ಕೋಲಾರ: ರೈತರು ತಾವು ಬೆಳೆದ ಬೆಳೆಗಳ ವಿವರವನ್ನು ಸಮೀಕ್ಷೆ ಆ್ಯಪ್ ಸಹಾಯದಿಂದ ಅಪ್‌ಲೋಡ್ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಪಕ್ಕದ ಕುಂಬಾರಹಳ್ಳಿಯ ರೈತರ ಜಮೀನಿನಲ್ಲಿ ಬೆಳೆ ಸಮೀಕ್ಷೆ ಆ್ಯಪ್‌ಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ 7 ಲಕ್ಷ 86 ಸಾವಿರ ಪ್ಲಾಟ್ಸ್‌ಗಳಿವೆ. ಈ ಎಲ್ಲಾ ಜಮೀನುಗಳ ಬೆಳೆ ಸಮೀಕ್ಷೆಯನ್ನು ರೈತರ ಬೆಳೆ ಸಮೀಕ್ಷೆ ಆ್ಯಪ್ 2020-21 ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳ ಬೇಕು. ಆ.24 ರೊಳಗೆ ಬೆಳೆ ವಿವರಗಳನ್ನುಆ್ಯಪ್ ಮೂಲಕ ಆಪ್‌ಲೋಡ್ ಮಾಡಬೇಕು. ಆಂಡ್ರಾಯ್ಡ್ ಮೊಬೈಲ್ ಇಲ್ಲದವರು ಪಕ್ಕದ ಜಮೀನಿನ ರೈತರ ಮೊಬೈಲ್‌ನಲ್ಲೂ ಮಾಹಿತಿ ಆಪ್‌ಲೋಡ್ ಮಾಡಬಹುದಾಗಿದೆ ಎಂದು ತಿಳಿಸಿದರು.
ಬೆಳೆ ಸಮೀಕ್ಷೆಯನ್ನು ಮಾಡುವುದರಿಂದ ಯಾವ ರೈತರು ಯಾವ ಬೆಳೆ ಬೆಳೆದಿದ್ದಾರೆ ಎಂಬ ನಿಖರ ಮಾಹಿತಿ ದೊರೆಯುತ್ತದೆ. ಮುಂದೆ ಪ್ರಕೃತಿ ವಿಕೋಪ ಬೆಳೆಹಾನಿ ಆದ ಸಂದರ್ಭದಲ್ಲಿ ಬೆಳೆ ವಿಮೆ ನೀಡಲು ಸಹಕಾರಿಯಾಗುತ್ತದೆ. ಬೆಳೆ ನಾಶ ಸಂದರ್ಭದಲ್ಲಿ ಪರಿಹಾರ ಧನ ವಿತರಣೆಗೂ ಸಹಕಾರಿಯಾಗುತ್ತದೆ ಎಂದರು.
ರೈತರೇ ಮಾಡಬೇಕು: ಜಿಲ್ಲೆಯಲ್ಲಿ 1 ಲಕ್ಷ 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳನ್ನು ಬೆಳೆಯುತ್ತಿದ್ದು, ಇದರ ಸಮೀಕ್ಷೆ ಯನ್ನು ರೈತರೇ ಮಾಡಬೇಕು. ರಾಜ್ಯದಲ್ಲಿ ಜಿಲ್ಲೆಯು ಸಮೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆ ಯುವುದರ ಜೊತೆಗೆ ಗುಣಾತ್ಮಕತೆಯಲ್ಲಿ ನಿಖರತೆ ಕಾಯ್ದುಕೊಳ್ಳಬೇಕು. ಸಮೀಕ್ಷೆ ಬಗ್ಗೆ ಮಾಹಿತಿ ನೀಡಲು ಪ್ರೈವೇಟ್ ರೆಸಿಡೆನ್ಸ್ ಅನ್ನು ನೇಮಿಸಲಾಗಿದ್ದು, ಇವರು ರೈತರಿಗೆ ಮಾರ್ಗ ದರ್ಶನ ನೀಡುವರು ಎಂದು ಮಾಹಿತಿ ನೀಡಿದರು. ಈ ವೇಳೆ ರೈತರು ಬೆಳೆದ ಬೆಳೆ ಮಾಹಿತಿ ಆ್ಯಪ್ ನಲ್ಲಿ ಕನ್ನಡದಲ್ಲಿ ಪ್ರದರ್ಶನವಾದರೆ ಅನುಕೂಲವಾಗುತ್ತದೆ ಹಾಗೂ ಗುತ್ತಿಗೆ ಪಡೆದು ಬೆಳೆ ಬೆಳೆದ ರೈತರಿಗೆ ಪರಿಹಾರ ದೊರೆತರೆ ಅನುಕೂಲವಾಗುತ್ತದೆ ಎಂದು ರೈತರು ಅಭಿಪ್ರಾಯಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರೂಪ ದೇವಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಗಾಯಿತ್ರಿ, ರೈತ ಸಂಘದ ಮುಖಂಡರಾದ ನಾರಾಯಣಗೌಡ, ನಳಿನಿ, ಮರಗಲ್ ಶ್ರೀನಿವಾಸ್ ಉಪಸ್ಥಿತರಿದ್ದರು.