ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈ ಬಾರಿ ತೀವ್ರ ಮಳೆ ಕೊರತೆಯಿಂದ ಅಪ್ಪಳಿಸಿರುವ ಬರದ ಪರಿಣಾಮ ಜಿಲ್ಲಾದ್ಯಂತ 75, 208 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಶೇ.50 ಕ್ಕಿಂತ ಹೆಚ್ಚು ಹಾನಿಯಾಗಿರುವ ಕಾರಣ ಜಿಲ್ಲೆಯಲ್ಲಿ ಬರೋಬ್ಬರಿ 1.70 ಲಕ್ಷ ಮೆಟ್ರಿಕ್ ಟನ್‌ನಷ್ಟು ಕೃಷಿ ಉತ್ಪನ್ನಗಳ ಉತ್ಪಾದನೆ ಕುಸಿಯಲಿದೆ.
ಹೌದು, ಹಲವು ದಶಕಗಳ ಕಾಲ ಬರಗಾಲವನ್ನು ಬೆನ್ನಿಗೇರಿಸಿಕೊಂಡಿದ್ದ ಜಿಲ್ಲೆಯು ಹಿಂದಿನ 3 ವರ್ಷದಿಂದ ಸಮೃದ್ಧ ಮಳೆಗೆ ಸಾಕ್ಷಿಯಾಗಿತ್ತು. ಆದರೆ ಈಗ ಮಳೆಯ ಅವಕೃಪೆ ಪರಿಣಾಮ ಈ ವರ್ಷ ಜಿಲ್ಲೆಗೆ ಬರ ಖಾಯಂ ಆಗಿದ್ದು, 6 ತಾಲೂಕುಗಳನ್ನು ತೀವ್ರ ಬರಗಾಲ ಪೀಡಿತ ಎಂದು ರಾಜ್ಯ ಸರ್ಕಾರ ಮಳೆ ಪ್ರಮಾಣ ಆಧಾರಿಸಿ ಪ್ರಕಟಿಸಿದೆ.
1.70 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಕುಸಿತ: ಇಡೀ ರಾಜ್ಯಕ್ಕೆ ಹಾಲು, ತರಕಾರಿ, ಹಣ್ಣು ಹಂಪಲು, ಹೂ ಬೆಳೆದುಕೊಡುವಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯು ಯಾವುದೇ ಶಾಶ್ವತ ನದಿ ನಾಲೆಗಳ ಕೊರತೆ ನಡುವೆಯು ಮಳೆಯನ್ನೆ ನಂಬಿ ಪ್ರತಿ ವರ್ಷ ಲಕ್ಷಾಂತರ ಮೆಟ್ರಿಕ್ ಟನ್‌ನಷ್ಟು ಆಹಾರ ಧಾನ್ಯಗಳನ್ನು ಉತ್ಪಾದನೆ ಮಾಡಿ ಕೊಡುತ್ತಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಜಿಲ್ಲಾದ್ಯಂತ ಬರೋಬ್ಬರಿ 1.70 ಲಕ್ಷ ಮೆಟ್ರಿಕ್ ಟನ್‌ಷ್ಟು ಆಹಾರ ಧಾನ್ಯಗಳ ಉತ್ಪಾದನೆ ಕುಸಿಯಲಿದೆಯೆಂದು ಕೃಷಿ ಇಲಾಖೆ ಅಂದಾಜಿಸಿರುವುದು ಜಿಲ್ಲೆಯ ಪಾಲಿಗೆ ತೀವ್ರ ಅಘಾತಕಾರಿ ಅಂಶವಾಗಿದೆ. ಬರದ ಪರಿಣಾಮ ಜಿಲ್ಲೆಯು ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ತೀವ್ರ ಕೊರತೆ ಎದುರಿಸುವ ಆತಂಕ ಎದುರಾಗಿದೆ.
ರಾಗಿ ಮಾರಿದ ರೈತರಲ್ಲಿ ಆತಂಕ!: ಉತ್ತಮ ಮಳೆ ಬೆಳೆ ನಿರೀಕ್ಷಿಸಿದ್ದ ಜಿಲ್ಲೆಯ ರೈತರು ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದ ಬಳಿಕ ವ್ಯಾಪಕ ಪ್ರಮಾಣದಲ್ಲಿ ರಾಗಿ ಬೆಳೆಗಾರರು ತಮ್ಮಲ್ಲಿ ಇದ್ದ ರಾಗಿಯನ್ನು ಬೆಂಬಲ ಬೆಲೆಗೆ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿದ್ದು ಇದೀಗ ಮಳೆ ಕೈ ಕೊಟ್ಟು ರಾಗಿ, ಶೇಂಗಾ, ತೊಗರಿ, ಅವರೆ, ಮುಸುಕಿನ ಜೋಳ ಮತ್ತಿತರ ಕೃಷಿ ಉತ್ಪನ್ನಗಳ ಉತ್ಪಾದನೆ ಕುಸಿತ ಕಂಡಿರುವುದರಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದು ಬೆಳೆಗಾರರೇ ರಾಗಿ ಖರೀದಿಸುವ ಪರಿಸ್ಥಿತಿ ಎದುರಾಗಲಿದೆ.
-ಕಾಗತಿ ನಾಗರಾಜಪ್ಪ