Advertisement

ರೈತ ಮತ್ತು ಗ್ರಾಹಕನ ನೇರ ಮಾರುಕಟ್ಟೆ ನಮ್ದು ಮಳಿಗೆ

03:25 PM Oct 05, 2020 | Suhan S |

ಚಾಮರಾಜನಗರ: ಗ್ರಾಹಕ ಮತ್ತು ಬೆಳೆಗಾರನ ನಡುವೆ ಮಧ್ಯವರ್ತಿಗಳಿಲ್ಲದ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕೆಂಬ ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಕನಸಿನ ನಮ್ದು ಮಾರುಕಟ್ಟೆಯನ್ನು ನಗರದಲ್ಲಿ ಆರಂಭಿಸಲಾಗಿದೆ.

Advertisement

ನಮ್ದು ಬ್ರಾಂಡ್‌ ಹೆಸರಿನಲ್ಲಿ ರಾಜ್ಯಾದ್ಯಂತ ಮಧ್ಯವರ್ತಿ ರಹಿತ, ರೈತ ಗ್ರಾಹಕ ನಡುವಿನ ಮಾರುಕಟ್ಟೆ ಸ್ಥಾಪಿಸಬೇಕೆಂಬುದು ಪ್ರೊ ಎಂಡಿಎನ್‌ ಅವರ ಆಶಯವಾಗಿತ್ತು. ಆ ಆಶಯವನ್ನು ಕಾರ್ಯರೂಪಕ್ಕೆ ತರುವ ಮೊದಲ ಹೆಜ್ಜೆಯಾಗಿ, ರಾಜ್ಯ ರೈತ ಸಂಘ, ಹಸಿರು ಸೇನೆ, ಅಮೃತಭೂಮಿ ಅಂತಾರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರ,ನಿಸರ್ಗನೈಸರ್ಗಿಕ ಸಾವಯವ ಕೃಷಿಕರ ಸಂಘ ಮತ್ತಿತರ ಕೃಷಿಕ ಸಂಘಗಳು ಒಗ್ಗೂಡಿ ಚಾಮರಾಜನಗರದಲ್ಲಿ ವಿಷಮುಕ್ತ ಆಹಾರೋತ್ಪನ್ನಗಳ, ನಮ್ದು ಮಾರಾಟ ಮಳಿಗೆಯನ್ನು ಗಾಂಧಿ ಜಯಂತಿಯಂದು ಆರಂಭಿಸಿವೆ.

ಪ್ರತಿ ತಿಂಗಳು ರೈತ ಗ್ರಾಹಕರ ಸಭೆ: ಗ್ರಾಹಕರು ಮತ್ತು ಬೆಳೆಗಾರರ ನಡುವೆ ಸಮನ್ವಯ, ಪಾರದರ್ಶಕತೆ ಕಾಯ್ದು ಕೊಳ್ಳುವ ಸಲುವಾಗಿ ಪ್ರತಿ ತಿಂಗಳಿಗೊಮ್ಮೆ ರೈತರು ಮತ್ತು ಗ್ರಾಹಕರ ಪ್ರತ್ಯೇಕ ಸಭೆ ನಡೆಸಲಾಗುವುದು. ಬಳಿಕ ಇಬ್ಬರನ್ನೂ ಸೇರಿಸಿ ಸಭೆ ನಡೆಸಿ ಚರ್ಚೆ ನಡೆಸಲಾಗುವುದು. ಆಗ ಗ್ರಾಹಕರು ತಮಗಿರುವ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು. ಗ್ರಾಹಕರಿಗೆ ನೈಸರ್ಗಿಕ ಪದ್ಧತಿಯಿಂದ ಬೆಳೆದ ಆಹಾರ ಪದಾರ್ಥಗಳ ಮಹತ್ವವನ್ನು ತಿಳಿಸಿಕೊಡಲಾಗುತ್ತದೆ. ಇಷ್ಟೇ ಅಲ್ಲದೇ,ಗ್ರಾಹಕರನ್ನು ಮೂರು ತಿಂಗಳಿಗೊಮ್ಮೆ ನೈಸರ್ಗಿಕ ಕೃಷಿ ಮಾಡುವ ರೈತರ ತಾಕುಗಳಿಗೆ ಕರೆದೊಯ್ಯಲಾಗುವುದು. ರೈತರು ನೈಸರ್ಗಿಕ, ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆಯುತ್ತಿರುವ ಬಗ್ಗೆ ಪ್ರಾತ್ಯಕ್ಷಿತೆ ನೀಡಲಾಗುವುದು.

ನಮ್ದು ಮಾರುಕಟ್ಟೆಯಲ್ಲಿ ದೊರಕುವ ಪದಾರ್ಥಗಳು: ಸೊಪ್ಪು, ತರಕಾರಿ,ಹಣ್ಣುಗಳು. ಗಾಣದಿಂದ ಎಣ್ಣೆಗಳು. ಕಡ್ಲೆಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆ ಸಾಸಿವೆ ಎಣ್ಣೆ, ಹುಚ್ಚೆಳ್ಳು ಎಣ್ಣೆ. ಸಿರಿಧಾನ್ಯಗಳಾದ ಸಾಮೆ, ನವಣೆ, ಹಾರಕ, ಊದಲು, ಕೊರ್ಲೆ, ಸಜ್ಜೆ,ಬರಗು, ನೈಸರ್ಗಿಕ  ಕೃಷಿಯಿಂದ ಬೆಳೆದ ಅನ್‌ಪಾಲಿಷ್ಡ್ ಅಕ್ಕಿ, ಪಾಲಿಷ್ಡ್ ಅಕ್ಕಿ, ಬೆಲ್ಲ, ಬೆಲ್ಲದ ಪುಡಿ.ಸಿರಿಧಾನ್ಯಗಳಿಂದ ಮಾಡಿದ ಇನ್‌ ಸ್ಟಂಟ್‌ ಆಹಾರಗಳು. ಸಾಮೆ, ನವಣೆ ಬಿಸಿಬೇಳೆ ಬಾತು, ಸಿರಿಧಾನ್ಯದ ಹಿಟ್ಟುಗಳು.

ಪ್ರೋತ್ಸಾಹಿಸಿ: ರೈತರು ಮತ್ತು ಗ್ರಾಹಕರ ನಡುವೆ, ಮಧ್ಯವರ್ತಿ ರಹಿತ ನೇರ ಸಂಪರ್ಕ ಕಲ್ಪಿಸುವ ನಮದ್ದು ಮಾರುಕಟ್ಟೆಯಶಸ್ವಿಗೊಳಿಸಬೇಕೆಂಬುದು ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರಕನಸಾಗಿತ್ತು. ಅದನ್ನು ನನಸು ಮಾಡುವುದು ಅಮೃತಭೂಮಿ ಮುಖ್ಯಸ್ಥೆ ಚುಕ್ಕಿ ನಂಜುಂಡಸ್ವಾಮಿಯವರ ಆಶಯವಾಗಿತ್ತು. ಅದಕ್ಕೆ ರೈತ ಸಂಘ, ಕೃಷಿಕ ಸಂಘಗಳು ಕೈಜೋಡಿಸಿ ಈ ಮಾರುಕಟ್ಟೆ ಆರಂಭಿಸಿದ್ದೇವೆ. ಗ್ರಾಹಕರು ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂದು ರೈತ ಸಂಘದಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌ ಮನವಿ ಮಾಡಿದ್ದಾರೆ.

Advertisement

ನಮ್ದು ಮಳಿಗೆ ವಿಳಾಸ: ನಮ್ದು ಮಾರುಕಟ್ಟೆ, ಜಿಲ್ಲಾ ಕೃಷಿಕ ಸಮಾಜದ ವಾಣಿಜ್ಯ ಸಂಕೀರ್ಣ, ಹೌಸಿಂಗ್‌ ಬೋರ್ಡ್‌ ಕಾಲೋನಿ, ತಹಶೀಲ್ದಾರ್‌ ನಿವಾಸದ ಎದುರು,ಹಾಪ್‌ಕಾಮ್ಸ್‌ಹಿಂಭಾಗ, ಚಾಮರಾಜನಗರ. ಸಂಪರ್ಕ ಸಂಖ್ಯೆ:9620622213.

ಕಾರ್ಯವಿಧಾನಹೇಗೆ? :  ನೈಸರ್ಗಿಕ ಅಥವಾ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ತರಕಾರಿ, ಧಾನ್ಯ, ಎಣ್ಣೆಕಾಳು, ಅಡುಗೆ ಎಣ್ಣೆ ಇತ್ಯಾದಿಯನ್ನು ನಮ್ದು ಮಾರುಕಟ್ಟೆಗೆ ತಂದು ಕೊಡುತ್ತಾರೆ. ಅದನ್ನು ನಮ್ದು ಮಾರುಕಟ್ಟೆ ಸಮಿತಿ ಗ್ರಾಹಕರಿಗೆ ಮಾರಾಟ ಮಾಡುತ್ತದೆ.  ಇದು ಕ್ರಿಮಿನಾಶಕ, ರಸಗೊಬ್ಬರ ಬಳಸದೇ ನೈಸರ್ಗಿಕ ಪದ್ಧತಿಯಲ್ಲಿ ಬೆಳೆದ ತರಕಾರಿಯಾದ್ದರಿಂದ ಹಾಪ್‌ ಕಾಮ್ಸ್‌ ದರಕ್ಕಿಂತ ಶೇ. 5ರಷ್ಟು ಹೆಚ್ಚು ದರಕ್ಕೆ ಗ್ರಾಹಕರಿಗೆ ನೀಡಲಾಗುತ್ತದೆ. ಉದಾಹರಣೆಗೆ ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ಟೊಮೆಟೋ 10 ರೂ. ದರವಿದ್ದರೆ, ನಮ್ದು ಮಾರುಕಟ್ಟೆಯಲ್ಲಿ 10 ರೂ. 50 ಪೈಸೆಗೆ ಮಾರಲಾಗುತ್ತದೆ. ಇಲ್ಲಿ ತಂದು ಹಾಕುವ ಬೆಳೆಗಾರನಿಗೆ, ಹಾಪ್‌ಕಾಮ್ಸ್‌ನವರು ಗ್ರಾಹಕರಿಗೆ ಮಾರಾಟ ಮಾಡುವ ಶೇ. 80ರಷ್ಟು ದರವನ್ನು ನೀಡಲಾಗುತ್ತದೆ. ಉದಾಹರಣೆಗೆ ಗ್ರಾಹಕನಿಗೆ 10 ರೂ.ಗೆ ಟೊಮೆಟೋ ಮಾರಿದರೆ, ಬೆಳೆಗಾರನಿಗೆ 8 ರೂ. ನೀಡಲಾಗುತ್ತದೆ. ಹೀಗಾಗಿ ಇತ್ತ ಗ್ರಾಹಕನಿಗೂ, ಅತ್ತ ರೈತನಿಗೂ ನ್ಯಾಯಯುತ ಬೆಲೆ ದೊರಕಿದಂತಾಗುತ್ತದೆ.

 

ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next