ವಾಷಿಂಗ್ಟನ್: ಕೋವಿಡ್ -19 ಕಾರಣದಿಂದ ಬಹುದಿನಗಳಿಂದ ಮನೆಯಲ್ಲೇ ಕುಳಿತು ಬೇಸೆತ್ತಿದ್ದ ವರ್ಜಿನೀಯಾದ ಕುಟುಂಬವೊಂದು ಕೊಂಚ ಬದಲಾವಣೆಗಾಗಿ ತಮ್ಮ ವಾಹನದಲ್ಲಿ ಸುತ್ತಾಡಲು ಹೊರಟಾಗ 1 ಮಿಲಿಯನ್ ಯುಎಸ್ ಡಾಲರ್ ( 7 ಕೋಟಿ, 56 ಲಕ್ಷ) ರಸ್ತೆಯಲ್ಲಿ ದೊರಕಿದ ಘಟನೆ ನಡೆದಿದೆ.
ಲಾಕ್ ಡೌನ್ ಕಾರಣದಿಂದ ಕಳೆದ ಕೆಲವು ತಿಂಗಳಿಂದ ಡೇವಿಡ್ ಮತ್ತು ಎಮಿಲಿ ದಂಪತಿಗಳು ಮನೆಯಲ್ಲೇ ಕಾಲಕಳೆಯುತ್ತಿದ್ದರು. ಆದರೇ ಕಳೆದ ಶನಿವಾರ ಲಾಕ್ ಡೌನ್ ಕೊಂಚ ಸಡಿಲಿಕೆಯಾದಾಗ, ವಾತಾವರಣ ಬದಲಾವಣೆಯಾದರೇ ಮನಸ್ಸಿಗೆ ನೆಮ್ಮದಿ ಸಿಗುವುದು ಎಂದು ಭಾವಿಸಿ ತಮ್ಮ ಮಕ್ಕಳೊಂದಿಗೆ ವಾಹನದಲ್ಲಿ ತಿರುಗಾಡಲು ತೆರಳಿದ್ದಾರೆ.
ಈ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಎರಡು ಮೂಟೆಗಳನ್ನು ದಂಪತಿಗಳು ಗಮನಿಸಿದ್ದಾರೆ. ಯಾರೋ ಕಸವನ್ನು ರಸ್ತೆಯಲ್ಲಿ ಎಸೆದು ಹೋಗಿದ್ದಾರೆಂದು ಭಾವಿಸಿದ ಅವರು ಅದನ್ನು ಎತ್ತಿ ತಮ್ಮ ವಾಹನದಲ್ಲಿ ಹಾಕಿಕೊಳ್ಳುತ್ತಾರೆ. ಮಾತ್ರವಲ್ಲದೆ ಮನೆಯಲ್ಲಿರುವ ಡಸ್ಟ್ ಬಿನ್ ಗೆ ಹಾಕಿದಾರಯಿತು ಎಂದು ಯೋಚಿಸಿ ನಂತರ ಮನೆಗೆ ಹಿಂದಿರುಗುತ್ತಾರೆ.
ಆದರೇ ಮನೆಗೆ ಹಿಂದಿರುಗಿ ಚೀಲವನ್ನು ತೆರೆದಾಗ ಅದರಲ್ಲಿ ರಾಶಿ ರಾಶಿ ಹಣ ಕಾಣಿಸಿದೆ. ಒಂದು ಕ್ಷಣ ದಂಗಾದ ಕುಟುಂಬ ಸ್ಥಳೀಯ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ಹಣವನ್ನು ಏಣಿಸಿದಾಗ ಸುಮಾರು 1 ಮಿಲಿಯನ್ ಯುಎಸ್ ಡಾಲರ್ ಎಂದು ತಿಳಿದುಬಂದಿದೆ.
ಆದರೇ ರಸ್ತೆ ಮಧ್ಯೆ ಹಣ ಹೇಗೆ ಬಂತು ? ಅದನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು? ಎಂಬುದು ತನಿಖೆಯ ನಂತರವಷ್ಟೆ ತಿಳಿಯುತ್ತದೆ . ಮಾತ್ರವಲ್ಲದೆ ಹಣವನ್ನು ಸುರಕ್ಷಿತವಾಗಿ ತಲುಪಿಸಿದ ಡೇವಿಡ್ ಕುಟುಂಬಕ್ಕೆ ಬಹುಮಾನ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.