ಬೆಂಗಳೂರು: ಅನಿಷ್ಠ ಹಾಗೂ ನಿಷೇಧಿತ ದೇವದಾಸಿ ಪದ್ಧತಿಯಿಂದ ಮುಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಗೌರವ ಹಾಗೂ ಘನತೆಯ ಬದುಕು ಕಟ್ಟಿಕೊಳ್ಳುತ್ತಿರುವ ರಾಜ್ಯದ ಮಾಜಿ ದೇವ ದಾಸಿ ಮಹಿಳೆಯರ ಕುಟುಂಬಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಸಮಗ್ರ ಅಧ್ಯಯನ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರು ಮತ್ತು ಮಕ್ಕಳಿ ಗಾಗಿ ಲಭ್ಯವಿರುವ ಯೋಜನೆಗಳು, ಸೌಲಭ್ಯಗಳ ಮೂಲಕ ಮಾಜಿ ದೇವದಾಸಿಯರ ಕುಟುಂಬಗಳಿಗೆ ಸಮಗ್ರವಾಗಿ ಪುನರ್ವಸತಿ ಕಲ್ಪಿಸಲು ಅಭಿವೃದ್ಧಿ ಕಾರ್ಯ ಕ್ರಮಗಳನ್ನು ರೂಪಿಸುವುದು ಈ ಅಧ್ಯಯನದ ಮೂಲ ಉದ್ದೇಶವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 1993-94 ಮತ್ತು 2007-08ನೇ ಸಾಲಿನಲ್ಲಿ ಕೈಗೊಂಡ ಸಮೀಕ್ಷೆಯಡಿ ರಾಜ್ಯದ 14 ಜಿಲ್ಲೆಗಳಾದ ವಿಜಯಪುರ, ಬಳ್ಳಾರಿ, ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ರಾಯ ಚೂರು, ಧಾರವಾಡ, ಗದಗ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ಕಲಬುರಗಿ, ಯಾದಗಿರಿ, ಮತ್ತು ದಾವಣ ಗೆರೆಯಲ್ಲಿ ಒಟ್ಟು 46, 660 ಮಾಜಿ ದೇವದಾಸಿಯರನ್ನು ಗುರು ತಿಸಲಾಗಿತ್ತು. ಇದೀಗ ಆ ಕುಟುಂಬಗಳ ಈಗಿನ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಅಧ್ಯಯನ ನಡೆಸಲಾಗುತ್ತಿದೆ.
ಈಗಾಗಲೇ ವಸ್ತುಸ್ಥಿತಿ ಅಧ್ಯಯನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ರೂಪುರೇಷೆ ಗಳು ಸಿದ್ಧಗೊಂಡಿದ್ದು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಆರ್ಥಿಕ ಮತ್ತು ಸಾಂಖ್ಯೀಕ ನಿರ್ದೇಶನಾಲಯ ಅಧ್ಯಯನ ಕಾರ್ಯ ನಡೆಸಲಿದೆ. ಅಧ್ಯಯನಕ್ಕೆ ಅಗತ್ಯವಿರುವ ಸಿಬ್ಬಂದಿ ಮತ್ತು ಅಧಿಕಾರಿಗಳ ನಿಯೋಜನೆ, ತರಬೇತಿ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಅಧ್ಯಯನ ಕಾರ್ಯ ಆರಂಭಿಸಲಾಗುವುದು ಎಂದು ಮಹಿಳಾ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಯೊಬ್ಬರು
“ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ರಾಜ್ಯದ 14 ಜಿಲ್ಲೆಗಳಲ್ಲಿ ಗುರುತಿಸಲಾದ 46,660 ಮಾಜಿ ದೇವದಾಸಿ ಮಹಿಳೆಯರ ಕುಟುಂಬಗಳ ಸಮಗ್ರ ಅಧ್ಯಯನ ನಡೆಸಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ 2017-18ನೇ ಸಾಲಿನ ಪರಿಷ್ಕೃತ ಕ್ರಿಯಾ ಯೋಜನೆಯಡಿ ಅನುಮೋದನೆ ನೀಡ ಲಾಗಿತ್ತು. ಇದಕ್ಕಾಗಿ ಅನುಸೂಚಿತ ಜಾತಿಗಳ ಮತ್ತು ಬುಡಕಟ್ಟು ಜಾತಿಗಳ ಉಪಯೋಜನೆಯಡಿ ಬಳಕೆ ಯಾಗದ 75 ಲಕ್ಷ ರೂ. ಅನುದಾನ ಬಳಸಿ ಕೊಳ್ಳಲು ತೀರ್ಮಾನಿಸಿ ನಿಗಮವು ಆ ಹಣವನ್ನು ಆರ್ಥಿಕ ಮತ್ತು ಸಾಂಖ್ಯೀಕ ನಿರ್ದೇಶನಾಲಯಕ್ಕೆ 2018 ರಲ್ಲಿ ಬಿಡುಗಡೆ ಮಾಡಿತ್ತು. ಅಧ್ಯಯನ ಕಾರ್ಯಕ್ಕೆ ಸೂಕ್ತ ಆದೇಶ ಹೊರಡಿಸುವಂತೆ 2019ರ ಫೆಬ್ರವರಿ ಯಲ್ಲಿ ಆರ್ಥಿಕ ಮತ್ತು ಸಾಂಖ್ಯೀಕ ನಿರ್ದೇಶನಾಲಯವು ನಿಗಮಕ್ಕೆ ಪತ್ರ ಬರೆದಿತ್ತು. ಇದೀಗ ಅಧ್ಯಯನವನ್ನು ಕಾರ್ಯಗತಗೊಳಿಸಲಾಗುತ್ತಿದೆ.
ಸಾವಿರ ಸಿಬ್ಬಂದಿ ಬಳಕೆ: ರಾಜ್ಯದ 46,660 ಮಾಜಿ ದೇವದಾಸಿ ಮಹಿಳೆಯರ ಕುಟುಂಬಗಳ ಅಧ್ಯಯನ ನಡೆಸಲು ನಿವೃತ್ತ, ನುರಿತ ಅಂಗನವಾಡಿ ಕಾರ್ಯಕರ್ತೆ ಯರು, ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರು, ಜಿಲ್ಲೆ ಗಳಲ್ಲಿನ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆಯ ಅನುಷ್ಠಾನಾಧಿಕಾರಿಗಳು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ಹಾಗೂ ತಾಲೂಕು ಕಚೇರಿಗಳಲ್ಲಿನ ಸಾಂಖ್ಯೀಕ ನಿರೀಕ್ಷಕರು ಮತ್ತು ಗಣತಿದಾರರನ್ನು ಅಧ್ಯಯನದ ಮೂಲ ಕಾರ್ಯಕರ್ತರನ್ನಾಗಿ ನೇಮಿಸಲಾಗಿದೆ.
ಒಬ್ಬ ಮೂಲ ಕಾರ್ಯಕರ್ತ ಅಥವಾ ಗಣತಿದಾರ 50 ಕುಟುಂಬಗಳ ಅಧ್ಯಯನ ನಡೆಸಬೇಕು. ಅದರಂತೆ, 46,660 ಕುಟುಂಬಗಳಿಗೆ ಪ್ರತಿ 50 ಕುಟುಂಬಕ್ಕೆ ಒಬ್ಬ ರಂತೆ ಒಟ್ಟು 933 ಮೂಲ ಕಾರ್ಯಕರ್ತರನ್ನು ನೇಮಿ ಸಲಾಗಿದೆ. 10 ಮೂಲ ಕಾರ್ಯಕರ್ತರಿಗೆ ಒಬ್ಬ ರಂತೆ 93 ಮೇಲ್ವಿಚಾರಕರನ್ನು ನೇಮಿಸಿಕೊಳ್ಳಲಾಗಿದೆ. ಹೆಚ್ಚು ವರಿ ಯಾಗಿ ಶೇ.5ರಷ್ಟು ಸಿಬ್ಬಂದಿ ಸೇರಿ ಒಟ್ಟು 1,080 ಸಿಬ್ಬಂದಿ ಅಧ್ಯಯನ ಕಾರ್ಯ ನಡೆಸಲಿದ್ದಾರೆ.
ಮಾಜಿ ದೇವದಾಸಿ ಮಹಿಳೆಯರ ಕುಟುಂಬಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗಳ ಅಧ್ಯಯನ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ, ರಾಜ್ಯದಲ್ಲಿ ಅನೇಕ ಕಡೆ ಇನ್ನೂ ದೇವದಾಸಿ ಪದ್ಧತಿ ಜಾರಿಯಲ್ಲಿದೆ. ಆದ್ದರಿಂದ ದೇವದಾಸಿ ಮಹಿಳೆಯರು ಮತ್ತು ಅವರ ಕುಟುಂಬಗಳ ಮರು ಸಮೀಕ್ಷೆ ನಡೆಸಬೇಕು ಅನ್ನುವುದು ನಮ್ಮ ಬೇಡಿಕೆಯಾಗಿದೆ.
-ಬಿ.ಮಾಳಮ್ಮ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ
* ರಫೀಕ್ ಅಹ್ಮದ್