ಮುಂಬಯಿ: ಒಂದಾನೊಂದು ಕಾಲದ ಐಪಿಎಲ್ ಬ್ಯಾಟಿಂಗ್ ಹೀರೋ ಪಾಲ್ ವಲ್ತಾಟಿ ಮಂಗಳವಾರ ಪ್ರಥಮ ದರ್ಜೆ ಕ್ರಿಕೆಟಿಗೆ ವಿದಾಯ ಹೇಳಿದರು.
ಅಗ್ರ ಕ್ರಮಾಂಕದ ಬಿಗ್ ಹಿಟ್ಟಿಂಗ್ ಬ್ಯಾಟರ್ ಆಗಿರುವ ಪಾಲ್ ವಲ್ತಾಟಿ 2006ರಲ್ಲಿ ಮುಂಬಯಿ ಪರ ಲಿಸ್ಟ್ ಎ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು. ಬಳಿಕ ಹಿಮಾಚಲ ಪ್ರದೇಶವನ್ನು ಪ್ರತಿನಿಧಿಸಿ 5 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು.
ಪಾಲ್ ವಲ್ತಾಟಿ ದೊಡ್ಡ ಹೀರೋ ಆದದ್ದು 2011ರ ಐಪಿಎಲ್‌ನಲ್ಲಿ. ಆಗ ಇವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸದಸ್ಯ. ಮೊಹಾಲಿಯಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ 189 ರನ್ ಚೇಸ್ ಮಾಡಬೇಕಾದ ಒತ್ತಡದಲ್ಲಿದ್ದ ಪಂಜಾಬ್, ವಲ್ತಾಟಿ ಅವರ ಸೂಪರ್ ಸೆಂಚುರಿ ಸಾಹಸದಿಂದ 6 ವಿಕೆಟ್ ಜಯಭೇರಿ ಮೊಳಗಿಸಿತ್ತು. ಆ್ಯಡಂ ಗಿಲ್‌ಕ್ರಿಸ್ಟ್ ಜತೆ ಆರಂಭಿಕನಾಗಿ ಇಳಿದ ವಲ್ತಾಟಿ 63 ಎಸೆತಗಳಿಂದ ಅಜೇಯ 120 ರನ್ ಬಾರಿಸಿ ಪಂಜಾಬ್ ತಂಡದ ಜಯಭೇರಿ ಮೊಳಗಿಸಿದ್ದರು. ಅಂದಿನ ಬ್ಯಾಟಿಂಗ್ ಅಬ್ಬರದ ವೇಳೆ ಸಿಡಿಸಿದ್ದು 19 ಬೌಂಡರಿ ಹಾಗೂ 2 ಸಿಕ್ಸರ್.
ಬ್ರೇಕ್ ಸಿಗಲಿಲ್ಲ
ಈ ಸಾಧನೆಯ ಹೊರತಾಗಿಯೂ ಪಾಲ್ ವಲ್ತಾಟಿ ಅವರಿಗೆ ದೊಡ್ಡ ಬ್ರೇಕ್ ಒದಗಿ ಬರಲಿಲ್ಲ. 2013ರ ಬಳಿಕ ಇವರನ್ನು ಕೊಳ್ಳುವವರೇ ಇರಲಿಲ್ಲ. 2009ರಲ್ಲಿ ವಲ್ತಾಟಿ ರಾಜಸ್ಥಾನ್ ರಾಯಲ್ಸ್ ಪರವಾಗಿಯೂ ಆಡಿದ್ದರು.
ಪಾಲ್ ವಲ್ತಾಟಿ 2002ರ ಅಂಡರ್-19 ವಿಶ್ವಕಪ್ ತಂಡದ ಸದಸ್ಯನೂ ಆಗಿದ್ದರು. ಪಾರ್ಥಿವ್ ಪಟೇಲ್, ಇರ್ಫಾನ್ ಪಠಾಣ್ ಅವರೆಲ್ಲ ಈ ತಂಡದಲ್ಲಿದ್ದರು. ಆದರೆ ಬಾಂಗ್ಲಾದೇಶ ವಿರುದ್ಧ ಆಡುತ್ತಿದ್ದಾಗ ಚೆಂಡು ಕಣ್ಣಿಗೆ ಬಡಿದ ಕಾರಣ ಹಿನ್ನಡೆಯಾಯಿತು. ಮುಂಬಯಿ ತಂಡವನ್ನು ಸೇರಲು 2006ರ ತನಕ ಕಾಯಬೇಕಾಯಿತು.