“ಅಭಿಮಾನ ತೋರುವ ಅಭಿಮಾನಿ ಸ್ನೇಹಿತರೇ ನನ್ನ ಖಾತೆಯಲ್ಲಿರುವ ನಿಜವಾದ ಸಂಪತ್ತು. ಅದನ್ನ ನೋಡುತ್ತಿದ್ದಾಗಲೆಲ್ಲ ಮನಸ್ಸಿಗೆ ಖುಷಿ ಸಿಗುತ್ತೆ. ಹಾಗಾಗಿಯೇ ನಾನು ಸಂಪಾದಿಸಿರುವ ಅಭಿಮಾನಿ ಸಂಪತ್ತನ್ನ ಮತ್ತೆ ಮತ್ತೆ ನೋಡಲು ನಿಮ್ಮೊಂದಿಗೆ ಬೆರೆಯುತ್ತೇನೆ’ ಇದು ನಟ ಕಿಚ್ಚ ಸುದೀಪ್ ತನ್ನ ಅಭಿಮಾನಿಗಳ ಮುಂದೆ ಹಂಚಿಕೊಂಡಿರುವ ಮನದ ಮಾತು.
ಕೋವಿಡ್ ಸಂಕಷ್ಟದಿಂದಾಗಿ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಚಿತ್ರಗಳ ಚಿತ್ರೀಕರಣ, ಪ್ರಚಾರ, ಪ್ರದರ್ಶನ ಹೀಗೆ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಇದರಿಂದಾಗಿ ಸಹಜವಾಗಿಯೇ ಸಿನಿಪ್ರಿಯರು ತಮ್ಮ ನೆಚ್ಚಿನ ನಟರನ್ನ, ನಟರು ತಮ್ಮ ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈಗ ಇದೆಲ್ಲದಕ್ಕೂ ಉತ್ತರ ಕಂಡುಕೊಳ್ಳಲು ಹೊರಟಿರುವ ನಟ ಸುದೀಪ್, ಆನ್‌ಲೈನ್ ವೇದಿಕೆಯನ್ನು ತಮ್ಮ ಅಭಿಮಾನಿಗಳ ಜೊತೆ ಸಂಪರ್ಕಿಸಲು ಬಳಸಲು ಮುಂದಾಗಿದ್ದಾರೆ. ಅದರ ಮೊದಲ ಹಂತವಾಗಿ, ತಮ್ಮ “ಕಿಚ್ಚ ಕ್ರಿಯೇಷನ್ಸ್’ ವತಿಯಿಂದ ಇತ್ತೀಚೆಗೆ ವೆಬಿನಾರ್ ಮೂಲಕ ಸುದೀಪ್, ಅಭಿಮಾನಿಗಳ ಮುಂದೆ ಹಾಜರಾಗಿದ್ದರು. ಇದೇ ವೇಳೆ ವೆಬಿನಾರ್‌ನಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸಿದ ಸುದೀಪ್‌ಗೆ, ಕಿರಿಯ ಅಭಿಮಾನಿಗಳಿಂದ ಹಿಡಿದು ಹಿರಿಯ ಅಭಿಮಾನಿಗಳವರೆಗೆ ನೂರಾರು ಪ್ರಶ್ನೆಗಳು ಎದುರಾದವು. ಅದೆಲ್ಲದಕ್ಕೂ ಸುದೀಪ್ ಎಂದಿನಂತೆ ತಮ್ಮದೇ ಧಾಟಿಯಲ್ಲಿ ನಿರಾಳವಾಗಿ ಉತ್ತರಿಸಿದರು.
“ರಂಗ ಎಸ್‌ಎಸ್‌ಎಲ್‌ಸಿ, ಪೈಲ್ವಾನ್ ಸಿನಿಮಾಗಳು ನನ್ನ ಸಿನಿಪಯಣದಲ್ಲಿ ಕಷ್ಟ ಎನಿಸಿದ ಚಿತ್ರಗಳು.ಹಿಂದೆ ಕ್ಯಾಮೆರಾ ಎಂದರೆ ಭಯ ಇರಲಿಲ್ಲ. ಸೆಟ್‌ನಲ್ಲಿ ಕೂಡಿರುವ ವಾತಾವರಣ ಹಾಗೂ ಜನರ ಮೇಲೆ ಕ್ಯಾಮೆರಾದೊಂದಿಗೆ ನನ್ನ ನಂಟು ನಿರ್ಧಾರವಾಗುತ್ತದೆ. ವರ್ಕೌಟ್ ಮಾಡಿದಾಗ ಆತ್ಮವಿಶ್ವಾಸ ಹೆಚ್ಚುತ್ತದೆ’ ಎಂದ ಸುದೀಪ್, “ಹಲವಾರು ಪ್ರಶಸ್ತಿಗಳನ್ನ ಅಭಿಮಾನಿ ದೇವರುಗಳು ಸದಾ ಕರುಣಿಸುತ್ತಿರುತ್ತಾರೆ. ಇದಕ್ಕಿಂತ ಮಿಗಿಲಾದ ಪ್ರಶಸ್ತಿಗಳು ಯಾವುದೂ ಇಲ್ಲ’ ಎಂದು ಅಭಿಮಾನಿಯೊಬ್ಬರ ಪ್ರಶ್ನೆಗೆ ನಸುನಗುತ್ತ ಉತ್ತರಿಸಿದರು.
“ಪಾಪ್ಯುಲರ್ ಆಗುವುದಕ್ಕಾಗಿ ಚಿತ್ರರಂಗಕ್ಕೆ ಬರುವುದು ತಪ್ಪಾಗುತ್ತದೆ. ಚಿತ್ರರಂಗಕ್ಕೆ ಕಾಲಿಡುವವರು ಏಳು-ಬೀಳು ಅನುಭವಿಸಲೇಬೇಕು. ಅವುಗಳನ್ನು ಯಾರ ಸಲಹೆಗಳಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಅಂಬೆಗಾಲಿಗೆ ಅಡೆತಡೆ ಇದ್ದಾ ಗಲೇ ಮುಂದೆ ನಡೆಯುವ ಹಾದಿ ಸುಗಮ. ದಟ್ ಈಸ್ ಬ್ಯೂಟಿ ಆಫ್ ಲೈಫ್…’ ಎಂದು
ಚಿತ್ರರಂಗಕೆ ಕಾಲಿಡುತ್ತಿರುವ ಹೊಸಬರಿಗೆ ಸುದೀಪ್ ಕಿವಿಮಾತು ಹೇಳಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೃದ್ದ ಅಭಿಮಾನಿಯೊಬ್ಬರು ಸುದೀಪ್ ಅವರಿಗೆ ತಗುಲಿದ ದೃಷ್ಟಿ ತೆಗೆದ ಪರಿಯನ್ನು ಕಂಡ ಸುದೀಪ್ ಭಾವುಕರಾದರು. ಅಲ್ಲದೆ ಮುಂದಿನ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುವಂತೆ ಅಭಿಮಾನಿಗೆ ಆಹ್ವಾನವನ್ನೂ ನೀಡಿದರು.
“ಕೋವಿಡ್ ತಂದೊಡ್ಡಿರುವ ಈಗಿನ ಪರಿಸ್ಥಿತಿ, ನಮ್ಮನ್ನು ಬಿಗ್‌ಬಾಸ್‌ನಂತೆ ಕೂಡಿ ಹಾಕಿದೆ. ಇದಕ್ಕೆ ಯಾವುದೇ ಬೇರೆ ಮಾರ್ಗಗಳಿಲ್ಲ. ಎಲ್ಲರೂ ಮನೆಯಲ್ಲೇ ಇರಿ. ಸುರಕ್ಷಿತವಾಗಿರಿ’ ಎಂದು ಮಾತಿಗೆ ತೆರೆ ಎಳೆದರು. ಒಟ್ಟಾರೆ ಕೋವಿಡ್ ಲಾಕ್‌ಡೌನ್ ವೇಳೆಯಲ್ಲಿ ಸುದೀಪ್ ಮಾಡಿದ ಇಂಥದ್ದೊಂದು ಕಾರ್ಯಕ್ರಮ ಅವರ ಅಭಿಮಾನಿಗಳಿಗೆ ಒಂದಷ್ಟು ಖುಷಿ, ಜೋಶ್ ನೀಡಿದ್ದಂತೂ ಸುಳ್ಳಲ್ಲ.