Advertisement

 ರೈತರ ಸಾಲ ಮನ್ನಾವಿವರ ಒದಗಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ 

09:44 AM Dec 14, 2018 | |

ಮಂಗಳೂರು: ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಯೋಜನೆಯನ್ನು ಜಾರಿ ಮಾಡಲು ರಾಜ್ಯ ಸರಕಾರ ಕೆಲವು ನಿರ್ದೇಶನಗಳನ್ನು ನೀಡಿದೆ.

Advertisement

ನಿಯಮಗಳು
* ಯೋಜನೆಯಡಿ ನೋಂದಾಯಿಸಿಕೊಳ್ಳಲು ಡಿ. 31ರೊಳಗೆ ಬೆಳೆ ಸಾಲ ಪಡೆದ ರೈತರು ತಾವು ಸಾಲ ಪಡೆದ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಡಿ.13ರಿಂದ 28ರ ವರೆಗೆ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ನಕಲು ಪ್ರತಿ ಮತ್ತು ತಾವು ಸಾಲ ಪಡೆದ ಸರ್ವೆ ನಂಬರ್‌ನ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. 
* ಒಂದು ಬ್ಯಾಂಕ್‌ ಶಾಖೆಯಲ್ಲಿ ದಿನಕ್ಕೆ ಕನಿಷ್ಠ 40 ರೈತರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಕ್ರಮ ಸಂಖ್ಯೆ, ದಿನಾಂಕ ಸಹಿತ ಟೋಕನ್‌ ನೀಡಲಾಗುತ್ತದೆ. ಬಳಿಕ ರೈತರು ಆಯಾ ದಿನಾಂಕದಂದು ಬ್ಯಾಂಕ್‌ ಶಾಖೆಗೆ ತೆರಳಿ ಸ್ವಯಂ ದೃಢೀಕರಣ ಪತ್ರದೊಂದಿಗೆ ಆಧಾರ್‌ ಕಾರ್ಡ್‌, ಪಡಿತರ ಚೀಟಿ ನಕಲು ಮತ್ತು ಭೂಮಿ ಸರ್ವೇ ನಂಬರ್‌ ಒದಗಿಸಬೇಕು.
*  ಗೊಂದಲ – ಸಂದೇಹಗಳಿದ್ದಲ್ಲಿ ಸಹಾಯವಾಣಿ 9980085973 ಸಂಪರ್ಕಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.

ಅರ್ಹರು ಯಾರು?
* ಯೋಜನೆಯ ಲಾಭ ಪಡೆಯಲು 2009ರ ಎ. 1ರಂದು ಮತ್ತು ಅನಂತರದ ದಿನಗಳಲ್ಲಿ ಮಂಜೂರಾದ ಮತ್ತು 2017ರ ಡಿ. 31ರ ವರೆಗೆ ಬಾಕಿ ಇರುವ ಬೆಳೆಸಾಲಗಳು ಅರ್ಹವಾಗಿರುತ್ತವೆ.
* ವೈಯಕ್ತಿಕ ಬೆಳೆಸಾಲ ಪಡೆದ ರೈತರು ಮಾತ್ರ ಅರ್ಹರಾಗಿರುತ್ತಾರೆ. ಒಂದು ಕುಟುಂಬವು ಗರಿಷ್ಠ 2 ಲಕ್ಷ ರೂ.ವರೆಗೆ ಮಾತ್ರ ಬೆಳೆ ಸಾಲ ಮನ್ನಾ ಪಡೆಯಲು ಅರ್ಹ. ಇದಕ್ಕಾಗಿ 2018ರ ಜು.5ಕ್ಕಿಂತ ಮುಂಚಿತವಾಗಿ ಪಡೆದ ರೇಷನ್‌ ಕಾರ್ಡನ್ನು ಮಾತ್ರ ಪರಿಗಣಿಸಲಾಗುವುದು.
* ವಾರ್ಷಿಕ ಆದಾಯ ತರಿಗೆ ಪಾವತಿಸುವ ರೈತರು ಹಾಗೂ ಮತ್ತು ರಾಜ್ಯ, ಕೇಂದ್ರ ಸರಕಾರಿ, ಅರೆ ಸರಕಾರಿ, ಸರಕಾರದಿಂದ ಅನುದಾನಕ್ಕೊಳಪಡುವ ಸಂಸ್ಥೆಗಳಲ್ಲಿ, ಸಾರ್ವಜನಿಕ ಸ್ವಾಮ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಅರ್ಹರಿರುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರದಿಂದ 15,000 ರೂ.ಗಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತ ನೌಕರರು ಈ ಯೋಜನೆಯಡಿ ಅರ್ಹರಿರುವುದಿಲ್ಲ. ಈ ಮಿತಿಯು ಮಾಜಿ ಸೈನಿಕರಿಗೆ ಅನ್ವಯಿಸುವುದಿಲ್ಲ.
* ಸಹಕಾರಿ ಬ್ಯಾಂಕುಗಳಲ್ಲಿನ ಬೆಳೆ ಸಾಲ ಮನ್ನಾ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್‌ ಬೆಳೆ ಸಾಲ ಮನ್ನಾ ಯೋಜನೆಯಡಿ ಅರ್ಹರಿರುವುದಿಲ್ಲ.  

ಉಡುಪಿಯಲ್ಲೂ  ನೋಂದಣಿ ಆರಂಭ
ಉಡುಪಿ: ಜಿಲ್ಲೆಯಲ್ಲಿ ರೈತರು ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆದ ಸಾಲಮನ್ನಾ ಸೌಲಭ್ಯ ಪಡೆಯಲು ಹೆಸರು ನೋಂದಾಯಿಸುವ ಪ್ರಕ್ರಿಯೆ ಡಿ.13ರಂದು ಆರಂಭಗೊಂಡಿದ್ದು, ಜ. 10ರೊಳಗೆ ನೋಂದಾಯಿಸಿಕೊಳ್ಳಬಹುದು ಎಂದು ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದರು. 

258 ಕೋ.ರೂ. ಸಾಲಮನ್ನಾ: ಜಿಲ್ಲೆಯಲ್ಲಿ 4,648 ಮಂದಿ ರೈತರು ವಾಣಿಜ್ಯ ಬ್ಯಾಂಕ್‌ಗಳ ಬೆಳೆ ಸಾಲ ಮನ್ನಾ ಪಡೆಯಲು ಅರ್ಹರಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಬೆಳೆ ಸಾಲ ಮನ್ನಾ ಪಡೆಯಲು 24,232 ಮಂದಿ ಅರ್ಹರಿದ್ದು ಇವರ ಒಟ್ಟು 258 ಕೋ.ರೂ. ಸಾಲಮನ್ನಾ ಆಗಲಿದೆ ಎಂದರು.
ಮರಳುಗಾರಿಕೆಗೆ ರಕ್ಷಣೆ
ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿದ್ಯಾ ಕುಮಾರಿ, ಮರಳುಗಾರಿಕೆಗೆ ಪರವಾನಿಗೆ ಪಡೆದಿರುವವರು ಇದುವರೆಗೂ ಮರಳುಗಾರಿಕೆ ಆರಂಭಿಸಿಲ್ಲ. ಉಪ್ಪೂರಿನಲ್ಲಿ ಓರ್ವ ಪರವಾನಿಗೆದಾರರು ಮರಳುಗಾರಿಕೆ ನಡೆಸಲು ಮುಂದಾಗಿದ್ದಾರೆ. ಮರಳುಗಾರಿಕೆಗೆ ಪೊಲೀಸ್‌ ರಕ್ಷಣೆ ನೀಡುವಂತೆ ಗುರುವಾರ ಬೇಡಿಕೆ ಮಂಡಿಸಿದ್ದಾರೆ. ಅವರಿಗೆ ರಕ್ಷಣೆ ನೀಡಲಾಗುವುದು ಎಂದರು. ಈಗಾಗಲೇ ಪರವಾನಿಗೆ ನೀಡಿರುವ ಧಕ್ಕೆಗಳಲ್ಲಿ ಅಗತ್ಯ ಇರುವಷ್ಟು ಮರಳು ಲಭ್ಯವಿಲ್ಲದೆ ಧಕ್ಕೆ ವಹಿಸಿಕೊಂಡವರಿಗೆ ನಷ್ಟದ ಭೀತಿ ಉಂಟಾಗಿರುವ ದೂರುಗಳ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಈ ಸಮಸ್ಯೆಗಳ ಬಗ್ಗೆ ಯಾರೂ ಮಾಹಿತಿ ನೀಡಿಲ್ಲ. ಅಂತಹ ಸಮಸ್ಯೆಗಳಿದ್ದರೆ 7 ಸದಸ್ಯರ ಸಮಿತಿಗೆ ಬಂದು ತಿಳಿಸಬೇಕು. ಆಗ ಬೇರೆ ಧಕ್ಕೆಗಳನ್ನು ನೀಡುವ, ಇತರ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next