Advertisement

ಯಾರದ್ದೋ ಹೆಸರು; ಇನ್ಯಾರಿಗೋ ಕನೆಕ್ಷನ್‌

03:45 AM Jul 04, 2018 | Team Udayavani |

ಬೈಂದೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಉಜ್ವಲಾ ಇಂಧನ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿರುವ ಸಾಧ್ಯತೆ ಗೋಚರಿಸಿದೆ. ಇದಕ್ಕೆ ಪುಷ್ಟೀಕರಣ ನೀಡು ವಂಥ ಮಾಹಿತಿ ಕುಂದಾಪುರ ತಾಲೂಕಿನಲ್ಲಿ ಲಭ್ಯವಾಗಿದೆ. ಯಾರಧ್ದೋ ಹೆಸರಿನಲ್ಲಿ ಬೇರೆ ಯಾರಿಗೋ ಗ್ಯಾಸ್‌ ಸಂಪರ್ಕ ನೀಡಿ ಕೆಲವು ವಿತರಕ ಏಜೆನ್ಸಿಗಳು ರಂಗೋಲಿಯಡಿ ನುಸುಳುವ ಪ್ರಯತ್ನ ನಡೆಸಿರುವ ಆರೋಪ ಕೇಳಿಬಂದಿದೆ. ಇದರಿಂದ ನೂರಾರು ಬಿ.ಪಿ.ಎಲ್‌. ಕಾರ್ಡುದಾರರು ಶಾಶ್ವತವಾಗಿ ಅಡುಗೆ ಅನಿಲ ಸಂಪರ್ಕ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.

Advertisement

ಏನಿದು ಯೋಜನೆ?: ಕೇಂದ್ರ ಸರಕಾರವು ಬಡ ಮಹಿಳೆಯರಿಗೆ ಸುರಕ್ಷೆ ಹಾಗೂ ಗೌರವ ನೀಡುವ ನೆಲೆಯಲ್ಲಿ ಪ್ರಧಾನಮಂತ್ರಿ ಉಜ್ವಲಾ ಯೋಜನೆಯನ್ನು ‘ಸ್ವಚ್ಛ ಇಂಧನ -ಉತ್ತಮ ಜೀವನ’ ಪರಿಕಲ್ಪನೆಯಡಿ ನೀಡಿತ್ತು. ಇದರಡಿ ಬಿಪಿಎಲ್‌ ಕಾರ್ಡುದಾರರು, ಪರಿಶಿಷ್ಟ ಜಾತಿ- ಪಂಗಡದ‌ ಮಹಿಳೆಯರು ಸಂಪೂರ್ಣ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಪಡೆಯಬಹುದು. ಇದರಿಂದ‌ ಸಾವಿರಾರು ಕುಟುಂಬಗಳು ಅಡುಗೆಗೆ ಕಟ್ಟಿಗೆ ಮತ್ತು ಇತರ ಇಂಧನ ಅವಲಂಬಿಸುವುದನ್ನು ತಪ್ಪಿಸುವುದು ಸರಕಾರದ ಉದ್ದೇಶವಾಗಿತ್ತು. ಈ ಯೋಜನೆಯಡಿ ಅನಿಲ ಸಂಪರ್ಕವನ್ನು ಎಸ್‌.ಇ.ಸಿ.ಸಿ. ವೆಬ್‌ ಸೈಟ್‌ ನಲ್ಲಿ ಎ.ಎಚ್‌.ಎಲ್‌. ಟಿನ್‌ ನಂಬರ್‌ ಆಧಾರದಲ್ಲಿ ಒದಗಿಸಬೇಕು. 29 ಡಿಜಿಟ್‌ ಗಳ ಈ ಸಂಖ್ಯೆಯಲ್ಲಿ ಆಯಾ ಕುಟುಂಬ ಸದಸ್ಯರ ಸಂಪೂರ್ಣ ವಿವರಗಳಿರುತ್ತವೆ. ಹೀಗಾಗಿ ಯೋಜನೆಯ ಸಂಪರ್ಕ ನೀಡುವ ವಿತರಕರು ಈ ದಾಖಲೆಯನ್ನು ಪರಿಶೀಲಿಸಿಯೇ ನೀಡಬೇಕು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಆದರೆ ಆಗುತ್ತಿರುವುದು ಬೇರೆ. ಸಾಮಾನ್ಯವಾಗಿ ಬಹುತೇಕ ಕುಟುಂಬಗಳು ಈಗಾಗಲೇ ಗ್ಯಾಸ್‌ ಸಂಪರ್ಕ ಹೊಂದಿವೆ. ಉಜ್ವಲಾ ಯೋಜನೆಯ ಮಾಹಿತಿ ಇರುವ ಹಲವರು ಸೌಲಭ್ಯ ಪಡೆದಿದ್ದರೂ ಗ್ರಾಮೀಣ ಭಾಗದ ನೂರಾರು ಕುಟುಂಬಗಳು ಇದರಿಂದ ವಂಚಿತವಾಗಿವೆ. ಇತ್ತೀಚೆಗೆ ಕೇಂದ್ರ ಸರಕಾರ ಅಗತ್ಯ ಮಾಹಿತಿಯನ್ನು ಮನೆ ಮನೆಗೆ ತಲುಪಿಸಿದೆ. ಕೇಂದ್ರ ಸರಕಾರದ ಯೋಜನೆಯ ಲಾಭ ಅರ್ಹ ಫ‌ಲಾನುಭವಿಗಳಿಗೆ ಸಿಗಬೇಕು. ಈ ರೀತಿಯ ದುರುಪಯೋಗ ತಡೆಯಲು ಕೇಂದ್ರ ಹಾಗೂ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು. ಅಕ್ರಮ ವಿತರಣೆ ಕುರಿತು ಸಮಗ್ರ ತನಿಖೆಯಾಗಬೇಕು. ಅರ್ಹ ನಾಗರಿಕರಿಗೆ ಅನ್ಯಾಯವಾಗಿರುವಾಗ ಜಿಲ್ಲಾಡಳಿತ ಸಮಗ್ರ ತನಿಖೆಗೆ ಆದೇಶಿಸಿ ನ್ಯಾಯ ಕಲ್ಪಿಸಬೇಕು ಎಂಬುದು ಜನರ ಆಗ್ರಹ.

ಇಲ್ಲೊಂದು ಪ್ರಕರಣ
ಬೈಂದೂರಿನ ಗ್ರಾಮೀಣ ಭಾಗದ ಕೆಲವರು ಉಜ್ವಲಾ ಅನಿಲ ಸಂಪರ್ಕ ಪಡೆಯಲು ವಿತರಕರನ್ನು ಸಂಪರ್ಕಿಸಿದಾಗ ‘ನಿಮಗೆ ಈಗಾಗಲೇ ಅನಿಲ ಸಂಪರ್ಕ ನೀಡಲಾಗಿದೆ’ ಎಂಬ ಉತ್ತರ ಲಭಿಸಿತು. ಇದರಿಂದ ಕೋಪಗೊಂಡ ಕೆಲವರು, ನಮಗೆ ಗ್ಯಾಸ್‌ ಸಂಪರ್ಕ ಕೊಟ್ಟಿಲ್ಲ. ಕೊಡಿ ಎಂದು ಪಟ್ಟು ಹಿಡಿದರು. ಕೊನೆಗೂ ನ್ಯಾಯ ಸಿಗದ ಪರಿಣಾಮ ಇದರ ಬಗ್ಗೆ ಮಾಹಿತಿ ಇಲ್ಲದ, ನಿಜವಾಗಿ ಗ್ಯಾಸ್‌ ಸಂಪರ್ಕವನ್ನೂ ಪಡೆದಿರದ ಗ್ರಾಹಕರು ವಿತರಕರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಸಮಗ್ರವಾಗಿ ಪರಿಶೀಲಿಸಿದಾಗ ತಾಲೂಕು ವ್ಯಾಪ್ತಿಯಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಯೋಜನೆಯ ಲಾಭ ಪಡೆದಿಲ್ಲ. ಸಂಪರ್ಕಗಳಲ್ಲಿ ಗ್ರಾಹಕರ ಹೆಸರು ಮಾತ್ರ ಸರಿಯಾಗಿದೆ. ಆದರೆ ವಿಳಾಸ ಸಂಪೂರ್ಣ ಬೇರೆ. ಜಡ್ಕಲ್‌ ನ ಗ್ರಾಹಕರಿಗೆ ಗಂಗೊಳ್ಳಿಯ ವಿಳಾಸವಿದೆ. ಅಂದರೆ ಯಾರದೋ ಹೆಸರಿನಲ್ಲಿ ಇನ್ಯಾರಿಗೋ ಸಂಪರ್ಕ ಎಂಬಂತಾಗಿದೆ. ಇತರೆಡೆಯೂ ಅಕ್ರಮ ನಡೆದಿರುವ ಸಾಧ್ಯತೆ ಇದ್ದು, ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಸಂಪರ್ಕಗಳು ಅರ್ಹರಿಗೆ ಮುಟ್ಟಿಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ.

2011ರ ಗಣತಿ ಆಧಾರದಲ್ಲಿ ಅರ್ಹ ಫಲಾನುಭವಿಗಳಿಗೆ ಉಜ್ವಲಾ ಯೋಜನೆಯಡಿ ಅನಿಲ ಸಂಪರ್ಕ ನೀಡಲಾಗುತ್ತದೆ. ಇದರ ಮೇಲುಸ್ತುವಾರಿಗೆ ಪ್ರತ್ಯೇಕ ಕೇಂದ್ರ ಸರಕಾರದ ನೋಡಲ್‌ ಅಧಿಕಾರಿ ನೇಮಿಸಲಾಗಿದೆ.ವಿತರಕರಿಂದ ಇದರ ದುರುಪಯೋಗವಾಗಿರುವ ಕುರಿತು ಕೂಲಂಕಷ ತನಿಖೆ ಮಾಡಲಾಗುತ್ತದೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಜಿಲ್ಲಾಧಿಕಾರಿ, ಉಡುಪಿ

Advertisement

ನಮ್ಮ ಸಿಬಂದಿಯಿಂದ ಈ ರೀತಿಯ ಅಚಾತುರ್ಯ ನಡೆದಿರಬಹುದು. ಇದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಇಂತಹ ಗ್ರಾಹಕರಿಗೆ ಸ್ವಂತ ಖರ್ಚು ಭರಿಸಿ ಗ್ಯಾಸ್‌ ಸಂಪರ್ಕ ನೀಡಲು ಬದ್ಧನಾಗಿದ್ದೇನೆ.
– ರಾಜೇಶ್‌ ಶೇರಿಗಾರ್‌, ಮಲ್ಲಿಕಾರ್ಜುನ ಏಜೆನ್ಸಿ, ಗಂಗೊಳ್ಳಿ

ಒಮ್ಮೆ ಸಂಪರ್ಕ ಪಡೆದ ಗ್ರಾಹಕರಿಗೆ ನಾವು ಪುನಃ ಸಂಪರ್ಕ ನೀಡಲು ಸಾಧ್ಯವಿಲ್ಲ. ಈ ರೀತಿ ಸಂಪರ್ಕ ನೀಡುವುದು ಕಾನೂನು ಪ್ರಕಾರ ಅಪರಾಧ. ಹೀಗಾಗಿ ಗ್ರಾಹಕರಿಗೆ ವಾಸ್ತವ ವಿಚಾರವನ್ನು ತಿಳಿಸಿದ್ದೇವೆ.
– ವೆಂಕಟೇಶ ಕಿಣಿ, ಭಾರತ್‌ ಗ್ಯಾಸ್‌, ಬೈಂದೂರು

— ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next