ನವದೆಹಲಿ: ಮದುವೆಯಾಗುತ್ತೇನೆ ಎಂದು ಹೇಳಿ ಹಣ ಪಡೆದುಕೊಂಡು, ವಂಚಿಸುವ ಘಟನೆಗಳನ್ನು ನಾವು ನೋಡಿದ್ದೇವೆ. ಮದುವೆಯಾದ ಬಳಿಕ ಮೋಸ ಮಾಡುವುದನ್ನು ಕೇಳಿದ್ದೇವೆ. ಇಲ್ಲೊಂದು ಘಟನೆ ಇವೆಲ್ಲಕ್ಕೂ ಮಿಗಿಲಾಗಿದೆ.
ರಷ್ಯಾದ ವ್ಯಕ್ತಿಯೊಬ್ಬ ತಾನು ಗಗನಯಾತ್ರಿ ಎಂದು ಮಹಿಳೆಯೊಬ್ಬಳ ಮನಸ್ಸು ಗೆದ್ದು ಅವರಿಂದ ಲಕ್ಷ ಗಟ್ಟಲೇ ಪಡೆದು ವಂಚಿಸಿದ್ದಾರೆ ಎಂದು ಜಪಾನಿನ ಟಿವಿ ಅಸಾಹಿ ವರದಿ ಮಾಡಿದೆ.
ಜಪಾನ್ ಮೂಲದ 65 ವರ್ಷದ ಮಹಿಳೆಯೊಬ್ಬರು ಇನ್ಸ್ಟಾಗ್ರಾಮ್ ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಕಾಶದಲ್ಲಿ ಕೆಲಸ ಮಾಡಿಕೊಂಡಿರುವ ಗಗನಯಾತ್ರಿ ಎಂದು ಪ್ರೂಫೈಲ್ ನಲ್ಲಿ ಬರೆದುಕೊಂಡಿರುವ ವ್ಯಕ್ತಿಯ ಸ್ನೇಹ ಬೆಳೆಸಿಕೊಂಡಿದ್ದಾರೆ. ಆತನ ಪ್ರೂಫೈಲ್ ನಲ್ಲಿ ಗಗನಯಾತ್ರಿಯಂತೆ ನಾನಾ ಫೋಟೋಗಳನ್ನು ಹಾಕಿದ್ದು, ಮಹಿಳೆ ಇದನ್ನು ನೋಡಿ ಆಕರ್ಷಣೆಗೊಂಡಿದ್ದಾರೆ.
ಜೂನ್ ನಲ್ಲಿ ಇಬ್ಬರು ಮೆಸೇಜ್ ಗಳನ್ನು ಮಾಡಲು ಶುರು ಮಾಡಿದ್ದಾರೆ. ಒಬ್ಬರನ್ನೊಬ್ಬರು ಭೇಟಿಯಾಗದೇ ಇದ್ದರೂ, ಇಬ್ಬರಲ್ಲೂ ಆತ್ಮೀಯತೆ ಬೆಳೆಯುತ್ತದೆ. ಒಂದು ದಿನ ವ್ಯಕ್ತಿ ಮಹಿಳೆಗೆ ಪ್ರೇಮ ನಿವೇದನೆಯನು ಮಾಡಿ, ಮದುವೆಯಾಗುವುದಾಗಿ ಹೇಳುತ್ತಾರೆ. ನಿಮ್ಮೊಂದಿಗೆ ಹೊಸ ಬದುಕನ್ನು ಶುರು ಮಾಡುತ್ತೇನೆ ಎಂದು ಬಣ್ಣಬಣ್ಣದ ಮಾತುಗಳನ್ನಾಡಿ ಮಹಿಳೆಯ ಮನಸ್ಸು ಗೆದ್ದಿದ್ದಾರೆ.
ಗಗನಯಾತ್ರಿಯೆಂದು ನಂಬಿಸಿದ್ದ ವ್ಯಕ್ತಿ ತಾನು ಭೂಮಿಗೆ ಮರಳಲು, ಆ ಬಳಿಕ ನಿಮ್ಮನ್ನು ಮದುವೆಯಾಗಲು ಒಂದಷ್ಟು ಹಣಬೇಕು. ಇಲ್ಲಿ ಸರಿಯಾದ ಫೋನ್ ಸೇವೆಗಳಿಲ್ಲ. ನಾವು ಗಗನಯಾತ್ರಿಗಳು ಇಲ್ಲಿ ಬಾಹ್ಯಾಕಾಶದ ನೆಟ್ವರ್ಕ್ ನ್ನು ಬಳಸಬೇಕು. ಜಪಾನ್ ಗೆ ರಾಕೆಟ್ ಬರಲು ಹಣ ಪಾವತಿಸಬೇಕು. ಅದಕ್ಕಾಗಿ ಹಣಬೇಕೆಂದು ಮಹಿಳೆಯಲ್ಲಿ ಹೇಳಿದ್ದಾರೆ.
ಇದೇ ಸತ್ಯವೆಂದು ನಂಬಿದ ಮಹಿಳೆ ವ್ಯಕ್ತಿಗೆ ಆಗಸ್ಟ್ 19 ರಿಂದ ಸೆ.5 ರವರೆಗೆ ಐದು ಹಂತದಲ್ಲಿ ಒಟ್ಟು 24.8 ಲಕ್ಷ ರೂ.ಗಳನ್ನು ಕೊಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಬಳಿಕವೂ ಹಣವನ್ನು ಕೇಳಿದ ವ್ಯಕ್ತಿ ಬಗ್ಗೆ ಮಹಿಳೆ ಸಂಶಯಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ರೊಮ್ಯಾನ್ಸ್ ಸ್ಕ್ಯಾಮ್ ನಡಿಯಲ್ಲಿ ದಾಖಲಿಸಿ ತನಿಖೆ ನಡೆಸಿದ್ದಾರೆ. ರೊಮ್ಯಾನ್ಸ್ ಸ್ಕ್ಯಾಮ್ ಜಪಾನ್ ನಲ್ಲಿ ಲಾಕ್ ಡೌನ್ ಬಳಿಕ ಹೆಚ್ಚಾಗಿ ಕಂಡು ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಸುಳ್ಳುಗಳನ್ನು ಹೇಳಿ ಹಣ ವಂಚಿಸುವ ಪ್ರಕರಣ ಇದಾಗಿದೆ.