ಬೆಂಗಳೂರು: ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ ಅವರ ಸೋಗಿನಲ್ಲಿ ಜನರಿಗೆ ಕೋಟ್ಯಂತರ ರೂ. ವಂಚಿಸಿ ಬಂಧನಕ್ಕೊಳಗಾಗಿ ಮಹಜರು ಸಂದರ್ಭದಲ್ಲಿ ಚಿತ್ರದುರ್ಗ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ ಎಲ್.ಸೋಮಣ್ಣ (39) ಪೊಲೀಸರಿಗೆ ಶರಣಾಗಿದ್ದಾನೆ. ಇದೇ ವೇಳೆ ಆರೋಪಿಗೆ ಆಶ್ರಯ ನೀಡಿದ ಒಬ್ಬ ಮಹಿಳೆ ಸೇರಿ ಮೂವರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಚಿನ್ನದಂಗಡಿ ಮಾಲೀಕರಿಂದ 1.88 ಕೋಟಿ ರೂ. ಬೆಲೆಯ ಚಿನ್ನದ ತಾಳಿ, ಬಿಸ್ಕತ್ ಪಡೆದು ವಂಚಿಸಿದ ಸೋಮಣ್ಣನನ್ನು ಬಸವೇಶ್ವರನಗರ ಪೊಲೀಸರು ಏ.4ರಂದು ಬಂಧಿಸಿದ್ದರು. ಏ.11ರಂದು ಚಿತ್ರದುರ್ಗಕ್ಕೆ ಮಹಜರ್‌ಗೆ ಕರೆದೊಯ್ದಿದ್ದಾಗ ಪೊಲೀಸರನ್ನು ತಳ್ಳಿ 11 ಅಡಿ ಮೇಲಿಂದ ಜಿಗಿದು ತಪ್ಪಿಸಿಕೊಂಡಿದ್ದ.
ಅಲ್ಲಿಂದ ದಾವಣಗೆರೆಗೆ ಆಟೋದಲ್ಲಿ ಹೋಗಿ ಸಂಬಂಧಿಕರಿಂದ ಹಣ ಪಡೆದು ಆಟೋ ಚಾಲಕನಿಗೆ 1 ಸಾವಿರ ರೂ. ಬಾಡಿಗೆ ಕೊಟ್ಟಿದ್ದ. ಅನಂತರ ಬೆಂಗಳೂರು ಮತ್ತು ಮೈಸೂರಿನಲ್ಲಿ ಸುತ್ತಾಡಿ ಕೊನೆಗೆ ವಕೀಲರನ್ನು ಭೇಟಿ ಮಾಡಿ ಅವರ ಸಹಾಯದಿಂದ ಏ.20ರಂದು ಸಂಜೆ 5ನೇ ಎಸಿಎಂಎಂ ನ್ಯಾಯಾಲಯದಲ್ಲಿ ಶರಣಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗೆ ಆಶ್ರಯ ನೀಡಿದ ಕೊಡಿಗೇಹಳ್ಳಿಯ ಸಹಕಾರ ನಗರದ ಬಾಲಾಜಿ(48), ಸರಿತಾ (37) ಹಾಗೂ ದೇವನಹಳ್ಳಿಯ ಶಾಣಪ್ಪನಹಳ್ಳಿಯ ವಿಜಯ್‌ಕುಮಾರ್‌ನನ್ನು ಬಂಧಿಸಲಾಗಿದೆ. ಸೋಮಣ್ಣನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಸಂಸದರ ವಿರುದ್ಧ ಕಿಡಿ, ಪೊಲೀಸರಿಗೆ ಬೆದರಿಕೆ: ಬಿಜೆಪಿ ಸಂಸದ ಶ್ರೀರಾಮುಲು ತನ್ನ ಪ್ರಭಾವ ಬಳಸಿ ಪೊಲೀಸರು ನನ್ನನ್ನು ಬಂಧಿಸುವಂತೆ ಮಾಡಿದ್ದಾರೆ. ಈ ಬಾರಿ ಮೊಣಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸದಂತೆ ನನಗೆ ಶ್ರೀರಾಮುಲು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿ ಸೋಮಣ್ಣ ಆರೋಪಿಸಿದ್ದಾನೆ.
ಆದರೆ, ಸಂಸದರಿಗೆ ಈತನ ಹೆಸರೇ ಗೊತ್ತಿಲ್ಲ. ಹಾಗೇ ಪೊಲೀಸರು ಬಂಧಿಸಲು ತೆರಳಿದಾಗ “ನಾನು ಮುಂದೆ ಶಾಸಕನಾಗುವವನು, ಸುಮ್ಮನೆ ಬಿಟ್ಟುಬಿಡಿ. ಹೊರಬಂದ ಮೇಲೆ ನೀರು ನೆರಳು ಇಲ್ಲದ ಜಾಗಕ್ಕೆ ವರ್ಗಾವಣೆ ಮಾಡಿಸುತ್ತೆನೆ,’ ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಠಾಧೀಶರ ಭೇಟಿಗೂ ಸುಳ್ಳು: ಆರೋಪಿ ಎಲ್.ಸೋಮಣ್ಣ, ತುಮಕೂರಿನ ಸಿದ್ಧಗಂಗಾ ಮಠ ಹಾಗೂ ಮೈಸೂರಿನ ಸುತ್ತೂರು ಮಠಕ್ಕೆ ಹೋದಾಗ ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ ಆಪ್ತರು ಎಂದು ಹೇಳಿಕೊಂಡು ಪ್ರವೇಶ ಪಡೆದುಕೊಂಡಿದ್ದ. ಚಿತ್ರದುರ್ಗದ ಮುರುಘಾ ಮಠಕ್ಕೆ ಹೋದಾಗ ಸಂಸದ ಶ್ರೀರಾಮುಲು ಹೆಸರು ಬಳಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.