ಕೆ.ಆರ್.ನಗರ: ಪಟ್ಟಣ ಪುರಸಭೆಯ ಆಶ್ರಯ ನಿವೇಶನಕ್ಕೆ ಸಂಬಂಧಿಸಿದಂತೆ ನಕಲಿ ಹಕ್ಕುಪತ್ರಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆಶ್ರಯ ಯೋಜನೆಯ ಎಲ್ಲಾ ಕಡತಗಳನ್ನು ಬೀರುವಿನಲ್ಲಿ ಇಟ್ಟು ಬೀಗ ಜಡಿಯ ಲಾಗಿದ್ದಲ್ಲದೆ ಶಾಸಕರ ಸಹಿ ಇರುವ ಚೀಟಿಯನ್ನು ಅಂಟಿಸುವ ಮೂಲಕ ದಿಗ್ಬಂಧನ ಹಾಕಲಾಗಿದೆ.
1992ರಲ್ಲಿ ಬಡವರಿಗೆ ಆಶ್ರಯ ನಿವೇಶನದ ಹಕ್ಕುಪತ್ರಗಳನ್ನು ವಿತರಣೆ ಮಾಡಿಯೂ ಉಳಿದಿವೆ ಎನ್ನಲಾದ ಖಾಲಿ ಹಕ್ಕುಪತ್ರಗಳು ಕೆಲ ಪ್ರಭಾವಿಗಳ ಕೈ ಸೇರಿದ್ದು, ನಿವೇಶನ ಆಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ಹಕ್ಕುಪತ್ರಗಳಲ್ಲಿ ಫಲಾನುಭವಿಯ ಹೆಸರು ಮತ್ತು ಚಕ್ಕುಬಂದಿಗಳನ್ನು ನಮೂದಿಸಿ ಮಾರಾಟ ಮಾಡಲಾಗಿದೆ.
ನಡವಳಿ ಪುಸ್ತಕ ನಾಪತ್ತೆ: ಹಕ್ಕುಪತ್ರ ಖರೀದಿಸಿದ ವ್ಯಕ್ತಿಗಳಿಂದ ಹಣ ಪಡೆದು ಪುರಸಭೆ ಅಧಿಕಾರಿಗಳು ಆಕ್ರಮವಾಗಿ ಖಾತೆ ಮಾಡಿದ್ದಾರೆ ಎನ್ನಲಾಗಿದ್ದು, ಅಂದಿನ ನಡಾವಳಿ ಪುಸ್ತಕವನ್ನು ಕೂಡ ನಾಪತ್ತೆ ಮಾಡಲಾಗಿದೆ. ಈ ಬಗ್ಗೆ ವ್ಯಾಪಕವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಸಾ.ರಾ.ಮಹೇಶ್ ಅವರು ಕಳೆದ 15 ದಿನಗಳ ಹಿಂದೆ ಪುರಸಭೆಗೆ ಭೇಟಿ ನೀಡಿದಾಗ, ಕಡತಗಳನ್ನು ಬೀರುವಿಗೆ ಹಾಕಿ ತನ್ನ° ಅನುಮತಿ ಇಲ್ಲದೆ ಇವುಗಳನ್ನು ಹೊರ ತೆಗೆಯಬಾರದು ಎಂದು ಆದೇಶಿಸಿದ್ದಾರೆ.
ನಿವೇಶನ ಹಂಚಿಕೆ ಮಾಹಿತಿಯಿಲ್ಲ: 1992ರಲ್ಲಿ ಪುರಸಭೆಯಿಂದ ಸುಮಾರು 1800 ಮಂದಿ ಬಡವರಿಗೆ ಆಶ್ರಯ ನಿವೇಶನದ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಕೆಲ ಫಲಾನುಭವಿಗಳು ಮನೆ ನಿರ್ಮಿಸಿಕೊಂಡಿದ್ದು, ಇನ್ನು ಹಲವರು 25 ವರ್ಷ ಕಳೆದರೂ ನಿವೇಶನವನ್ನು ಖಾಲಿಯಾಗಿ ಬಿಟ್ಟುಕೊಂಡಿದ್ದಾರೆ. ಅಂದು ಮುಖ್ಯಾಧಿಕಾರಿಯಾಗಿದ್ದವರು ನಿವೃತ್ತಿಯಾಗಿದ್ದು, ಎಷ್ಟು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎನ್ನುವುದಕ್ಕೆ ಲೆಕ್ಕವೇ ಇಲ್ಲ. ಆಶ್ರಯ ನಿವೇಶನಕ್ಕೆ ಸಂಬಂಧಿಸಿದ ನಡವಳಿ ಪುಸ್ತಕ ಕೂಡ ನಾಪತ್ತೆಯಾಗಿದೆ.
ಶಿಫಾರಸು, ಒತ್ತಡ: ಈ ಎಲ್ಲಾ ಗೊಂದಲದಿಂದ ನಿವೇಶನವನ್ನು ಖಾತೆ ಮಾಡಿಕೊಡುವಂತೆ ಹಲವಾರು ಮಂದಿ ನಕಲಿ ಹಕ್ಕುಪತ್ರಗಳನ್ನು ತಂದು ಅಧಿಕಾರಿಗಳ ಮೇಲೆ ಒತ್ತಡ ಹೇರು ವುದರ ಜೊತೆಗೆ ಜನಪ್ರತಿನಿಧಿಗಳಿಂದ ಶಿಫಾರಸು ಮಾಡಿಸುತ್ತಿದ್ದಾರೆ. ಶಾಸಕರ ಅಧ್ಯಕ್ಷತೆಯಲ್ಲಿ ತಿಂಗಳಿಗೊಮ್ಮೆ ಆಶ್ರಯ ನಿವೇಶನದಾರರ ಸಭೆ ನಡೆಸಿ ಹಕ್ಕು ಪತ್ರಗಳನ್ನು ಕೂಲಂಕುಶವಾಗಿ ಪರಿಶೀಲನೆ ಮಾಡಿಕೊಡಲಾಗುತ್ತದೆ. ಆದರೂ ಗೊಂದಲ ತಪ್ಪದ ಕಾರಣ ಕಡತಗಳಿಗೆ ದಿಗ್ಬಂಧನ ಹಾಕಲಾಗಿದೆ.
ಶಾಸಕರ ವರ್ತನೆ ಸರಿಯಿಲ್ಲ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸದಸ್ಯರು ಸೇವಕರೆ ಹೊರತು ಮಾಲಿಕರಲ್ಲ. ಪುರಸಭೆಯ ಆಶ್ರಯ ನಿವೇಶನದ ಕಡತಗಳನ್ನು ಬಿರುವಿಗೆ ಹಾಕಿ ಬೀಗ ಹಾಕಿರುವುದರಿಂದ ಶಾಸಕ ಸಾ.ರಾ.ಮಹೇಶ್ ಅವರು ಮಾಲಿಕರ ರೀತಿ ವರ್ತನೆ ತೋರಿದ್ದಾರೆ ಎಂದು ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್ ದೂರಿದ್ದಾರೆ. ಕಳೆದ 8 ವರ್ಷಗಳಿಂದ ಶಾಸಕರು ಮತ್ತು ಆಶ್ರಯ ಸಮಿತಿ ಅಧ್ಯಕ್ಷರಾಗಿರುವ ಅವರು ಸರಿಯಾದ ರೀತಿ ಆಶ್ರಯ ಸಮಿತಿ ಸಭೆಗಳನ್ನು ನಡೆಸಿಲ್ಲ.
ಜೊತೆಗೆ ಅವರ ಅಧಿಕಾರ ಅವಧಿಯಲ್ಲಿ ಬಡವರಿಗೆ ಒಂದು ನಿವೇಶನವನ್ನು ಹಂಚಿಕೆ ಮಾಡಿಲ್ಲ. ಆದರೂ ಸರ್ಕಾರದ ಕಡತಗಳಿಗೆ ಸ್ವಂತ ದಾಖಲಾತಿಗಳ ರೀತಿ ಬೀಗ ಹಾಕಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಅವರು, ಪಕ್ಷದ ಸದಸ್ಯರಾಗಿರುವ 12ನೇ ವಾರ್ಡ್‌ನಲ್ಲಿ ಸುಮಾರು 60 ರಿಂದ 70 ಆಶ್ರಯ ನಿವೇಶನವನ್ನು ಆಕ್ರಮವಾಗಿ ಖಾತೆ ಮಾಡಿ ಮಾರಾಟ ಮಾಡಲಾಗಿದೆ. ಈ ಬಗ್ಗೆ ಶಾಸಕರು ತನಿಖೆ ಮಾಡಿಸಬೇಕೆಂದು ಒತ್ತಾಯಿಸಿದ್ದಾರೆ.