Advertisement

ನಕಲಿ ಜಾತಿ ಪ್ರಮಾಣ ಪತ್ರ: ಕ್ರಮಕ್ಕೆ ಆಗ್ರಹ

10:50 AM Jul 05, 2020 | Suhan S |

ಬಳ್ಳಾರಿ: ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಲೆಮಾರಿ ಅಭಿವೃದ್ಧಿ ಕೋಶದಿಂದ 9 ಲಕ್ಷ ರೂ.ಗಳ ಸಾಲ ಮಂಜೂರಾತಿ ಮಾಡಿಸಿಕೊಂಡಿರುವ ಎಂ.ಸಿ. ಲೋಕಪ್ಪ ಎನ್ನುವವರ ವಿರುದ್ಧ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಾವಾದ) ಯ ಸೋಮಪ್ಪ ಚಲವಾದಿ, ಮಲ್ಲಿಕಾರ್ಜುನ ಬೈಲೂರು ಆಗ್ರಹಿಸಿದ್ದಾರೆ.

Advertisement

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆಯ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಮಹಾರಾಜಹಟ್ಟಿ ಗ್ರಾಮದ ನಿವಾಸಿಯಾಗಿದ್ದ ಎಂ.ಸಿ. ಲೋಕಪ್ಪ ಎಂಬುವವರು ಮೂಲತಃ ದೊಂಬಿದಾಸ ಜಾತಿಗೆ ಸೇರಿದವಾಗಿದ್ದು, ಪರಿಶಿಷ್ಟ ಜಾತಿಯಲ್ಲಿ ಬರುವ ಚನ್ನದಾಸರ ಎಂದು ನಕಲು ಜಾತಿ ಪ್ರಮಾಣ ಪತ್ರವನ್ನು ಪಡೆದು, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಲೆಮಾರಿ ಅಭಿವೃದ್ಧಿ ಕೋಶದಿಂದ 9 ಲಕ್ಷ ರೂ.ಗಳ ಸಾಲ ಮಂಜೂರಾತಿ ಮಾಡಿಸಿಕೊಂಡು ಪರಿಶಿಷ್ಟ ಜಾತಿ ವ್ಯಾಪ್ತಿಯಲ್ಲಿನ ಅಲೆಮಾರಿಗಳಿಗೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿದರು.

ಎಂ.ಸಿ. ಲೋಕಪ್ಪ ಅವರ ತಂದೆ ಆರ್‌. ಎಂ.ಚಂದ್ರಪ್ಪ ಎಂಬುವವರು ಮಹಾರಾಜಹಟ್ಟಿಯಲ್ಲಿ ಗ್ರಾಪಂ ಸದಸ್ಯರಾಗಿದ್ದು ಅಲ್ಲಿ ದೊಂಬಿದಾಸ ಎಂದು ಜಾತಿ ಪ್ರಮಾಣ ಪತ್ರವನ್ನೂ ಸಲ್ಲಿಸಿದ್ದಾರೆ. ಆದರೆ, ಅವರ ಮಗನಾದ ಎಂ.ಸಿ.ಲೋಕಪ್ಪ ಎನ್ನುವವರು ಜಗಳೂರು ಮತ್ತು ಬಳ್ಳಾರಿ ಎರಡು ತಾಲೂಕುಗಳಲ್ಲೂ ಚನ್ನದಾಸರ ಎಂದು ನಕಲು ಜಾತಿ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ಜತೆಗೆ ಆತನ ಮಕ್ಕಳಿಗೂ ಚನ್ನದಾಸರ ಎಂದೇ ಜಾತಿ ಪ್ರಮಾಣವನ್ನು ಪಡೆದಿದ್ದಾರೆ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಾಗಿದ್ದರೂ ತನಿಖೆ ನಡೆಸುವಲ್ಲಿ ಪೊಲೀಸರು ವಿನಾಕಾರಣ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಪತ್ರಕರ್ತ ಎಂದು ಹೇಳಿಕೊಳ್ಳುವ ಲೋಕಪ್ಪ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೂ ಬೆದರಿಸುತ್ತಿದ್ದಾನೆ. ಹಾಗಾಗಿ ನಕಲು ಜಾತಿ ಪ್ರಮಾಣ ಪತ್ರ ಪಡೆದಿರುವ ಲೋಕಪ್ಪ ವಿರುದ್ಧ ಕೂಡಲೇ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಬಿ.ನಾಗೇಂದ್ರ, ಸಿ.ಶರಣಬಸಪ್ಪ, ಹುಲುಗಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next