Advertisement

ವೈದ್ಯಕೀಯ ನಿರ್ಲಕ್ಷ್ಯದಿಂದ ಬಾಣಂತಿ ಸಾವು : ಕುಟುಂಬಸ್ಥರ ಆರೋಪ, ಆಸ್ಪತ್ರೆಯೆದುರು ಪ್ರತಿಭಟನೆ

02:36 AM Sep 26, 2021 | Team Udayavani |

ಉಡುಪಿ: ಇಲ್ಲಿನ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಕೋಟ ಮಣೂರು ಪಡುಕೆರೆ ನಿವಾಸಿ ಉಷಾ (29) ಗುರುವಾರ ಬೆಳಗ್ಗೆ ಹೆರಿಗೆಗೆ ಆಸ್ಪತ್ರೆಗೆ ದಾಖಲಾಗಿ ದ್ದರು. ಶನಿವಾರ ಹೆರಿಗೆಯಾದ ಬಳಿಕ ಅವರಲ್ಲಿ ದಿಢೀರ್‌ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ತತ್‌ಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಆಸ್ಪತ್ರೆ ಸೇರುವ ಮುನ್ನವೇ ಅವರು ಮೃತಪಟ್ಟಿದ್ದಾರೆ. ಗಂಡು ಮಗು ಆರೋಗ್ಯವಾಗಿದೆ.
ಘಟನೆಯಿಂದ ಅಘಾತಗೊಂಡ ಮಹಿಳೆಯ ಸಂಬಂಧಿಕರು ಮತ್ತು ಸಾರ್ವಜನಿಕರು ಆಸ್ಪತ್ರೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಸ್ವಲ್ಪ ಕಾಲ ಪ್ರತಿಭಟನೆ ನಡೆಸಿದರು. ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್‌ ಡಾ| ಮಧುಸೂದನ್‌ ನಾಯಕ್‌ ಭೇಟಿ ನೀಡಿದರು. ಆಸ್ಪತ್ರೆ ಮುಂಭಾಗ ಸೇರಿದ್ದ ಜನರನ್ನು ನಿಯಂತ್ರಿಸಲು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಕೋಟ ಮಣೂರು ಪಡುಕೆರೆ ಉಷಾ ಅವರು ತೆಕ್ಕಟ್ಟೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದರು. 4 ವರ್ಷದ ಹಿಂದೆ ಶ್ರೀಕಾಂತ್‌ ಶ್ರಿಯಾನ್‌ ಅವರನ್ನು ವಿವಾಹವಾಗಿದ್ದರು.

ಹೃದಯ ಬಡಿತದಲ್ಲಿ ಏರುಪೇರು
ಉಷಾ ಅವರು ಸೆ. 23ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಸಹಜ ಹೆರಿಗೆಗೆ ಕಾಯಲಾಗಿತ್ತು. ಬಳಿಕ ಸೆ. 24ರ ರಾತ್ರಿ ಹೆರಿಗೆ ನೋವಿಗೆ ಔಷಧ ನೀಡಲಾಯಿತು. ಈ ವೇಳೆ ಮಗುವಿನ ಹೃದಯ ಬಡಿತದಲ್ಲಿ ಏರುಪೇರು ಇರುವುದು ತಿಳಿದು ಬಂತು. ಈ ಹಿನ್ನೆಲೆಯಲ್ಲಿ ಸೆ. 25ರ ಬೆಳಗ್ಗೆ 6 ಗಂಟೆಗೆ ಆಪರೇಶನ್‌ ಕೊಠಡಿಗೆ ಕೊಂಡೊಯ್ದು ಶಸ್ತ್ರಚಿಕಿತ್ಸೆ ನಡೆದು ಬೆಳಗ್ಗೆ 6.45ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದರು. ಬಳಿಕ ಮಹಿಳೆಗೆ ಬಿಪಿ ಏರಿಳಿತ, ಮತ್ತಿತರ ಕಾರಣಗಳಿಂದಾಗಿ ಮೂರ್ಛೆ ರೋಗ ಸಮಸ್ಯೆ ಕಾಣಿಸಿಕೊಂಡಿದೆ. ಉಸಿರಾಟ ಸಮಸ್ಯೆ ಇರುವುದನ್ನು ಗಮನಿಸಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಮುಂದುವರಿಸಿ ಮಣಿಪಾಲ ಕೆಎಂಸಿಗೆ ಕೊಂಡೊಯ್ಯಲಾಯಿತು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಬಾಣಂತಿ ಸಾವಿನ ಬಗ್ಗೆ ಕುಟುಂಬಸ್ಥರ ಅನುಮಾನದ ಮೇರೆಗೆ ಪೊಲೀಸ್‌ ದೂರು ದಾಖಲಿಸಲು ಸೂಚಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ನಿಜವಾದ ಕಾರಣ ತಿಳಿದು ಬರಲಿದೆ. ವೈದ್ಯರ ನಿರ್ಲಕ್ಷ್ಯ ದೃಢವಾದರೆ ಸೂಕ್ತ ಕಾನೂನು ಕ್ರಮ ತೆಗೆದು
ಕೊಳ್ಳಲಾಗುವುದು.
-ಡಾ| ಮಧುಸೂದನ್‌ ನಾಯಕ್‌, ಜಿಲ್ಲಾ ಸರ್ಜನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next