Advertisement

Rajendra Babu: ನಟರಿಗೆ ಪ್ಯಾನ್‌ ಇಂಡಿಯಾ ಭೂತ ಹಿಡಿದಿದೆ: ಬಾಬು

10:31 AM Dec 24, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಇವತ್ತು ಪುಸ್ತಕ ಆಧಾರಿತ ಕತೆ ಹೇಳಲು ಹೋದರೆ ನಟರು ಮನೆಗೆ ಸೇರಿಸೊಲ್ಲ. ಅವರಿಗೆ ಪ್ಯಾನ್‌ ಇಂಡಿಯಾ, ಪ್ಯಾನ್‌ ಇಂಡಿಯಾ ಎಂಬ ಯಾವುದೋ ಭೂತ ಹಿಡಿದುಕೊಂಡು ಬಿಟ್ಟಿದೆ ಎಂದು ಖ್ಯಾತ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಸರ್ಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ನಾಡೋಜ ಡಾ.ಬರಗೂರು ಪ್ರತಿಷ್ಠಾನ ಕೊಡ ಮಾಡುವ 2023ನೇ ಸಾಲಿನ ನಾಡೋಜ ಬರಗೂರು ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು. ಇಲ್ಲಿನ ಸಂಸ್ಕೃತಿ, ಇಲ್ಲಿನ ಮಣ್ಣಿನ ಸೊಗಡಿನ ಎಂತೆಂತಹ ಕಥೆಗಳು ನಮ್ಮಲ್ಲಿವೆ. ಆದರೆ, ಆ ಕಥೆಗಳನ್ನು ನಾವು ನಮ್ಮ ಜನರಿಗೆ ತಲುಪಿಸುತ್ತಿಲ್ಲ. ನಾವು ಯಾವು ದೋ ಬೇರೆ ಭಾಷೆಯ ಮೊರೆ ಹೋಗಿ ನಮ್ಮ ಜನರ ದಾರಿ ತಪ್ಪಿಸುತ್ತಿವೆಯೇನೋ ಅನಿಸುತ್ತಿದೆ ಎಂದು ಹೇಳಿದರು. ಕೊನೆಗೆ ಯಾವ ನಟನೂ ಗೆಲ್ಲಲ್ಲ, ಗೆಲ್ಲೊದು ಕತೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕನ್ನಡದ ಕತೆಯನ್ನು ಕದ್ದು ಸಿನಿಮಾ ಮಾಡಲಾಗುತ್ತಿದೆ. ಬಾಹುಬಲಿ ಸಿನಿಮಾದ ಕತೆಯನ್ನು ರಾಜ್‌ ಕುಮಾರ್‌ ಅವರ ಸಿನಿಮಾದ ಕತೆಗಳಿಂದ ಕದ್ದು ಮಾಡಲಾಗಿದೆ. ಕನ್ನಡದ ಕತೆಗೆ, ಸಿನಿಮಾಗಳಿಗೆ ಬ್ರಷ್‌ ಹಿಡಿದು ಹೊಸ ಬಣ್ಣ ಬಳಿದು ಹೊಸ ಫ್ರೇಮಿನಲ್ಲಿ ಕೂರಿಸಿ ಸಿನಿಮಾ ಮಾಡುತ್ತಿದ್ದಾರೆ. ಜನ ಅದನ್ನೇ ಅದ್ಭುತ ಕತೆ ಎಂದು ಕೊಂಡಾಡುತ್ತಿದ್ದಾರೆ ಎಂದು ತಿಳಿಸಿದರು.

ನಾವು ಎಲ್ಲ ನಟರು, ನಿರ್ಮಾಪಕರು, ನಿರ್ದೇಶಕರು ಕನ್ನಡದ ಕತೆಗಳನ್ನು, ಕಾದಂಬರಿಗಳನ್ನು ಮತ್ತೆ ನಾವು ಜನರಿಗೆ ಒಪ್ಪಿಸಿದರೆ ಕನ್ನಡದ ಜನ ಖಂಡಿತ ಮೆಚ್ಚಿಕೊಳ್ಳುತ್ತಾರೆ. ಕನ್ನಡದಲ್ಲಿ ಉತ್ತಮವಾದ ಸಾಹಿತಿಗಳು, ಬರಹಗಾರರು ಇದ್ದಾರೆ. ಸಾಹಿತ್ಯ ಮತ್ತು ಸಿನಿಮಾ ಪರಸ್ಪರ ಪೂರಕವಾಗಿರಬೇಕು. ಕನ್ನಡದಲ್ಲಿ ಒಳ್ಳೆಯ ಕತೆಗಳಿವೆ. ಕನ್ನಡ ಚಿತ್ರರಂಗದ ಇತಿಹಾಸ ನೋಡಿದರೆ ಪುಸ್ತಕಗಳು ಯಾವಾಗ ಸಿನಿಮಾ ಆಗಿದೆವೆಯೋ ಅಂತಹ ಚಿತ್ರಗಳು ಅತಿ ಹೆಚ್ಚು ಗಳಿಕೆ ಮಾಡಿರುವ ಸಿನಿಮಾಗಳಾಗಿದೆ ಎಂದು ಅವರು ಹೇಳಿದರು.

ಚಿತ್ರರಂಗದ ಉಳಿವಿಗೆ ಉದ್ಯಮಿಗಳು ಮುಂದೆ ಬರಬೇಕು : ಕನ್ನಡ ಸಿನಿಮಾ ರಂಗದ ಉಳಿವಿಗೆ ನಮ್ಮ ಬ್ಯುಸಿನೆಸ್‌ ಮೆನ್‌ಗಳು ಮುಂದೆ ಬರಬೇಕು. 5 ಸಾವಿರ ಕೋಟಿ ರೂ ತೆರಿಗೆ ಕಟ್ಟುವವರು 100 ಕೋಟಿ ರೂವನ್ನು ಸಿನಿಮಾ ರಂಗದ ಮೇಲೆ ಹೂಡಿಕೆ ಮಾಡಬೇಕು. ಕನ್ನಡ ಸಿನಿಮಾ ರಂಗ ಹೊಸ ಹೊಸ ಮಾರುಕಟ್ಟೆಯನ್ನು ಅನ್ವೇಷಣೆ ಮಾಡಬೇಕು. ಚೀನಾದಲ್ಲಿ 50 ಸಾವಿರ ಥಿಯೇಟರ್‌ ಗಳಿದ್ದು ಅಲ್ಲಿ ಕನ್ನಡ ಸಿನಿಮಾಗಳು ಓಡುವ ಅವಕಾಶವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

70ರ ದಶಕದಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಇಡೀ ಭಾರತೀಯ ಚಿತ್ರರಂಗ ಬೆಂಗಳೂರಿನಲ್ಲಿ ಇರುತ್ತಿತ್ತು. ಆದರೆ ಈಗ ಸ್ವಲ್ಪ ಗ್ರಹಣ ಬಂದಿದೆ. ಆ ಗ್ರಹಣವನ್ನು ತೊಲಗಿಸುವ ಕೆಲಸ ಮಾಡೋಣ. ಕನ್ನಡ ಸಿನಿಮಾ ರಂಗ ಮತ್ತು ಸಾಹಿತ್ಯ ರಂಗ ಒಟ್ಟಾಗಿ ಸೇತುವೆಯಂತೆ ಕೆಲಸ ಮಾಡಬೇಕು ಎಂದು ರಾಜೇಂದ್ರಸಿಂಗ್‌ ಬಾಬು ಅಭಿಪ್ರಾಯಪಟ್ಟರು.

Advertisement

ನಟಿ ಸುಧಾರಾಣಿ ಮಾತನಾಡಿ, ಬರಗೂರು ಪ್ರಶಸ್ತಿ ದೊರೆತಿರುವುದು ಸಂತೋಷ ಉಂಟು ಮಾಡಿದೆ. ಬರಗೂರು ರಾಮಚಂದ್ರಪ್ಪ ಅವರು ಕನ್ನಡ ಸಿನಿಮಾದಲ್ಲಿ ಹೊಂಗೆ ಮರ ಇದ್ದಂತೆ, ಅವರ ನೆರಳಿನಲ್ಲಿ ನಾವೆಲ್ಲಾ ತಂಪಾಗಿ ಇದ್ದೇವೆ ಎಂದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿದ್ವಾಂಸ ಹಂ.ಪ.ನಾಗರಾಜಯ್ಯ, ಬರಗೂರು ರಾಮಚಂದ್ರರು ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರಕ್ಕೆ ಅಭೂತಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ಸಾಹಿತ್ಯ ತನ್ನ ನಿಲುವನ್ನು ಕಳೆದುಕೊಳ್ಳುತ್ತಿರುವಂತಹ ಸಂಧ ರ್ಭದಲ್ಲಿ ಸಿನಿಮಾ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಗೈದವರನ್ನು ಗುರುತಿಸಿ ಬರಗೂರು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು

Advertisement

Udayavani is now on Telegram. Click here to join our channel and stay updated with the latest news.

Next