Advertisement
ಹಂಪಿ ವಿರೂಪಾಕ್ಷೇಶ್ವರ ಹಾಗೂ ಚಂದ್ರಮೌಳೇಶ್ವರ ಬ್ರಹ್ಮ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಸಲು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಈಗಾಗಲೇ ಸಿದ್ಧತೆ ಕೈಗೊಂಡಿದೆ. ಕೊರೊನಾ ಪ್ರಕರಣ ಸಂಖ್ಯೆ ಕಡಿಮೆ ಆಗಿರುವುದರಿಂದ ಈ ಬಾರಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ ಇದೆ. ಹಂಪಿ ವಿದ್ಯಾರಣ್ಯ ಮಠದ ಪೀಠಾಧಿಪತಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಗಳ ಆಜ್ಞಾನುಸಾರ ರಥೋತ್ಸವ ನಡೆಯಲಿದ್ದು, ವಿರೂಪಾಕ್ಷ ಬಜಾರ್‌ನ ಶೆಡ್‌ನಲ್ಲಿದ್ದ ಜೋಡಿ ರಥಗಳನ್ನು ಕ್ರೇನ್ ಸಹಾಯದಿಂದ ಇತ್ತೀಚೆಗೆ ಹೊರ ತಂದು, ರಥವನ್ನು ಅಣಿಗೊಳಿಸಲಾಗುತ್ತಿದೆ. ಅಮಾವಾಸ್ಯೆ ಕಳೆದ ಮರುದಿನ ರಥಕ್ಕೆ ರಥಜೋಡಣೆ ಕಾರ್ಯ ಚುರುಕುಗೊಳ್ಳಲಿದೆ.
Related Articles
Advertisement
ಏ.11ರಂದು ಸೋಮವಾರ ಸಿಂಹವಾಹನೋತ್ಸವ, ಚಂದ್ರಮಂದಲೋತ್ಸವ, ಏ.12ರಂದು ಮಂಗಳವಾರ ಸೂರ್ಯಪ್ರಭ ವಾಹನೋತ್ಸವ, ಶೇಷ ವಾಹನೋತ್ಸವ, ಏ.13ರಂದು ಬುಧವಾರ ಶೇಷ ವಾಹನೋತ್ಸವ, ಪುಷ್ಕಮಂಟಪ ವಾಹನೋತ್ಸವ ಏ.14ರಂದು ಗುರುವಾರ ಬೆಳಗ್ಗೆ 9.30ಕ್ಕೆ ಪುಷ್ಪ ಮಂಟಪ ವಾಹನೋತ್ಸವ ಜೊತೆಗೆ ವಿರೂಪಾಕ್ಷ ವಿದ್ಯಾರಣ್ಯ ಪ್ರಪಥಮ ಪೀಠಾಧಿಧೀಶ್ವರರಾಗಿದ್ದ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳ ಜಯಂತಿ ಆಚರಣೆ ನಡೆಯಲಿದೆ. ರಾತ್ರಿ 9ಕ್ಕೆ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿ ಅವರ ಕಲ್ಯಾಣೋತ್ಸವ ಹಾಗೂ ರಜತ ನಂದಿವಾಹನೋತ್ಸವ ನಡೆಯಲಿದೆ. ಏ.15ರಂದು ಗಜವಾಹನೋತ್ಸವ ಹಾಗೂ ಏ.16ರಂದು ಬ್ರಹ್ಮರಥೋತ್ಸವ ನಡೆಯಲಿದೆ.
ಸುವರ್ಣ ಕೀರಿಟ ಅಲಂಕಾರ
ವಿಜಯನಗರ ಸಾಮ್ರಾಜ್ಯದ ಪ್ರಖ್ಯಾತ ಆರಸ ಶ್ರೀ ಕೃಷ್ಣದೇವರಾಯರು, ತಮ್ಮ ಪಟ್ಟಾಭಿಷೇಕ ಸಮಯದಲ್ಲಿ ವಿರೂಪಾಕ್ಷಿಗೆ ಕಾಣಿಕೆಯಾಗಿ ಸಲ್ಲಿಸಿದ ಸುವರ್ಣ, ರತ್ನ ಖಚಿತ ಮುಖ ಕೀರಿಟವನ್ನು ವಿರೂಪಾಕ್ಷೇಶ್ವರ ಸ್ವಾಮಿ ಪ್ರತಿಮೆಗೆ ತೊಡಿಸಿ, ಅಲಂಕಾರ ಮಾಡಲಾಗುವುದು.
ಜಾತ್ರೆಗೆ ಭಕ್ತ ಸಾಗರ
ಕಳೆದ ಎರಡು ವರ್ಷದಿಂದ ಹಂಪಿ ಜಾತ್ರಾ ಮಹೋತ್ಸವ ಸ್ಥಗಿತಗೊಂಡಿದ್ದರಿಂದ ಈ ವರ್ಷ ಲಕ್ಷಾಂತರ ಭಕ್ತರು, ಹಂಪಿ ಬ್ರಹ್ಮರಥೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ವಾಡಿಕೆಯಂತೆ ಹಂಪಿ ಜಾತ್ರಾ ಪ್ರಯುಕ್ತ ಆಂಧ್ರ, ಮಹಾರಾಷ್ಟ್ರ ಸೇರಿದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ರಾಜ್ಯದ ಮೂಲೆ, ಮೂಲೆಗಳಿಂದ ಭಕ್ತರು, ಹಂಪಿಗೆ ಆಗಮಿಸಲಿದ್ದಾರೆ.
ವ್ಯಾಪಾರಿಗಳ ಬಿಡಾರ
ಜಾತ್ರೆಯಲ್ಲಿ ವ್ಯಾಪಾರ-ವಹಿವಾಟು ನಡೆಸಲು, ವ್ಯಾಪಾರಸ್ಥರು, ಯುಗಾದಿ ಹಬ್ಬವಾದ ಬಳಿಕ ಹಂಪಿಯಲ್ಲಿ ಬಿಡಾರ ಹೂಡಲಿದ್ದಾರೆ. ವಿರೂಪಾಕ್ಷ ರಥ ಬೀದಿಯ ಎರಡು ಬದಿಯಲ್ಲಿ ಹೂ-ಹಣ್ಣು, ಮೀಟಾಯಿ ಅಂಗಡಿ, ಪೂಜಾ ಸಾಮಾಗ್ರಿಗಳ ಅಂಗಡಿಗಳು ಸೇರಿದಂತೆ ವಿವಿಧ ಅಂಗಡಿ-ಮುಂಗಟ್ಟುಗಳು ತಲೆ ಎತ್ತಲಿವೆ.
ಜಾತ್ರೆಗೆ ಮೊದಲೇ ಭಕ್ತರು
ಜಾತ್ರಾ ಮಹೋತ್ಸವದ ನಾಲ್ಕಾರು ದಿನಗಳ ಮುನ್ನವೇ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಭಕ್ತರು, ಹಂಪಿಗೆ ಆಗಮಿಸಲಿದ್ದಾರೆ. ಪರಿವಾರ ಸಮೇತ ಹಂಪಿಯಲ್ಲಿ ವಾಸ್ತವ್ಯ ಹೂಡಿ, ಸ್ಥಳದಲ್ಲಿ ರುಚಿರುಚಿಯಾದ ಊಟ ಸಿದ್ಧಪಡಿಸಿ, ಸಹಭೋಜನ ಮಾಡಲಿದ್ದಾರೆ.
ಮೂಲ ಸೌಲಭ್ಯ ಕೊರತೆ
ಹಂಪಿಯಲ್ಲಿ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿರುವುದರಿಂದ ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅತೀವ ತೊಂದರೆಯಾಗಲಿದೆ. ಶೌಚಾಲಯ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೇಂದ್ರ ಹಾಗೂ ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಹಂಪಿ ವಿಶ್ವಪರಂಪರೆ ನಿರ್ವಾಹಣಾ ಪ್ರಾ ಧಿಕಾರ ಹಾಗೂ ಹಂಪಿ ಗ್ರಾಮ ಪಂಚಾಯ್ತಿ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸ್ಥಳೀಯರ ಆಗ್ರಹ ಕೊರೊನಾ ಹಿನ್ನೆಲೆಯಲ್ಲಿ
ಕಳೆದ ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ಹಂಪಿ ಬ್ರಹ್ಮರಥೋತ್ಸವ ಏ.16ರಂದು ನಡೆಯಲಿದೆ. ಇದಕ್ಕಾಗಿ ಜೋಡಿ ರಥಗಳನ್ನು ಅಣಿಗೊಳಿಸಲಾಗುತ್ತಿದೆ. ಪ್ರಕಾಶ್ ರಾವ್, ಆಯುಕ್ತರು, ಹಿಂದೂ ಮತ್ತು ಧಾರ್ಮಿಕ ಇಲಾಖೆ, ವಿಜಯನಗರ
ಕಳೆದ ಎರಡು ವರ್ಷದಿಂದ ಹಂಪಿ ಜಾತ್ರೆ ಸ್ಥಗಿತವಾಗಿದ್ದರಿಂದ ಈ ಬಾರಿ ಹಂಪಿ ಜಾತ್ರಾ ನಡೆಯುವ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ, ಮೂಲೆಗಳಿಂದ ಭಕ್ತರು ರಥೋತ್ಸವಕ್ಕೆ ಆಗಮಿಸುವ ಸಾಧ್ಯತೆ ಇದೆ. ವಿರೂಪಾಕ್ಷಿ, ಗೈಡ್, ಹಂಪಿ.
-ಪಿ.ಸತ್ಯನಾರಾಯಣ