ಒಂದು ಊರಿನಲ್ಲಿ ತನ್ನದೇ ಆದ ಸ್ಥಾನಮಾನ, ಗೌರವ ಸಂಪಾದಿಸಿಕೊಂಡಿರುವ ಎರಡು ಕುಟುಂಬಗಳಿರುತ್ತವೆ. ಅದರಲ್ಲಿ ಒಂದು ಕುಟುಂಬ ಮೇಲು-ಕೀಳು, ಬಡವ-ಶ್ರೀಮಂತ ಎಂದು ನೋಡದೆ ಎಲ್ಲರನ್ನು ಒಂದೇ ಸ್ಥಾನದಲ್ಲಿ ಗೌರವಿಸುತ್ತಿರುತ್ತದೆ. ಆದರೆ ಅದೇ ಊರಿನಲ್ಲಿರುವ ಮತ್ತೂಂದು ಕುಟುಂಬ ವಿದೇಶದಿಂದ ಹಿಂತಿರುಗಿರುಗಿದ್ದು, ಜನರ ಸ್ಥಾನಮಾನಗಳಿಗೆ ತಕ್ಕಂತೆ ಅವರನ್ನು ಅಳೆದು-ತೂಗಿ ಮಾತನಾಡಿಸುತ್ತಿರುತ್ತದೆ. ಆದರೆ ಸಣ್ಣ ಭಿನ್ನಾಭಿಪ್ರಾಯ, ಸಂಶಯದಿಂದ ಈ ಎರಡೂ ಮನೆಯವರು ಕಡು ವಿರೋಧಿಗಳಾಗುತ್ತಾರೆ. ಮುಂದೆ ಈ ಎರಡು ಮನೆಯ ಹುಡುಗ-ಹುಡುಗಿ ಪರಸ್ಪರ ಪ್ರೀತಿಸಿ ಪ್ರೇಮಿಗಳಾಗುತ್ತಾರೆ. ನಾವು ಒಳ್ಳೆಯವನೆಂದು ಹೇಳಿಕೊಳ್ಳುವ ಎರಡೂ ಮನೆಯವರು ಈ ಪ್ರೇಮಿಗಳ ಪ್ರೀತಿಯನ್ನು ಒಪ್ಪುತ್ತಾರಾ? ಎಲ್ಲವೂ ಸರಿ ಹೋಗುತ್ತದೆಯಾ? ಇದು ಯಾವುದೋ ತೆಲುಗು ಸಿನಿಮಾದ ಕಥೆ ಅಥವಾ ಸಸ್ಪೆನ್ಸ್ ಪಾಯಿಂಟ್ ಅಲ್ಲ, ಬದಲಾಗಿ ಕನ್ನಡ ಚಿತ್ರದ “ವಿರಾಜ್’ನ ಒನ್‌ಲೈನ್. ನಾಗೇಶ ನಾರದಾಸಿ ಈ ಚಿತ್ರದ ನಿರ್ದೇಶಕರು.
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ವಿರಾಜ್’ ಚಿತ್ರದ ಹಾಡುಗಳು ಇತ್ತೀಚೆಗೆ ಹೊರಬಂದವು. ಇದೇ ವೇಳೆ ಚಿತ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ನಾಗೇಶ ನಾರದಾಸಿ ಮಾತನಾಡಿ, ವಿರಾಜ್ ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್, ಆ್ಯಕ್ಷನ್, ಕಾಮಿಡಿ ಹೀಗೆ ಎಲ್ಲಾ ಅಂಶಗಳಿದ್ದು, ನೋಡುಗರಿಗೆ ಭರಪೂರ ಮನರಂಜನೆ ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಇವೆಲ್ಲದರ ಜತೆ ಯಾವುದೇ ಕೆಲಸ ಕನಿಷ್ಠವಲ್ಲ, ಎಲ್ಲಾ ಕೆಲಸಕ್ಕೂ ಅದರದ್ದೇ ಆದ ಮಹತ್ವವಿದೆ. ಯಾವುದೇ ಕೆಲಸವಾಗಿರಲಿ ಅದನ್ನು ಮಾಡುವವರನ್ನು ಗೌರವಿಸಿ, ಅನ್ನದಾತ ರೈತ ದೇಶದ ಬೆನ್ನಲುಬು ಎಂದು ಸಂದೇಶವನ್ನೂ ಚಿತ್ರದಲ್ಲಿ ಹೇಳಲಾಗಿದೆ. ಈಗಾಗಲೇ ಮೈಸೂರು, ಹಾಸನ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ ಎಂಬ ಮಾಹಿತಿ ನೀಡಿದೆ ಚಿತ್ರತಂಡ.
ಯುವ ಕಲಾವಿದ ವಿದ್ಯಾಭರಣ್ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಶಿರಿನ್ ಕಾಂಚವಾಲ್, ನಿಖೀತಾಬೆಸ್ಟ್ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಕೃಷಿ ತಾಪಂಡ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಸುಭಾಷ್ ಆನಂದ್ ಹಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಮೈಸೂರು ಮೂಲದ ಕೈಗಾರಿಕೋದ್ಯಮಿ ಮಂಜುನಾಥ ಸ್ವಾಮಿ ವಿರಾಜ್ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ಮಾಪಕ ಸಿ.ಆರ್.ಮನೋಹರ್ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಹಲವು ಗಣ್ಯರು ಸಮಾರಂಭದಲ್ಲಿ ಹಾಜರಿದ್ದು “ವಿರಾಜ್’ ಚಿತ್ರದ ಧ್ವನಿ ಸಾಂದ್ರಿಕೆಯನ್ನು ಬಿಡುಗಡೆಗೊಳಿಸಿದರು. ಆನಂದ್ ಆಡಿಯೋ “ವಿರಾಜ್’ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದ್ದು, ಹಾಡುಗಳನ್ನು ಹೊರತಂದಿದೆ.