Advertisement

ಫೇರ್‌ನೆಸ್‌ ಕ್ರೀಮ್‌ಗಳು

12:30 AM Feb 22, 2019 | |

ರಾಸಾಯನಿಕಯುಕ್ತ ಶ್ವೇತ ತ್ವಚೆಯ ಕ್ರೀಮ್‌ಗಳನ್ನು ಬಳಸುವುದರಿಂದ ಮೊಗದ ಚರ್ಮಕ್ಕೆ ದೀರ್ಘ‌ಕಾಲೀನ ಹಾನಿಯುಂಟಾಗುತ್ತದೆ. ಇದನ್ನು ತಡೆಗಟ್ಟಲು ನಿಸರ್ಗದತ್ತವಾದ ತ್ವಚೆಯ ಶ್ವೇತವರ್ಣಕಾರಕ ದ್ರವ್ಯಗಳಿಂದ ಮನೆಯಲ್ಲಿಯೇ ಫೇರ್‌ನೆಸ್‌  ಕ್ರೀಮ್‌ಗಳನ್ನು ತಯಾರಿಸಬಹುದು.

Advertisement

ಚಂದನ-ಎಲೋವೆರಾದ ಕ್ರೀಮ್‌
2 ಚಮಚ ಚಂದನದ ಪುಡಿಗೆ 2 ಚಮಚ ತಾಜಾ ಎಲೋವೆರಾ ತಿರುಳು ಬೆರೆಸಿ, 4 ಚಮಚ ಶುದ್ಧ ಗುಲಾಬಿ ಜಲ ಹಾಗೂ 10 ಹನಿ ಬಾದಾಮಿ ತೈಲ ಬೆರೆಸಬೇಕು. ಈ ಸಾಮಗ್ರಿಗಳನ್ನು ಬ್ಲೆಂಡರ್‌ನಲ್ಲಿ ಚೆನ್ನಾಗಿ ಬ್ಲೆಂಡ್‌ ಮಾಡಬೇಕು. ಇದನ್ನು ಗಾಜಿನ ಬಾಟಲಲ್ಲಿ ಸಂಗ್ರಹಿಸಿ, ಫ್ರಿಜ್‌ನಲ್ಲಿಡಬೇಕು. ನಿತ್ಯ ರಾತ್ರಿ ಮಲಗುವಾಗ ಹಾಗೂ ಬೆಳಿಗ್ಗೆ ಮುಖ ತೊಳೆದ ಬಳಿಕ ಈ ಕ್ರೀಮ್‌ನ್ನು ಲೇಪಿಸಿ ಮಾಲೀಶು ಮಾಡಬೇಕು. ಇದು ತ್ವಚೆಯ ಫೇರ್‌ನೆಸ್‌ ಕ್ರೀಮ್‌ ಆಗಿದೆ.

ಆಲಿವ್‌ತೈಲ, ಜೇಷ್ಠಮಧು ಚೂರ್ಣದ ಕ್ರೀಮ್‌
2 ಚಮಚ ಆಲಿವ್‌ ತೈಲಕ್ಕೆ , 2 ಚಮಚ ಎಲೋವೆರಾ ತಿರುಳು, 1 ಚಮಚ ಜೇಷ್ಠಮಧು ಪುಡಿ (ಲಿಕೊರಿಸ್‌ ಪೌಡರ್‌) ಬೆರೆಸಿ, 3 ಚಮಚ ಕಿತ್ತಳೆ ರಸ ಸೇರಿಸಬೇಕು. ಇವು ನೈಸರ್ಗಿಕವಾಗಿ ತ್ವಚೆಯನ್ನು ಬ್ಲೀಚ್‌ ಮಾಡುತ್ತದೆ. ಹಾಗೂ ಮೊಗದ ಕಾಂತಿ ಹೆಚ್ಚಿಸುತ್ತದೆ.

ಕಾಯಿಹಾಲು-ಗ್ಲಿಸರಿನ್‌ ಕ್ರೀಮ್‌
ಕಾಯಿಹಾಲು 2 ಚಮಚ, 1 ಚಮಚ ಗ್ಲಿಸರಿನ್‌, 4 ಚಿಟಿಕೆ ಅರಸಿನಪುಡಿ, 2 ಚಮಚ ಶ್ರೀಗಂಧದ ಪುಡಿ- ಇವೆಲ್ಲವನ್ನೂ ಬೆರೆಸಿ ಚೆನ್ನಾಗಿ ಮಿಶ್ರ ಮಾಡಬೇಕು. ಇದನ್ನು ಮುಖಕ್ಕೆ ಲೇಪಿಸಿ ಮಾಲೀಶು ಮಾಡಬೇಕು. ರಾತ್ರಿ ಲೇಪಿಸಿ ಬೆಳಿಗ್ಗೆ ತೊಳೆಯಬೇಕು. ಮತ್ತು ಬೆಳಿಗ್ಗೆ ಲೇಪಿಸಿ ಒಂದು ಗಂಟೆಯ ಬಳಿಕ ತೊಳೆಯಬೇಕು. ಹೀಗೆ ದಿನನಿತ್ಯ ಲೇಪಿಸುವುದರಿಂದ ಮೊಗದ ಚರ್ಮ ಶ್ವೇತವರ್ಣವನ್ನು ಪಡೆಯುತ್ತದೆ.

ಸೂರ್ಯಕಾಂತಿ ಬೀಜ ಹಾಗೂ ಹಾಲಿನ ಕೆನೆಯ ಕ್ರೀಮ್‌
2 ಚಮಚ ಸೂರ್ಯಕಾಂತಿ ಬೀಜಗಳನ್ನು ಹಾಗೂ 6 ದಳ ಕೇಸರಿಯನ್ನು ನೆನೆಸಿಡಬೇಕು. ತದನಂತರ ಅರೆದು ಪೇಸ್ಟ್‌ ತಯಾರಿಸಿ, ಅದಕ್ಕೆ ಹಾಲಿನ ಕೆನೆ ಬೆರೆಸಿ ಚೆನ್ನಾಗಿ ಮಿಶ್ರ ಮಾಡಬೇಕು. ಈ ಕ್ರೀಮನ್ನು ಮುಖ, ಕುತ್ತಿಗೆ, ಕೈಕಾಲುಗಳಿಗೆ ಲೇಪಿಸಿ ವರ್ತುಲಾಕಾರವಾಗಿ ಮಾಲೀಶು ಮಾಡಬೇಕು. ಇದು ಮಕ್ಕಳಿಗೂ ಉಪಯುಕ್ತ. ಒಣ ಚರ್ಮ ಉಳ್ಳವರಲ್ಲಿ, ಚರ್ಮ ಸ್ನಿಗ್ಧವಾಗಲು ಹಾಗೂ ಶ್ವೇತವರ್ಣ ಪಡೆಯಲು ಈ ಕ್ರೀಮ್‌ ಉಪಯುಕ್ತವಾಗಿದೆ.

Advertisement

ಬಾದಾಮಿ-ತೈಲ ಜೇನುಮೇಣದ ಕ್ರೀಮ್‌
ಬಾದಾಮಿ ತೈಲ 2 ಚಮಚ, ಜೇನುಮೇಣ 2 ಚಮಚ, ವಿಟಮಿನ್‌ “ಈ’ ತೈಲ 5 ಹನಿ, ಕೊಬ್ಬರಿ ಎಣ್ಣೆ 1 ಚಮಚ.
ಮೊದಲು ಜೇನುಮೇಣವನ್ನು ಕರಗಿಸಿ, ತದನಂತರ ಅದಕ್ಕೆ ಬಾದಾಮಿ ತೈಲ, ವಿಟಮಿನ್‌ “ಈ’ ತೈಲ ಹಾಗೂ ಕೊಬ್ಬರಿ ಎಣ್ಣೆ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ನಿತ್ಯ ಬೆಳಿಗ್ಗೆ-ರಾತ್ರಿ 2 ಬಾರಿ ಲೇಪಿಸುವುದರಿಂದ ತ್ವಚೆ ಬಿಳಿಯಾಗುತ್ತದೆ.

ಸ್ಟ್ರಾಬೆರಿ-ಮುಲ್ತಾನಿಮಿಟ್ಟಿ  ಕ್ರೀಮ್‌
4 ಚಮಚ ಸ್ಟ್ರಾಬೆರಿ ಪೇಸ್ಟ್‌ , 2 ಚಮಚ ಮುಲ್ತಾನಿಮಿಟ್ಟಿ , 10 ಹನಿ ಜಾಸ್ಮಿನ್‌ ತೈಲ, 2 ಚಮಚ ಗುಲಾಬಿ ಜಲ, 2 ಚಮಚ ಚಂದನದ ಪುಡಿ- ಇವೆಲ್ಲವನ್ನೂ ಬ್ಲೆಂಡರ್‌ನಲ್ಲಿ ಚೆನ್ನಾಗಿ ಬ್ಲೆಂಡ್‌ ಮಾಡಬೇಕು. ನಯವಾದ ಈ ಪೇಸ್ಟ್‌ನ್ನು ನಿತ್ಯ ಬೆಳಿಗ್ಗೆ ಹಾಗೂ ರಾತ್ರಿ ಲೇಪಿಸಿ ಚೆನ್ನಾಗಿ ಮಾಲೀಶು ಮಾಡಬೇಕು. 1/2 ಗಂಟೆಯ ಬಳಿಕ ತೊಳೆಯಬೇಕು. ಇದರಿಂದ ತ್ವಚೆ ಶ್ವೇತವರ್ಣ ಪಡೆಯುತ್ತದೆ.

ಬಾದಾಮಿ-ಎಲೋವೆರಾದ ಕ್ರೀಮ್‌
10 ಬಾದಾಮಿಯನ್ನು ಬಿಸಿನೀರಲ್ಲಿ 2 ಗಂಟೆ ನೆನೆಸಿ, ನಂತರ ಸಿಪ್ಪೆ ತೆಗೆದು ಅರೆದು ಪೇಸ್ಟ್‌ ಮಾಡಬೇಕು. ಇದಕ್ಕೆ 3 ಚಮಚ ಗುಲಾಬಿಜಲ, 2 ಚಮಚ ಎಲೋವೆರಾ ತಿರುಳು, 2 ಚಮಚ ಗ್ಲಿಸರಿನ್‌, 1 ಚಮಚ ಜೇನು ಬೆರೆಸಿ ಚೆನ್ನಾಗಿ ಮಿಶ್ರ ಮಾಡಬೇಕು. ಈ ಕ್ರೀಮನ್ನು ಗಾಜಿನ ಭರಣಿಯಲ್ಲಿ ಸಂಗ್ರಹಿಸಿ ಫ್ರಿಜ್‌ನಲ್ಲಿಡಬೇಕು. ನಿತ್ಯರಾತ್ರಿ ಲೇಪಿಸಿ, ನೈಟ್‌ ಕ್ರೀಮ್‌ನಂತೆ ಬಳಸಿದರೆ ಮುಖ ಕಾಂತಿ ಹಾಗೂ ಶ್ವೇತವರ್ಣವನ್ನು ಪಡೆಯುತ್ತದೆ.

ಆಲಿವ್‌ತೈಲ, ನಿಂಬೆರಸ, ಮೊಸರಿನ ಕ್ರೀಮ್‌
2 ಚಮಚ ಆಲಿವ್‌ ತೈಲ, 2 ಚಮಚ ಬಾದಾಮಿ ತೈಲ, 2 ಚಮಚ ಚಂದನದ ಪೇಸ್ಟ್‌ , 1 ಚಮಚ ಜೇಷ್ಠಮಧು ಪುಡಿ, 2 ಚಮಚ ಮೊಸರು, 1 ನಿಂಬೆಯ ರಸ- ಇವೆಲ್ಲವನ್ನೂ ಚೆನ್ನಾಗಿ ಕಲಕಿ, ಮಿಶ್ರಣ ತಯಾರಿಸಬೇಕು. ಇದನ್ನು ನಿತ್ಯರಾತ್ರಿ ಫೇಸ್‌ಪ್ಯಾಕ್‌ನಂತೆ ದಪ್ಪವಾಗಿ ಮುಖಕ್ಕೆ ಲೇಪಿಸಬೇಕು. 2 ಗಂಟೆಯ ಬಳಿಕ ತೊಳೆದರೆ ಮುಖ ಬೆಳ್ಳಗಾಗುತ್ತದೆ.

ಮಿಶ್ರತೈಲ ಮತ್ತು ಎಲೋವೆರಾ ಕ್ರೀಮ್‌
ಎಲೋವೆರಾ ತಿರುಳು 3 ಚಮಚ, ಟೀ ಟ್ರೀ ತೈಲ 4 ಹನಿ, 20 ಹನಿ ವಿಟಮಿನ್‌ “ಈ’ ತೈಲ, ಬಾದಾಮಿ ತೈಲ 1 ಚಮಚ. ಇವೆಲ್ಲವನ್ನೂ ಚೆನ್ನಾಗಿ ಕಲಕಿ ಪೇಸ್ಟ್‌ ತಯಾರಿಸಬೇಕು. ಗಾಜಿನ ಬಾಟಲಲ್ಲಿ ಹಾಕಿ ಫ್ರಿಜ್‌ನಲ್ಲಿ ಇಡಬೇಕು. ಇದನ್ನು ನಿತ್ಯ ಬೆಳಿಗ್ಗೆ-ರಾತ್ರಿ ಮುಖಕ್ಕೆ ಲೇಪಿಸಿ ಮಾಲೀಶು ಮಾಡಿದರೆ ಚರ್ಮ ಮೃದು, ಸ್ನಿಗ್ಧವಾಗುತ್ತದೆ. ಮತ್ತು ಶ್ವೇತವರ್ಣ ಪಡೆದುಕೊಳ್ಳುತ್ತದೆ. 

ಚಂದನ, ಅರಸಿನ, ಕೇಸರಿ ಕ್ರೀಮ್‌
ಚಂದನದ ಪೇಸ್ಟ್‌ 2 ಚಮಚ, ಅರಸಿನ ಪೇಸ್ಟ್‌ 1 ಚಮಚ, ಕೇಸರಿದಳ ನೀರಿನಲ್ಲಿ ಕರಗಿಸಿದ್ದು 10, ಮೊಸರು 4 ಚಮಚ, ನಿಂಬೆರಸ 2 ಚಮಚ, ಜೇನು 2 ಚಮಚ, ಗುಲಾಬಿಜಲ 2 ಚಮಚ. ಇವೆಲ್ಲವನ್ನೂ ಚೆನ್ನಾಗಿ ಮಿಶ್ರಮಾಡಿ ಪೇಸ್ಟ್‌ ತಯಾರಿಸಬೇಕು.

ಮುಖಕ್ಕೆ ನಿತ್ಯ ಬೆಳಿಗ್ಗೆ-ರಾತ್ರಿ ಲೇಪಿಸಿ 1/2 ಗಂಟೆ ಬಿಟ್ಟು ತೊಳೆಯಬೇಕು. ಮೊಸರಿನಲ್ಲಿರುವ ಲ್ಯಾಕ್ಟಿಕ್‌ ಆಮ್ಲ, ನಿಂಬೆಯಲ್ಲಿರುವ ವಿಟಮಿನ್‌ “ಸಿ’ ಅಂಶ ಇತರ ಸಾಮಗ್ರಿಗಳೊಂದಿಗೆ ಚರ್ಮವನ್ನು ನೈಸರ್ಗಿಕವಾಗಿ ಬ್ಲೀಚ್‌ ಮಾಡುವುದರ ಜೊತೆಗೆ ಕೋಮಲವಾಗಿಸುತ್ತದೆ.

ಆಲೂಗಡ್ಡೆ ರಸ, ಬಾದಾಮಿ ತೈಲ, ಜೇನಿನ ಕ್ರೀಮ್‌
ಬಾದಾಮಿ ತೈಲ 4 ಚಮಚ, ಜೇನು 2 ಚಮಚ, ನಿಂಬೆರಸ 2 ಚಮಚ, ಗುಲಾಬಿ ಜಲ 2 ಚಮಚ, ಹಸಿ ಆಲೂಗಡ್ಡೆಯ ರಸ 10 ಚಮಚ ಬೆರೆಸಿ, ಚೆನ್ನಾಗಿ ಕಲಕಬೇಕು. ಇದನ್ನು ನಿತ್ಯ ರಾತ್ರಿ ಲೇಪಿಸಿದರೆ ತ್ವಚೆ ಶುಭ್ರ ಹಾಗೂ ಶ್ವೇತವರ್ಣವನ್ನು ಪಡೆದುಕೊಳ್ಳುತ್ತದೆ.

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next