ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಯಶಸ್ವಿಯಾಯಿತು.
ನಗರದ ಹೊರವಲಯದ ಅರ್ಚಕರಹಳ್ಳಿ ಬಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿತ್ತು. ಗುರುವಾರ ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಕಾರ್ಯಕ್ಕೆ ಚಾಲನೆ ದೊರೆಯಿತು. ಸಂಜೆಯ ವೇಳೆಗೆ ಅಧಿಕೃತ ಫಲಿತಾಂಶ ಹೊರ ಬಿದ್ದಿತು.
ಜಿಲ್ಲಾ ಚುನಾವಣಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸೇರಿದಂತೆ ಚುನಾವಣಾ ಆಯೋಗ ದಿಂದ ಆಗಮಿಸಿದ್ದ ವೀಕ್ಷಕರು, 8 ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾಧಿಕಾರಿಗಳು, ಎಸ್‌ಪಿ ರಮೇಶ್ ಸ್ಥಳದಲ್ಲಿ ಹಾಜರಿದ್ದರು. ಅರೆಸೇನಾ ಪಡೆ, ಕೆ.ಎಸ್.ಆರ್.ಪಿ. ಡಿ.ಆರ್.ಪಿ, ಪೊಲೀಸ್ ಸಿಬ್ಬಂದಿ ಮತ ಎಣಿಕೆ ಕೇಂದ್ರಕ್ಕೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.
ಬಿಸಿಲು, ಮಳೆ ಸಂಭ್ರಮಾಚರಣೆ ಸಾಂಕೇತಿಕ: ಮತ ಎಣಿಕೆ ಪ್ರಗತಿಯಲ್ಲಿದ್ದ ವೇಳೆ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ, ಸಾರ್ವಜನಿಕರು, ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಲಿಲ್ಲ. ಅಂತಿಮ ಫಲಿತಾಂಶ ಹೊರಬಿದ್ದ ವೇಳೆ ಜೋರು ಮಳೆ ಬಂದಿದ್ದರಿಂದ ಸಂಸದ ಡಿ.ಕೆ.ಸುರೇಶ್ ಅವರೊಟ್ಟಿಗೆ ಬಂದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿದರಾದರು ಅದು ಸಾಂಕೇತಿಕವಾಗಿ ನಡೆಯಿತು.
ಅಧಿಕೃತ ಫಲಿತಾಂಶ ಹೊರ ಬಿದ್ದ ನಂತರ ಜಿಲ್ಲಾ ಚುನಾವಣಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಕಾಂಗ್ರೆಸ್ ಪಕ್ಷದ ವಿಜೇತ ಅಭ್ಯರ್ಥಿ ಡಿ.ಕೆ. ಸುರೇಶ್‌ಗೆ ಸಂಸದರಾಗಿ ಆಯ್ಕೆಗೊಂಡ ಪ್ರಮಾಣ ಪತ್ರ ನೀಡಿದರು.