Advertisement

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

10:34 PM Nov 22, 2024 | Team Udayavani |

ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಬಳಿ ಕಾರು ಅಡ್ಡಗಟ್ಟಿ ಬಂದೂಕು ತೋರಿಸಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ದೂರು ನೀಡಿದವರನ್ನೇ ವಶಕ್ಕೆ ಪಡೆದಿದ್ದ ಪೊಲೀಸರು ಈಗ ಆ ಎಲ್ಲರನ್ನೂ ಬಿಡುಗಡೆಗೊಳಿಸಿದ್ದು, ದರೋಡೆ ಮಾಡಿ ಪರಾರಿಯಾದ ಇಬ್ಬರ ಬಳಿಕ ಬಂಧಿಸಿ, ಮಕ್ಕಳ ಆಟಿಕೆ ಬಂದೂಕು ವಶಕ್ಕೆ ಪಡೆದಿದ್ದಾರೆ.

Advertisement

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟಪಾಡಿ ತಾಲೂಕಿನ ಕಳೇವಾಡಿಯ ಸೂರಜ ಯಶವಂತ ಸಾಸಟೆ ಹಾಗೂ ನವನೀತಕುಮಾರ ಶಹಾಜಿ ಸಾಸಟೆ ಎಂಬಾತರನ್ನು ಬಂಧಿಸಿ, 16 ಲಕ್ಷ ರೂ. ನಗದು ವಶಪಡಿಸಿಕೊಳ್ಳುವ ಮೂಲಕ ಈವರೆಗೆ ಒಟ್ಟು 1.17 ಕೋಟಿ ರೂ. ವಶಪಡಿಸಿಕೊಂಡಂತಾಗಿದೆ ಎಂದು ಎಸ್‌ಪಿ ಭೀಮಾಶಂಕರ ಗುಳೇದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ತನಿಖೆಯಲ್ಲಿ ಅಮಾಯಕರೆಂದು ಸಾಬೀತು:
ನ.15ರಂದು ಕೊಲ್ಲಾಪುರದಿಂದ ಬರುತ್ತಿದ್ದ ಕಾರನ್ನು ಸಂಕೇಶ್ವರದ ಹರಗಾಪುರ ಬಳಿ ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ದರೋಡೆ ಮಾಡಿರುವ ಬಗ್ಗೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 75 ಲಕ್ಷ ರೂ. ದರೋಡೆ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ದೂರು ಕೊಟ್ಟವರ ಮೇಲೆಯೇ ಸಂಶಯ ಬಂದು ಆರೀಫ್, ಸೂರಜ್, ಅಜಯ್ ಎಂಬ ಮೂವರ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಮ್ಮ ತನಿಖೆಯಲ್ಲಿ ಹಾಗೂ ಈ ಮೂವರಲ್ಲಿ ಸಾಮ್ಯತೆ ಕಂಡು ಬಂದಿದ್ದರಿಂದ ಇವರು ಅಮಾಯಕರೆಂದು ಗೊತ್ತಾಗಿದೆ. ದರೋಡೆಯಲ್ಲಿ ಈ ಮೂವರ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೋಟ್ಯಂತರ ರೂಪಾಯಿ ಹಣ ಸಾಗಿಸುತ್ತಿದ್ದ ಕಾರು ಬೆನ್ನಟ್ಟಿ ದರೋಡೆ ಮಾಡಿದ ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾರು ಅಡ್ಡಗಟ್ಟಿ ಆಟಿಕೆ ಬಂದೂಕು ತೋರಿಸಿ ಕಾರಿನಲ್ಲಿದ್ದ ಹಣ ಎಗರಿಸಿ ಕಾರು ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ವಿಶೇಷ ತಂಡ ರಚಿಸಿ, ಅಥಣಿ, ಸಂಕೇಶ್ವರ, ಚಿಕ್ಕೋಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.

ಸಂಕೇಶ್ವರ ಸಮೀಪದ ಕಮತಗಿ ಗೇಟ್-ನೇರ್ಲಿ ಬಳಿ ಕಾರು ನಿಲ್ಲಿಸಿ ಅದರಲ್ಲಿದ್ದ ಹಣ ಎಗರಿಸಿದ್ದರು. ಮೂರು ದಿನಗಳ ಹಿಂದೆ ಪತ್ತೆಯಾಗಿದ್ದ ಕಾರಿನಲ್ಲಿ 1.01 ಕೋಟಿ ರೂ. ಸಿಕ್ಕಿತ್ತು. ಮೂವರ ವಿಚಾರಣೆ ನಡೆಸಿದಾಗ ದರೋಡೆ ಮಾಡಿದ ಕಾರು ಬೇರೆ ಎಂಬುದು ಗೊತ್ತಾಗುತ್ತಿದ್ದಂತೆ ತನಿಖೆಯ ಆಯಾಮ ಬದಲಿಸಲಾಯಿತು. ಮಹಾರಾಷ್ಟ್ರಕ್ಕೆ ಹೋಗಿ ಕಾರಿನ ಬಣ್ಣವನ್ನು ಸಿಸಿ ಕ್ಯಾಮರಾದಲ್ಲಿ ನೋಡಿದಾಗ ಈಗ ಇಬ್ಬರನ್ನು ಬಂಧಿಸಿದಾಗ ಗೋದಾಮಿನಲ್ಲಿಟ್ಟಿದ್ದ 16 ಲಕ್ಷ ರೂ. ಸಿಕ್ಕಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next