ಬಸವನಬಾಗೇವಾಡಿ: ರೈತರ ಸಮಸ್ಯೆಯನ್ನು ಆಲಿಸದೆ ಉದ್ಧಟತನ ಪ್ರದರ್ಶಿಸಿದ ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಸಚಿವ ಉಮೇಶ ಕತ್ತಿವರ ವರ್ತನೆಗೆ ರೈತರು, ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿಯವರು ವಿಜಯಪುರದಲ್ಲಿ ಗಣರಾಜೋತ್ಸವ ಕಾರ್ಯಕ್ರಮ ಮುಗಿಸಿ ಪಟ್ಟಣದ ಮಾರ್ಗವಾಗಿ ಮುದ್ದೇಬಿಹಾಳಕ್ಕೆ ತೆರಳುವ ಮಧ್ಯ ಮಾರ್ಗದಲ್ಲಿ ಅಖಂಡ ಕರ್ನಾಟಕ ರೈತ ಸಂಘನೆ ಹಾಗೂ ರೈತರು ಉಮೇಶ ಕತ್ತಿ ಅವರಿಗೆ ಮನವಿ ಸಲ್ಲಿಸುವ ವೇಳೆ ಈ ಘಟನೆ ಜರುಗಿದೆ.
ಅಖಂಡ ಕರ್ನಾಟಕ ರೈತರ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿವರು ಜಿಲ್ಲೆಯಲ್ಲಿ ಕಳೆದ ವರ್ಷ ಅಕಾಲಿಕ ಮಳೆಯಿಂದ ತೊಗರಿ, ಉಳ್ಳಾಗಡ್ಡಿ, ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆಗಳು ಹಾಳಾಗಿದ್ದು. ಬೇರೆ ಜಿಲ್ಲೆಗಳಿಗೆ ಪರಿಹಾರ ದೊರೆತಿದೆ. ನಮ್ಮ ಜಿಲ್ಲೆಗೆ ಪರಿಹಾರ ಸಿಕ್ಕಿಲ್ಲ, ರೈತರು ಸಂಕಷ್ಟದಲ್ಲಿ ಇದ್ದಾರೆ. ಆದ್ದರಿಂದ ನಮ್ಮ ಮನವಿ ಸ್ವೀಕರಿಸಿ ಎಂದು ಸಚಿವರಲ್ಲಿ ಕೋರಿದರು.
ಆದರೆ ಸಚಿವರು ತಮ್ಮ ಕಾರಿನಿಂದ ಕೆಳೆಗಿಳಿದು ರೈತರ ಸಮಸ್ಯೆಯನ್ನು ಆಲಿಸದೆ ಏನಿದೆ ಕೊಡಪ್ಪಾ ನೋಡೊನಾ, ಮುಂದೆ ನನಗೆ ಕೆಲಸವಿದೆ ಎಂದು ಹೇಳಿ ಕಾರಿನಲ್ಲೇ ಕುಳಿತು ಮನವಿಯನ್ನು ತೆಗೆದುಕೊಂಡು ಹೊರಟು ಹೋದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅರವಿಂದ ಕುಲಕರ್ಣಿ, ಸೌಜನ್ಯಕ್ಕೂ ಕೂಡಾ ರೈತರ ಸಮಸ್ಯೆಯನ್ನು ಆಲಿಸದೆ ತಮ್ಮ ಉದ್ಧಟತನ ಪ್ರದರ್ಶಿಸಿದ ಸಚಿವರು ಮತ್ತು ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರಿಗೆ ರೈತರ ಬಗ್ಗೆ ಕಿಂಚತ್ತೂ ಕಾಳಜಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ರೈತರಾದ ಮಲ್ಲಪ್ಪ ಪಡಸಲಗಿ, ಶೇಖಪ್ಪ ಸಜ್ಜನ, ಗುರಲಿಂಗಪ್ಪ ಪಡಸಲಗಿ, ವಿಠ್ಠಲ ಬಿರಾದಾರ, ರಾಜೇಸಾಬ ವಾಲೀಕಾರ, ಚನ್ನಬಸಪ್ಪ ಸಿಂಧೂರ, ಮಲ್ಲಪ್ಪ ಮಾಡ್ಯಾಳ, ಶಿವಪ್ಪ ಸುಂಟ್ಯಾಣ, ಬಾಬು ಸುಂಟ್ಯಾಣ ಸೇರಿದಂತೆ ಅನೇಕರು ಇದ್ದರು.