ ಹಸುಗಳು ಮೃತಪಟ್ಟರೆ ಪರಿಹಾರ ನೀಡಲಾಗುತ್ತದೆ. ಚಿರತೆ ದಾಳಿಯಿಂದ ಗಾಯಗೊಂಡ ಹಸುಗಳಿಗೆ ಪರಿಹಾರವಿದ್ದರೂ ಇದುವರೆಗೆ ಅರ್ಜಿ ಸಲ್ಲಿಸಿದವರು ವಿರಳ ಎನ್ನುತ್ತಾರೆ ಅರಣ್ಯಾಧಿಕಾರಿಗಳು

ಕಾಡುಕೋಣ ನಾಡಿಗೆ ಬರುವುದಕ್ಕೂ ಕಾರಣವಿದೆ
ಬೇಸಗೆಯ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾತಾವರಣ ಬಿಸಿಯೇರುತ್ತಿದೆ. ಅರಣ್ಯದಲ್ಲಿ ಹಸುರು ಕ್ಷೀಣಿಸುತ್ತಿದೆ. ಕಾಡು ಪ್ರಾಣಿಗಳಿಗೆ ಆಹಾರವೂ ಕಾಡಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಈಗ ಕೃಷಿಕರು ತಮ್ಮ ಕೃಷಿ ತೋಟಗಳಿಗೆ ನೀರುಣಿಸುತ್ತಿದ್ದು. ತೋಟಗಳು ತಂಪಿನ ತಾಣಗಳಾಗಿವೆ. ಇದೇ ಕಾರಣಕ್ಕೆ ಆಹಾರ ಅರಸುತ್ತ ಬರುವ ಕಾಡುಕೋಣಗಳು ತೋಟದ ತಂಪಿನ ಜಾಗಗಳಲ್ಲಿ ಸುತ್ತಾಡಿ ವಿರಮಿಸುತ್ತಿರುತ್ತವೆ. ಇದೇ ವೇಳೆ ತೋಟದ ಫ‌ಸಲಿಗೆ ಹಾನಿಯಾಗುತ್ತವೆ. ಜನವಸತಿ ಪ್ರದೇಶಗಳಲ್ಲಿ ಓಡಾಡಿ ಭೀತಿಯನ್ನು ಸೃಷ್ಟಿಸುತ್ತವೆ.

~ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next