Advertisement

ಮಂಗಳೂರು : ಅಭಿವೃದ್ಧಿಯ ಹಿನ್ನೆಲೆಯಲ್ಲಿ ಮರೆಯಾಗುತ್ತಿವೆ ವೃತ್ತಗಳು!

11:57 AM Feb 19, 2022 | Team Udayavani |

ಮಹಾನಗರ: ಮಂಗಳೂರಿನ ಕೆಲವೊಂದು ಪ್ರದೇಶ ವೃತ್ತಗಳ ಹೆಸರಿನಿಂದಲೇ ಗುರುತಿಸಿಕೊಂಡಿದೆ. ಆದರೆ ಕಾಲ ಸರಿದಂತೆ ಅಭಿವೃದ್ಧಿಯ ದೃಷ್ಟಿಯಲ್ಲಿ ನಗರದ ಕೆಲವೊಂದು ವೃತ್ತಗಳು ಸದ್ಯ ಮರೆಯಾಗಿವೆ. ಆದರೂ ಒಂದು ಕಾಲದ ಹೆಗ್ಗುರಿನಂತಿದ್ದ ವೃತ್ತಗಳ ಹೆಸರು ಮಾತ್ರ ಇನ್ನೂ ಹಸನಾಗಿದೆ.

Advertisement

ಪಂಪ್‌ವೆಲ್‌ ಮಹಾವೀರ ವೃತ್ತ
ಭಗವಾನ್‌ ಶ್ರೀ ಮಹಾವೀರ ಸ್ವಾಮಿಯ 2600ನೇ ಜನ್ಮ ಕಲ್ಯಾಣೋತ್ಸವವನ್ನು ರಾಷ್ಟ್ರಾದ್ಯಂತ 2001ರಿಂದ 2002ರ ವರೆಗೆ ಆಚರಿಸಲು ಕೇಂದ್ರ ಸರಕಾರ ನಿರ್ಧರಿಸಿತ್ತು.
ಅದರಂತೆ ಪಂಪ್‌ವೆಲ್‌ ವೃತ್ತಕ್ಕೆ “ಮಹಾವೀರ ವೃತ್ತ’ ಎಂದು ನಾಮಕರಣ ಮಾಡಲಾಗಿತ್ತು. ಅನಂತರ ಜೈನ್‌ ಸೊಸೈಟಿ, ಜೈನ ಸಮಾಜ ಸೇರಿಕೊಂಡು 43 ಸೆಂಟ್ಸ್‌ ಜಾಗದಲ್ಲಿ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಸುಂದರ ಮಹಾವೀರ ಸರ್ಕಲ್‌, ಮಂಗಲ ಕಲಶವನ್ನು ಇಲ್ಲಿ ನಿರ್ಮಾಣ ಮಾಡಿದರು. 2003ರಲ್ಲಿ ಇದರ ಕಾಮಗಾರಿ ಆರಂಭವಾಗಿ, 6 ತಿಂಗಳುಗಳ ಬಳಿಕ, ಮಹಾವೀರ ಸರ್ಕಲ್‌, ಕಲಶದ ಉದ್ಘಾಟನೆ ನೆರವೇರಿತ್ತು. ಕಲಶದ ತೂಕ 20 ಟನ್‌ ಇತ್ತು. ಆದರೆ ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಉದ್ದೇಶಕ್ಕೆ ಎಂಟು ವರ್ಷಗಳ ಹಿಂದೆ ಈ ವೃತ್ತವನ್ನು ಕೆಡಹಲಾಗಿತ್ತು. ಬಳಿಕ ನಿರ್ಮಾಣವಾಗಿಲ್ಲ.

ಮಂಗಳೂರಿಗೆ “ಐಲ್ಯಾಂಡ್‌’
ನಗರದಲ್ಲಿ ವೃತ್ತಗಳ ಬದಲು ಟ್ರಾಫಿಕ್‌ ಐಲ್ಯಾಂಡ್‌ ನಿರ್ಮಾಣಕ್ಕೆ ಒಲವು ತೋರಲಾಗುತ್ತಿದೆ. ಇದು ನಗರದ ದೃಷ್ಟಿಕೋನದಲ್ಲಿ ಹೊಸ ಪರಿಕಲ್ಪನೆ. ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ದ್ವೀಪಗಳ ಮಾದರಿಯನ್ನು ನಿರ್ಮಾಣ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಇದರಿಂದಾಗಿ ಲೇನ್‌ಗಳಲ್ಲಿ ವಾಹನಗಳು ವ್ಯವಸ್ಥಿತವಾಗಿ ಸಂಚರಿಸಲು ಸಹಾಯವಾಗುತ್ತದೆ. ಇದಕ್ಕೆ ವೃತ್ತದಷ್ಟು ಸ್ಥಳಾವಕಾಶ ಬೇಕಿಲ್ಲದ ಕಾರಣ ಸರಾಗವಾಗಿ ವಾಹನಗಳು ತಿರುವು ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಹೊಸ ಸ್ವರೂಪದ ಟ್ರಾಫಿಕ್‌ ಐಲ್ಯಾಂಡ್‌ನ‌ಲ್ಲಿ ಹಚ್ಚ ಹಸುರು ಕಂಗೊಳಿಸುವಂತೆ ಲಾನ್‌, ಬೀದಿ ದೀಪ ಸಹಿತ ಸ್ಮಾರ್ಟ್‌ಪೋಲ್‌ವÂವಸ್ಥೆಗಳನ್ನು ಅಳವಡಿಸಲಾಗುತ್ತದೆ.

ಎ.ಬಿ. ಶೆಟ್ಟಿ ವೃತ್ತ
ನಗರದ ಹೆಗ್ಗುರುತಿನಂತಿದ್ದ ಎ.ಬಿ. ಶೆಟ್ಟಿ ವೃತ್ತವನ್ನು ಕೆಲವು ತಿಂಗಳ ಹಿಂದೆ ಕೆಡಹಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಗರದ ಕ್ಲಾಕ್‌ಟವರ್‌ನಿಂದ ಸ್ಟೇಟ್‌ಬ್ಯಾಂಕ್‌ಗೆ ಹೋಗುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ವೃತ್ತವನ್ನು ಕೆಡಹಲಾಗಿದೆ. ಎ.ಬಿ. ಶೆಟ್ಟಿ (ಅತ್ತಾವರ ಬಾಲಕೃಷ್ಣ ಶೆಟ್ಟಿ) ಅವರು ಮೂಲ್ಕಿ ದೊಡ್ಡಮನೆಯಲ್ಲಿ ಜನಿಸಿದ್ದು, ಕೆನರಾ ಮತ್ತು ಸರಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ರಾಜಕೀಯ ರಂಗ, ಶಿಕ್ಷಣ, ಬ್ಯಾಂಕಿಂಗ್‌, ಆಡಳಿತ, ಸಾಮಾಜಿಕ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದರು. ಬಂಟ್ಸ್‌ಹಾಸ್ಟೆಲ್‌ನಲ್ಲಿ ಅವರ ಹೆಸರಿನ ಸಭಾಭವನ, ನಿಟ್ಟೆ ಶಿಕ್ಷಣ ಸಮೂಹ ಸಂಸ್ಥೆಯಿಂದ ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ವೈದ್ಯಕೀಯ ಆಸ್ಪತ್ರೆ ಮುಂತಾದುವುಗಳಿವೆ. ಕೆಲವು ತಿಂಗಳುಗಳ ಹಿಂದೆ ಎ.ಬಿ. ಶೆಟ್ಟಿ ಸರ್ಕಲ್‌ ತೆರವು ಮಾಡಲಾಗಿದೆ.

ರಾವ್‌ ಆ್ಯಂಡ್‌ ರಾವ್‌ ವೃತ್ತ
ರಾವ್‌ ಆ್ಯಂಡ್‌ ರಾವ್‌ ವೃತ್ತಕ್ಕೆ ಅನೇಕ ವರ್ಷಗಳ ಇತಿಹಾಸವಿದೆ. ಟೆಲಿಗ್ರಾಫ್‌, ಪೋಸ್ಟಲ್‌ನಲ್ಲಿ ಹಲವಾರು ವರ್ಷಗಳ ಹಿಂದೆಯೇ ರಾವ್‌ ಆ್ಯಂಡ್‌ ರಾವ್‌ ವೃತ್ತ ಎಂದು ನಮೂದಾಗಿತ್ತು. ಈ ಪ್ರದೇಶಕ್ಕೆ 1996ರಲ್ಲಿ ಅಧಿಕೃತ ಹೆಸರು ಇಡುವ ಪ್ರಸ್ತಾವ ಬಂತು. ನಗರದ ಪ್ರಮುಖರ ನಿರ್ಣಯದಂತೆ ರಾವ್‌ ಆ್ಯಂಡ್‌ ರಾವ್‌ ಎಂದು ಹೆಸರಿಡಲು ನಿರ್ಧರಿಸಲಾಯಿತು. ಈಗ ವೃತ್ತ ಇದ್ದ ಪ್ರದೇಶದ ಎದುರು ಈ ಹಿಂದೆ ರಾವ್‌ ಆ್ಯಂಡ್‌ ರಾವ್‌ ಎಂಬ ಹೆಸರಿನ ಆಟೋಮೊಬೈಲ್‌ ಶಾಪ್‌ ಇತ್ತು. ಪಿ. ಹರಿಶ್ಚಂದ್ರ ರಾವ್‌, ವೆಂಕಟ ರಾವ್‌ ಅವರು ಪಾಲುದಾರರಾಗಿ ಆ ಸಂಸ್ಥೆ ನಡೆಸುತ್ತಿದ್ದರು. ಈ ಸಂಸ್ಥೆ ಇರುವ ಪ್ರದೇಶವಾದ ಕಾರಣ ವೃತ್ತಕ್ಕೂ ರಾವ್‌ ಆ್ಯಂಡ್‌ ರಾವ್‌ ಎಂಬ ಹೆಸರಿಡಲು ನಿರ್ಧರಿಸಲಾಯಿತು.

Advertisement

ಹ್ಯಾಮಿಲ್ಟನ್‌ ವೃತ್ತ
ಮಂಗಳೂರು ಮತ್ತು ದೂರದ ಕೆನಡಾ ದೇಶದ ಪ್ರಮುಖ ಪಟ್ಟಣ ಹ್ಯಾಮಿಲ್ಟನ್‌ ನಡುವಿನ ಬಾಂಧವ್ಯದ ಸಂಕೇತದಂತೆ ಸ್ಟೇಟ್‌ಬ್ಯಾಂಕ್‌ ಬಳಿಯ ಜಿಲ್ಲಾಧಿಕಾರಿ ಕಚೇರಿ ಹತ್ತಿರ ಹ್ಯಾಮಿಲ್ಟನ್‌ ವೃತ್ತ ಇತ್ತಿ. ಸುಮಾರು ನಾಲ್ಕು ದಶಕಗಳ ಹಿಂದೆ ಕೆನಡಾದ ಹ್ಯಾಮಿಲ್ಟನ್‌ ಮೇಯರ್‌ ಮಂಗಳೂರಿಗೆ ಆಗಮಿಸಿದ್ದರು. ಆ ಸಂದರ್ಭ ಇಲ್ಲಿನ ಪರಿಸರ, ಹವಾಮಾನ, ಪ್ರಕೃತಿಯ ಸೊಬಗು ಹ್ಯಾಮಿಲ್ಟನ್‌ ಮಾದರಿಯಲ್ಲಿ ಇರುವುದನ್ನು ಕಂಡು ಮಂಗಳೂರು ಮತ್ತು ಹ್ಯಾಮಿಲ್ಟನ್‌ ಮಾದರಿಯಲ್ಲೇ ಇರುವುದನ್ನು ಕಂಡು ಬೆರಗುಗೊಂಡಿದ್ದರು. ಆ ಧೊÂàತಕದಂತೆ ಈ ವೃತ್ತ ನಿರ್ಮಾಣಗೊಂಡಿತ್ತು. ಸ್ಟೇಟ್‌ಬ್ಯಾಂಕ್‌ ವೃತ್ತ ಎಂದು ಪ್ರಸಿದ್ಧಿಯಾಗಿರುವ ಹ್ಯಾಮಿಲ್ಟನ್‌ ಸರ್ಕಲ್‌ ಅನ್ನು ಸ್ಮಾರ್ಟ್‌ಸಿಟಿಯ ಯೋಜನೆಯಲ್ಲಿ ಅಭಿವೃದ್ಧಿ ಉದ್ದೇಶದಿಂದ ಇತ್ತೀಚೆಗೆಯಷ್ಟೇ ಕೆಡಹಲಾಗಿದೆ.

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next