ದೊಡ್ಡಬಳ್ಳಾಪುರ: ತಾಲೂಕಿನ ಹುಲಿಕುಂಟೆ ಸಮೀಪ 700 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುತ್ತಿರುವ ಹೈಟೆಕ್ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಭೂಸ್ವಾಧೀನ ಕುರಿತು ಹುಲಿಕುಂಟೆ ಗ್ರಾಮದಲ್ಲಿ ಕೆಐಎಡಿಬಿ ಅಧಿಕಾರಿಗಳಿಂದ ನಡೆದ ಸಾರ್ವಜನಿಕ ಸಭೆಗೆ ಗೈರಾಗುವ ಮೂಲಕ ಹುಲಿಕುಂಟೆ ಗ್ರಾಮದ ರೈತರು ಭೂಸ್ವಾಧೀನಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಹುಲಿಕುಂಟೆ ಸಮೀಪ 700 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿರುವ ಹೈಟೆಕ್ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಭೂಸ್ವಾಧೀನ ಮಾಡುವ ಕುರಿತು ಹುಲಿಕುಂಟೆ ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ಕೆಐಎಡಿಬಿ ಅಧಿಕಾರಿಗಳಿಂದ ಈ ಕುರಿತಂತೆ ಮಾಹಿತಿ ನೀಡಿದ ಕೃಷಿ ಭೂಸಂರಕ್ಷಣಾ ಸಮಿತಿ ಮುಖಂಡರಾದ ಸೋಮಣ್ಣ, ರಂಗಸ್ವಾಮಿ, ದೇವರಾಜ್, ಕೀರ್ತಿಶ್, ವಿವೇಕ್ ಹಾಗೂ ಗೋಪಿ ಅವರು, ಹುಲುಕುಂಟೆ ಗ್ರಾಮದಲ್ಲಿ ಕೆಐಡಿಬಿ ವತಿಯಿಂದ ಸ್ವಾಧೀನಕ್ಕೆ ಗುರುತಿಸಲಾಗಿರುವ ಎಲ್ಲಾ ಭೂಮಿಯು ಸಹ ಫಲವತ್ತಾದ ಕೃಷಿ ಭೂಮಿಯಾಗಿದೆ.
ಈ ಭೂಮಿಯಲ್ಲಿ ಅಡಕೆ, ತೆಂಗು ಸೇರಿದಂತೆ ವಿವಿಧ ರೀತಿಯ ಬೆಳೆ ಬೆಳೆಯಲಾಗುತ್ತಿದೆ. ಕೊಳವೆಬಾವಿಗಳ ಮೂಲಕ ನೀರಾವರಿ ಸೌಲಭ್ಯವನ್ನು ಹೊಂದಿರುವ ಬಹುತೇಕ ರೈತರು ಹಣ್ಣು, ತರಕಾರಿಗಳನ್ನು ವರ್ಷವಿಡೀ ಬೆಳೆಯುತ್ತಿದ್ದಾರೆ. ಯಾವುದೇ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳವಾಗಿ ಅಲ್ಲಿನ ಕೃಷಿ ಚಟುವಟಿಕೆ ಪರಿಶೀಲಿಸಿದ ನಂತರವೇ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಬೇಕು.ಆದರೆ, ಕೆಐಎಡಿಬಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ ಹಳೆಯ ಸರ್ಕಾರಿ ದಾಖಲೆ ಆಧರಿಸಿ ಅವೈಜ್ಞಾನಿಕವಾಗಿ ಅಧಿಸೂಚನೆ ಹೊರಡಿಸಿದ್ದಾರೆ ಎಂದರು.
ಭೂಸ್ವಾಧೀನಕ್ಕೆ ಒಪ್ಪಿಗೆ ಇಲ್ಲ: ರಾಜ್ಯ ಸರ್ಕಾರ 2013ರಲ್ಲಿ ಕೆಐಎಡಿಬಿಗೆ ನೀಡಿರುವ ಆದೇಶ ಪತ್ರದಲ್ಲಿ ಸೂಚಿಸಿರುವಂತೆ ತೋಟಗಳು, ಫಲವತ್ತಾದ ಜಮೀನು, ವರ್ಷಕ್ಕೆ 2 ಬೆಳೆಯನ್ನು ಬೆಳೆಯುವ ಜಮೀನುಗಳನ್ನು ಸ್ವಾಧೀನದಿಂದ ಹೊರಗಿಡಬೇಕು ಎಂದು ತಿಳಿಸಿದೆ. ಆದರೆ, ಸರ್ಕಾರದ ಈ ನಿಯಮ ಉಲ್ಲಂಘಿಸಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ನಮ್ಮೂರಿನ ಮೂಲಕ ನೆಲಮಂಗಲ ತಾಲೂಕಿನ ಘೋರಘಟ್ಟ ಹಾಗೂ ಮಾವಿನಕುಂಟೆ ಗ್ರಾಮಗಳ ಸಮೀಪ ಸ್ವಾಧೀನಪಡಿಸಿಕೊಂಡಿರುವ ಸುಮಾರು 500 ಎಕರೆ ಭೂಮಿಗೆ ಹೋಗಲು ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ಮಾತ್ರ ಒಪ್ಪಿಗೆ ಇದೆ ಹೊರತು, ಉಳಿದ ಭೂಸ್ವಾಧೀನಕ್ಕೆ ಒಪ್ಪಿಗೆಯಿಲ್ಲ ಎಂದರು.
ರೈತರಿಗೆ ಅನ್ಯಾಯ ಮಾಡಬೇಡಿ: ರೈತರ ವಿರೋಧ ವ್ಯಕ್ತಪಡಿಸಿರುವ ಕುರಿತು ವಿಶೇಷ ಭೂಸ್ವಾಧೀನ ಅಧಿಕಾರಿ ಬಾಳಪ್ಪ ಹಂದಿಗುಂದಿ ಮತ್ತಿತರ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು. ರಸ್ತೆ ನಿರ್ಮಾಣಕ್ಕೆ ಮಾತ್ರ ಭೂ ಸ್ವಾಧೀನ ಮಾಡಿಕೊಳ್ಳಲಾ ಗುವುದೆಂದು ನೀಡಿದರು. ನಂತರ ಅಧಿಕಾರಿಗಳನ್ನು ಬೇಟೆ ಶ್ರೀರಂಗನಾಥ ಸ್ವಾಮಿ ದೇವಾಲಯಕ್ಕೆ ಕರೆದೊಯ್ದ ಸಮಿತಿಯ ಮುಖಂಡರು ದೇವರಿಗೆ ವಿಶೇಷ ಪೂಜಿಸಿ ಅನ್ನದಾತ ರೈತರಿಗೆ ಅನ್ಯಾಯ ಮಾಡದಂತೆ ಮನವಿ ಮಾಡಿದರು.