ದಾವಣಗೆರೆ: ದೆಹಲಿಯ ನಾಲ್ಕು ಗಡಿಗಳಲ್ಲಿ ರೈತರು 120 ದಿನಗಳಿಂದ ನಡೆಸುತ್ತಿರುವ ಹೋರಾಟ ಜೀವ ಸಂಕುಲದ ಉಳಿವಿಗಾಗಿ ನಡೆಸುತ್ತಿರುವ ಹೋರಾಟ ಎಂದು ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ವಿಶ್ಲೇಷಿಸಿದ್ದಾರೆ.
ಭಾನುವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕರಾಳ, ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ಬರೀ ರೈತರಿಗಾಗಿ ಅಲ್ಲ. ದೇಶ ಮತ್ತು ಸಂವಿಧಾನದ ಉಳಿವಿಗಾಗಿ. ದೇಶದ ಪ್ರತಿಯೊಂದು ಗ್ರಾಮದ ಉಳಿವಿಗಾಗಿ ನಡೆಸುತ್ತಿರುವ ಹೋರಾಟ. ಗ್ರಾಮ ಉಳಿದರೆ ದೇಶ ಉಳಿಯುತ್ತದೆ ಎಂದರು.
ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ ನೀವೆಲ್ಲರೂ ದೆಹಲಿಗೆ ಬರಬೇಕಾಗಿಲ್ಲ. ಬೆಂಗಳೂರಿನಲ್ಲೇ ದೆಹಲಿ ಮಾದರಿಯ ಹೋರಾಟ ರೂಪಿಸುವಂತಾಗಬೇಕು. ದೆಹಲಿಯಲ್ಲಿ ರೈತರು ಹೇಗೆ ನಾಲ್ಕು ದಿಕ್ಕುಗಳಲ್ಲಿ ದಿಗ್ಬಂಧನ ಹಾಕಿದ್ದಾರೋ ಅದೇ ಮಾದರಿಯಲ್ಲಿ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲು ಹೋರಾಟಗಾರರು ದಿ ಗ್ಬಂಧನ ಹಾಕಬೇಕು ಎಂದು ಕರೆ ನೀಡಿದರು. ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ 2024 ರವರೆಗೆ ಜಾರಿಯಲ್ಲಿರುತ್ತದೆ. ಕೆಲವರು ರೈತರ ಹೋರಾಟದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಯಾರೂ ನಂಬಲೇಬಾರದು. ಹಣವನ್ನು ತಿಜೋರಿಯಲ್ಲಿ ಇಡುವಂತೆ ರೈತರು ಬೆಳೆದಂತಹ ಆಹಾರ ಧಾನ್ಯಗಳನ್ನು ಬಂಡವಾಳಶಾಹಿಗಳಿಂದ ತಿಜೋರಿಯಲ್ಲಿ ಇಡಲಾಗುತ್ತಿದೆ. ಮನಸ್ಸಿಗೆ ಬಂದ ಧಾರಣೆಗೆ ಆಹಾರ ಧಾನ್ಯಗಳ ಮಾರಾಟ ಮಾಡುವ ಹುನ್ನಾರವೂ ನಡೆದಿದೆ. ಈ ರೀತಿ ಆದಲ್ಲಿ ನಮ್ಮ ಅಕ್ಕಪಕ್ಕದ ಸಣ್ಣ ಪುಟ್ಟ ಕಿರಾಣಿ ಅಂಗಡಿಯವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ನಮ್ಮ ಹೋರಾಟ ಜಾತಿ, ಧರ್ಮ, ಪಂಥ ಮೀರಿದ ಜೀವ ಸಂಕುಲದ ಉಳಿವಿಗಾಗಿ ನಡೆಯುತ್ತಿರುವ ಹೋರಾಟ. ನಮ್ಮ ಭಾಷೆ ಬೇರೆಯಾದರೂ ದೇಶದ ಎಲ್ಲ ಅನ್ನದಾತರ ಭಾವನೆ ಒಂದೇ. ಹಾಗಾಗಿ ನಾವು ಜೈ ಶ್ರೀರಾಮ್, ಜೈ ಭೀಮ್, ಅಲ್ಲಾ ಹೋ ಅಕ್ಬರ್, ಹರ ಹರ ಮಹಾದೇವ್ ಎಂಬ ಘೋಷಣೆಯೊಂದಿಗೆ ಹೋರಾಟ ಮುಂದುವರೆಸೋಣ ಎಂದು ತಿಳಿಸಿದರು. ರೈತ ಮುಖಂಡರಾದ ತೇಜಸ್ವಿ ಪಟೇಲ್, ಚುಕ್ಕಿ ನಂಜುಂಡಸ್ವಾಮಿ, ಹೊನ್ನೂರು ಮುನಿಯಪ್ಪ, ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ಕಾರ್ಯಕ್ರಮದ ರೂವಾರಿ ಅನೀಸ್ ಪಾಷಾ, ಅರುಣ್‌ಕುಮಾರ್ ಕುರುಡಿ, ಬಲ್ಲೂರು ರವಿಕುಮಾರ್, ಎಲ್.ಎಚ್. ಅರುಣ್‌ಕುಮಾರ್, ಸತೀಶ್ ಅರವಿಂದ್, ಸುನಿತ್‌ಕುಮಾರ್, ಡಾ| ವಸುಧೇಂದ್ರ ಇತರರು ಇದ್ದರು.