ದ.ಕ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾರ್ಯ ನಿರತವಾಗಿರುವ ಅಂಶ ಬೆಳಕಿಗೆ ಬಂದಿದೆ!
Advertisement
ಪುತ್ತೂರು ಆರ್‌ಟಿಒ ವ್ಯಾಪ್ತಿಯ ವ್ಯಕ್ತಿಯೊಬ್ಬರು ಬೇರೊಬ್ಬರ ಹೆಸರಿನಲ್ಲಿದ್ದ ವಾಹನ ವಿಮೆಯನ್ನು ತನ್ನ ಹೆಸರಿಗೆ ವರ್ಗಾಯಿಸಲು ಪುತ್ತೂರಿನ ವಿಮಾ ಕಚೇರಿಗೆ ಬಂದ ಸಂದರ್ಭ ಈ ನಕಲಿ ವಿಮೆ ವಿಚಾರ ಗಮನಕ್ಕೆ ಬಂದಿದೆ.
ಪುತ್ತೂರಿನ ವಾಹನ ವಿಮೆಯ ಅಧಿಕೃತ ಏಜೆಂಟ್ ಜಯಾನಂದ ಅವರ ಏಜೆನ್ಸಿ ಸಂಖ್ಯೆ ಹೊಂದಿದ್ದ ವಾಹನ ವಿಮೆಯನ್ನು ಬೇರೆಯವರಿಂದ ವಾಹನ ಕೊಂಡುಕೊಂಡಿದ್ದ ವ್ಯಕ್ತಿ ತನ್ನ ಹೆಸರಿಗೆ ಬದಲಾಯಿಸುವ ಸಲುವಾಗಿ ಪುತ್ತೂರಿನ ವಿಮಾ ಕಚೇರಿಗೆ ಬಂದಿದ್ದರು. ಅವಧಿ ಮುಗಿಯದ ಈ ವಿಮೆಯ ಸಂಖ್ಯೆಯನ್ನು ಪರಿಶೀಲಿಸಿದಾಗ ಇದು ನಕಲಿ ಎನ್ನುವ ಅಂಶ ತಿಳಿದು ಬಂತು. ತತ್‌ಕ್ಷಣ ಅವರು ಕೋಡ್ ಸಂಖ್ಯೆ ಹೊಂದಿದ್ದ ಅಧಿಕೃತ ಏಜೆನ್ಸಿಯ ಜಯಾನಂದ ಅವರನ್ನು ಸಂಪರ್ಕಿಸಿ ವಾಹನ ವಿಮೆ ನೀಡಿರುವ ಬಗ್ಗೆ ವಿಚಾರಿಸಿದ್ದಾರೆ. ವಿಮೆ ನೋಂದಣಿ ಆದ ಆ ದಿನಾಂಕದಂದೂ ಏಜೆನ್ಸಿ ವತಿಯಿಂದ ಆ ವಾಹನಕ್ಕೆ ಯಾವುದೇ ವಿಮೆ ಮಾಡಿಲ್ಲ ಎಂದು ಅವರು ವಿಮಾ ಕಂಪೆನಿಗೆ ಮಾಹಿತಿ ನೀಡಿದ್ದರು. ಈ ವೇಳೆ ಇದು ನಕಲಿ ವಿಮೆ ಎಂಬ ಅನುಮಾನ ಖಾತರಿ ಆಗಿದೆ. ಇದೇ ಏಜೆನ್ಸಿ ಕೋಡ್‌ನಲ್ಲಿ ಇನ್ನೊಬ್ಬ ವ್ಯಕ್ತಿಗೂ ನಕಲಿ ವಿಮೆ ನೀಡಿರುವ ಮಾಹಿತಿಯೂ ಬೆಳಕಿಗೆ ಬಂದಿದೆ. ನಕಲಿ ಮತ್ತು ಅಸಲಿ
ವಾಹನ ವಿಮೆಯನ್ನು ಆಳವಾಗಿ ಪರಿಶೀಲನೆ ನಡೆಸದೆ ಇದು ಅಸಲಿಯೋ ನಕಲಿಯೂ ಎಂಬ ನಿರ್ಧಾರಕ್ಕೆ ಬರಲು ಅಸಾಧ್ಯವಾಗಿರುವ ಕಾರಣ ಇದನ್ನೇ ದುರುಪಯೋಗಪಡಿಸಿಕೊಂಡು ನಕಲಿ ವಿಮೆಯನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಪೊಲೀಸರು ಅಥವಾ ಆರ್‌ಟಿಒ ಅಧಿಕಾರಿಗಳು ಕೂಡ ತಪಾಸಣೆ ಸಂದರ್ಭ ವಿಮೆಯ ಅವಧಿ ದಿನಾಂಕ, ಹೆಸರು ಮಾತ್ರ ಗಮನಿಸುವ ಕಾರಣ ವಿಮೆಯ ಅಸಲಿ, ನಕಲಿ ಅಂಶ ಬಯಲಿಗೆ ಬರುವುದಿಲ್ಲ. ಜತೆಗೆ ಗ್ರಾಹಕರಿಗೂ ಈ ಬಗ್ಗೆ ಯಾವ ಸುಳಿವು ದೊರೆಯುವುದಿಲ್ಲ.
Related Articles
ಈಗ ಸಿಕ್ಕಿರುವ ನಕಲಿ ವಿಮೆಯಲ್ಲಿ ಅಧಿಕೃತ ಏಜೆನ್ಸಿಯ ಕೋಡ್ ಹೊರತುಪಡಿಸಿ ಮಿಕ್ಕ ಎಲ್ಲ ಮಾಹಿತಿಗಳನ್ನು ತಪ್ಪಾಗಿ ನಮೂದಿಸಲಾಗಿದೆ. ವಿಮಾ ಪಾವತಿ ಮೊತ್ತದಲ್ಲಿಯು ವ್ಯತ್ಯಾಸ ಕಂಡು ಬಂದಿದೆ. ನಿಯಮಾನುಸಾರ ಆಯಾ ವಾಹನಗಳಿಗೆ ನಿರ್ದಿಷ್ಟ ಶುಲ್ಕ ಪಾವತಿಸಬೇಕಿದ್ದರೂ ನಕಲಿ ವಿಮೆಯಲ್ಲಿ ಕಡಿಮೆ ಹಣ ಪಡೆದು ಪಾಲಿಸಿ ನೀಡಲಾಗಿದೆ. ಅಧಿಕೃತ ಏಜೆನ್ಸಿಯ ಯಾವುದೋ ಅಸಲಿ ವಿಮೆಯೊಂದನ್ನು ಪಡೆದು ಅದನ್ನು ನಕಲಿ ಮಾಡಿ ಅದರ ಹಾಗೆ ಪೋಟೋಶಾಪ್ ಮೂಲಕ ತಿದ್ದುಪಡಿ ಮಾಡಿ ನೀಡಲಾಗಿದೆ. ಈ ರೀತಿಯ ವಂಚನೆ ಅಧಿಕೃತ ಏಜೆನ್ಸಿಗಳ ಗಮನಕ್ಕೆ ಬರುವುದಿಲ್ಲ. ಇದರಿಂದ ನಿಯಮ ಅನುಸಾರ ವಿಮೆ ನೀಡುವ ಏಜೆನ್ಸಿಗಳ ಕೋಡ್ ದುರ್ಬಳಕೆ ಮಾಡಿಕೊಳ್ಳುವ ಕಾರಣ ಅವರಿಗೂ ತೊಂದರೆ ಉಂಟಾಗಿದೆ.
Advertisement
ಹಲವರಿಗೆ ವಂಚನೆ?ಈಗಾಗಲೇ ನೂರಾರು ವಾಹನಗಳಿಗೆ ಇಂತಹ ನಕಲಿ ವಿಮೆ ನೀಡಿ ವಂಚಿಸಿರುವ ಸಾಧ್ಯತೆ ಕೂಡ ಮೇಲ್ನೋಟಕ್ಕೆ ಕಂಡು ಬಂದಿದೆ. ಸಂಚಾರ ಪೊಲೀಸರು ತಪಾಸಣೆ ವೇಳೆ ವಿಮೆ ಪಾಲಿಸಿಗಳನ್ನು ಸೂಕ್ಷವಾಗಿ ಪರಿಶೀಲಿಸಬೇಕಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ವಾಹನ ಮಾಲಕರು ಹಾಗೂ ಅಧಿಕೃತ ಏಜೆನ್ಸಿದಾರರು ಆಗ್ರಹಿಸಿದ್ದಾರೆ. ಅಪಾಯಗಳೇನು?
ಅಧಿಕೃತ ವಾಹನ ವಿಮೆ ಬದಲು ನಕಲಿ ವಾಹನ ವಿಮೆ ಪಡೆದಿದ್ದರೆ ಅಂತವರಿಗೆ ಅಪಾಯ ಹೆಚ್ಚು. ವಾಹನಗಳು ಅಪಘಾತವಾದಲ್ಲಿ ಈ ನಕಲಿ ವಿಮೆ ಉಪಯೋಗಕ್ಕೆ ಬರುವುದಿಲ್ಲ. ಪರಿಹಾರ ಮೊತ್ತವೂ ದೊರೆಯುವುದಿಲ್ಲ. ಜತೆಗೆ ವಾಹನ ವಿಮೆ ನಕಲಿ ಎನ್ನುವುದು ಪತ್ತೆಯಾದೊಡನೆ ಕಾನೂನು ಕ್ರಮವನ್ನೂ ಎದುರಿಸಬೇಕಾಗುತ್ತದೆ. ನಾನು ವಾಹನ ವಿಮೆ ನೀಡುವ ಅಧಿಕೃತ ಏಜೆನ್ಸಿ ಹೊಂದಿದ್ದು, ನನ್ನ ಕೋಡ್ ಬಳಸಿ ಯಾರೋ ನಕಲಿ ವಿಮೆ ನೀಡಿರುವ ಬಗ್ಗೆ ವಿಮಾ ಕಂಪೆನಿ ಮಾಹಿತಿ ನೀಡಿದಾಗಲೇ ನನ್ನ ಗಮನಕ್ಕೆ ಬಂತು. ಈ ವಿಚಾರವನ್ನು ನಕಲಿ ವಿಮೆ ಪಡೆದ ಫಲಾನುಭವಿ ಗಮನಕ್ಕೆ ತಂದಿದ್ದೇನೆ. ಜತೆಗೆ ಆರ್‌ಟಿಒ ಮತ್ತು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರುತ್ತೇನೆ.
– ಜಯಾನಂದ, ಅಧಿಕೃತ ಏಜೆನ್ಸಿದಾರ, ಪುತ್ತೂರು ವಾಹನ ವಿಮೆಯ ಬಗ್ಗೆ ಆಯಾ ವಿಮಾ ಕಂಪೆನಿ ಜವಾಬ್ದಾರಿ ಹೊಂದಿದೆ. ಪೋರ್ಜರಿ ಆಗಿದ್ದರೆ ಅವರೇ ದೃಢಪಡಿಸುತ್ತಾರೆ. ಇದು ಆರ್‌ಟಿಒ ಗಮನಕ್ಕೆ ಬರುವುದು ಕಡಿಮೆ. ಈ ಬಗ್ಗೆ ಪೊಲೀಸ್ ದೂರು ನೀಡಬಹುದು.
– ಆನಂದ ಗೌಡ ಕೆ. ಪ್ರಾದೇಶಿಕ ಸಾರಿಗೆ ಅಧಿಕಾರಿ, ಪುತ್ತೂರು ಕಿರಣ್ ಪ್ರಸಾದ್ ಕುಂಡಡ್ಕ