Advertisement
ಮಹಾನಗರದಲ್ಲಿ ಹಲವು ದಶಕಗಳಿಂದ ಎರಡು ಕಡೆ ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡುತ್ತಿತ್ತು. ಆದರೆ ಈ ಸಲ ಒಂದೇ ಸ್ಥಳದಲ್ಲಿ ಅದರಲ್ಲೂ ಮೊದಲೆರಡು ಸ್ಥಳ ನಿಗದಿ ಮಾಡಿ ಕೊನೆ ಘಳಿಗೆಯಲ್ಲಿ ಮತ್ತೂಂದು ಸ್ಥಳ ಅಂತಿಮಗೊಳಿಸಿದೆ.
Related Articles
Advertisement
ಮಳಿಗೆ ಸ್ಥಾಪಿಸುವಲ್ಲಿ ಗೊಂದಲ: ಪಟಾಕಿ ಅಂಗಡಿಗಳು ನಗರದಿಂದ ಹೊರ ಭಾಗದಲ್ಲಿ ಇರಬೇಕು. ಇಲ್ಲವೇ ಒಂದೇ ಕಡೆ ಇರಬೇಕೆಂಬ ನಿಯಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪಟಾಕಿ ಅಂಗಡಿ-ಮಳಿಗೆಗಳ ಸ್ಥಾಪನೆಗೆ ಒಂದು ವಾರಕ್ಕೂ ಮುಂಚೆ ಅನುಮತಿ ನೀಡಲೇ ಇಲ್ಲ.
ಸೂಪರ್ ಮಾರ್ಕೆಟ್ ಇಲ್ಲವೇ ಕನ್ನಡ ಭವನದಲ್ಲಿ ಮಾತ್ರ ಮಾರಾಟಕ್ಕೆ ಅನುಮತಿ ನೀಡಲಾಗುತ್ತದೆ ಎನ್ನುವುದಾಗಿ ಹೇಳಲಾಗಿತ್ತು. ನಂತರ ಈ ಎರಡು ಸ್ಥಳಗಳ ಬದಲು ವಿಜಯ ವಿದ್ಯಾಲಯ ಮೈದಾನ ಎಂದು ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಜಯ ವಿದ್ಯಾಲಯ ಮೈದಾನದಲ್ಲಿ ಮಳಿಗೆ ಸ್ಥಾಪನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಇದರ ನಡುವೆ ಜಿಲ್ಲಾಡಳಿತ ನಗರದ ಎಂಎಸ್‌ಕೆ ಮಿಲ್ ರಸ್ತೆಯ ಸರ್ಕಾರಿ ಐಟಿಐ ಕಾಲೇಜು ಮೈದಾನ ಎಂದು ಸ್ಥಳ ಅಂತಿಮಗೊಳಿಸಿತು.ಈ ಗೊಂದಲದ ನಡುವೆ ಪಟಾಕಿ ವ್ಯಾಪಾರಿಗಳು ಐಟಿಐ ಕಾಲೇಜು ಮೈದಾನದಲ್ಲಿ ಸೋಮವಾರದಿಂದ ಮಳಿಗೆ ಸ್ಥಾಪಿಸಲು ಮುಂದಾದರು. ಮಂಗಳವಾರ ಸಂಜೆ ಹೊತ್ತಿನವರೆಗೂ ಸಿದ್ಧತೆ ಮಾಡಿಕೊಳ್ಳಲು ಸಮಯ ಹಿಡಿಯಿತು. ಐಟಿಐ ಕಾಲೇಜು ಮೈದಾನದಲ್ಲಿ 37 ಮಳಿಗೆಗಳ ಸ್ಥಾಪನೆಗೆ ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ ಮಂಗಳವಾರ ರಾತ್ರಿ ಸಮಯದವರೆಗೂ ಎಲ್ಲ ಅಂಗಡಿಗಳು ಸ್ಥಾಪನೆ ಆಗಿರಲಿಲ್ಲ. ಕೆಲವು ಅಂಗಡಿಗಳು ಆರಂಭವಾಗಿದ್ದರೂ ಖರೀದಿಗೆ ಸಾರ್ವಜನಿಕರು ನಿರೀಕ್ಷಿತ ಮಟ್ಟದಲ್ಲಿ ಖರೀದಿಗೆ ಬಾರದಿರುವುದು ಮತ್ತೂಂದೆಡೆ ಕಂಡು ಬಂತು. ಕಡಿಮೆಯಾಗುತ್ತಿದೆ ಪಟಾಕಿ ಸಿಡಿಸುವ ಆಸಕ್ತಿ: ಜನರಲ್ಲಿ ಪಟಾಕಿ ಸಿಡಿಸುವ ಆಸಕ್ತಿ ವರ್ಷ-ವರ್ಷ ಕಡಿಮೆಯಾಗುತ್ತಿರುವುದನ್ನು ಕಂಡು ಬರುತ್ತಿದೆ. ಪಟಾಕಿ ಸಿಡಿಸುವುದು ಪರಿಸರಕ್ಕೆ ಹಾನಿ ಎಂಬುದಾಗಿ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ ಶಿವಕಾಶಿಯಲ್ಲಿ ಪಟಾಕಿ ಕಾರ್ಖಾನೆ ಬೆಂಕಿಗೆ ಆಹುತಿಯಾಗಿ ಪಟಾಕಿಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ದರ ಸಿಕ್ಕಾಪಟ್ಟೆ ಹೆಚ್ಚಳವಾಗಿರುವುದು ಪಟಾಕಿ ಮಾರಾಟಕ್ಕೆ ಹೊಡೆತ ಬಿದ್ದಿದೆ ಎನ್ನಲಾಗಿದೆ. ಜಿಲ್ಲಾಡಳಿತ ಚೀನಾ ಪಟಾಕಿಯನ್ನು ಮಾರಾಟ ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಜಾಗೃತಿಯಿಂದಲೂ ಮಾರಾಟಕ್ಕೆ ಹೊಡೆತ: ಪಟಾಕಿ ಹಾರಿಸಿ ವಾಯು ಮಾಲಿನ್ಯ ಮಾಡಬೇಡಿ ಎಂದು ಸರ್ಕಾರ ವ್ಯಾಪಕ ಪ್ರಚಾರ ಮಾಡುತ್ತಿದೆ. ಇದರಿಂದ ಪಟಾಕಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಮೊದಲಿನ ಹಾಗೆ ಸಾವಿರಾರು ಇಲ್ಲವೇ ನೂರಾರು ರೂ. ಖರ್ಚು ಮಾಡಿ ಪಟಾಕಿ ಹಾರಿಸುವ ಕಾಲ ಇಂದಿಲ್ಲ. ಹೆಸರಿಗೆ ಮಾತ್ರ ನೂರು ನೂರೈವತ್ತು ರೂ. ಖರ್ಚು ಮಾಡಿ ಸಣ್ಣ ಪಟಾಕಿ, ಮದ್ದಿನ ಕೊಳ್ಳಿ , ಸುರಸುರ ಬತ್ತಿ ಮಾತ್ರ ಸಾರ್ವಜನಿಕರು ಕೊಂಡುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಪಟಾಕಿ ಮಾರಾಟಗಾರ ಸಂತೋಷ ಪಾಟೀಲ. ಅಂಗಡಿ ಸ್ಥಾಪನೆಯೇ ಬೇಡ ಎನ್ನಿಸುತ್ತಿದೆ: ಪಟಾಕಿ ಅಂಗಡಿ ಹಾಕಲು ಅಗ್ನಿಶಾಮಕ ದಳ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಹೀಗೆ ಹಲವು ಇಲಾಖೆಗಳ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಪಟಾಕಿ ಅಂಗಡಿಯಿಂದ ಮೊದಲಿನ ಹಾಗೆ ಲಾಭವಿಲ್ಲ. ಪಟಾಕಿ ಅಂಗಡಿ ಸ್ಥಾಪಿಸುವುದು ತುಂಬಾ ಜವಾಬ್ದಾರಿಯುತ, ಕಷ್ಟದಾಯಕ. ಜಿಲ್ಲಾಡಳಿತದ ಅನುಮತಿ ಪಡೆಯಲು ಹರಸಾಹಸ ಮಾಡಬೇಕಾಗುತ್ತದೆ. ಇದನ್ನು ನೋಡಿದರೆ ಪಟಾಕಿ ಅಂಗಡಿಯನ್ನೇ ಹಾಕುವುದು ಬೇಡ ಎನ್ನಿಸುತ್ತಿದೆ. ಹಲವು ವರ್ಷಗಳಿಂದ ವ್ಯಾಪಾರ ನಡೆಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಮಾರಾಟ ಮುಂದುವರಿಸಿಕೊಂಡು ಬರಲಾಗುತ್ತಿದೆ. ಮಾರಾಟದ ಸ್ಥಳ ಗೊಂದಲ: ವರ್ಷಂಪ್ರತಿ ಪಟಾಕಿ ಮಳಿಗೆ ಸ್ಥಾಪಿತವಾಗುತ್ತಿದ್ದ ಕನ್ನಡ ಭವನ, ಸೂಪರ್ ಮಾರ್ಕೆಟ್ ಸ್ಥಳಕ್ಕೆ ಸಾರ್ವಜನಿಕರು ವಾಪಸ್ಸಾಗುತ್ತಿದ್ದರೆ ಇನ್ನು ಕೆಲವರು ವಿಜಯ ವಿದ್ಯಾಲಯ ಮೈದಾನಕ್ಕೆ ಹೋಗಿ ನಿರಾಸೆಯಿಂದ ಮರಳುತ್ತಿದ್ದಾರೆ. ಏಕೆಂದರೆ ಎರಡು ದಿನಗಳ ಹಿಂದೆ ಜಿಲ್ಲಾಡಳಿತ ಪಟಾಕಿ ಮಾರಾಟಕ್ಕೆ ವಿಜಯ ವಿದ್ಯಾಲಯದಲ್ಲಿ ಅನುಮತಿ ನೀಡಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿತ್ತು. ಆದರೆ ಸರ್ಕಾರಿ ಐಟಿಐ ಕಾಲೇಜು ಮೈದಾನದಲ್ಲಿ ಪಟಾಕಿ ಮಳಿಗೆಗಳು ಸ್ಥಾಪನೆಯಾಗಿವೆ. ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಇಲ್ಲ. ಇದರಿಂದಲೂ ಪಟಾಕಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಹಣಮಂತರಾವ ಭೈರಾಮಡಗಿ