ಜಗತ್ತು ಅದೆಷ್ಟು ವಿಶಾಲವೋ ಅಷ್ಟೇ ವೇಗವಾಗಿ ಬದಲಾಗುತ್ತಾ ಹೋಗುತ್ತಿದೆ. ವಿಚಿತ್ರವೋ ವಿಶಿಷ್ಟವೋ ವಿಚಾರಗಳು, ಯೋಚನೆಗಳು, ಆಸೆ, ಆಚರಣೆ ಎಲ್ಲವೂ ಕಾಲಕ್ಕೆ ತಕ್ಕಂತೆ ವೇಷ ಬದಲಿಸುತ್ತಿವೆ. ಆದರೆ ಏನೇ ಬದಲಾದರೂ ಬಾಲ್ಯದ ನೆನಪುಗಳು ಮಾತ್ರ ಹಾಗೇ ಇದೆ. ವಿನಾಕಾರಣ ದಾರಿ ಮಧ್ಯೆ ಸಿಕ್ಕ ಮರಕ್ಕೆ ಕಲ್ಲು ಹೊಡೆದ ನೆನಪು, ಹೂ ಕಿತ್ತು ಕಿವಿಗಿಟ್ಟ ಸವಿ ದಿನ, ನಿಂತ ನೀರಲ್ಲಿ ಆಡಿ ಮೈತುಂಬ ಕೆಸರು ಮೆತ್ತಿಕೊಂಡ ಖುಷಿ ಹೀಗೆ ಇನ್ನು ಹಲವಾರು ನೆನಪುಗಳ ಜೋಳಿಗೆಯೇ ನಮ್ಮಲ್ಲಿ ಭದ್ರವಾಗಿ ಇದೆ.
ಹಳ್ಳಿ ಎಂದರೆ ಸಾಕು ತಟ್ಟನೆ ನೆನಪಾಗುವುದೇ ಮಾವಿನ ಮರ, ತೊರೆ, ಗುಡ್ಡ ತೋಟಗಳು. ಆ ಸೊಬಗನ್ನು ಮಾತಿನಲ್ಲಿ ಹೇಳತೀರದು. ಮಾವು ಕಂಡರೆ ಸಾಕು ಅತ್ತಿತ್ತ ಕಣ್ಣು ಹಾಯಿಸಿ ಯಾರಿಲ್ಲವೆಂದು ಖಾತರಿಸಿಪಡಿಸಿಕೊಂಡು ಸನ್ನೆ ಮಾಡಲು ಇಬ್ಬರನ್ನು ನಿಲ್ಲಿಸಿ, ಮರ ಹತ್ತಿ ಹಣ್ಣು ಕೊಯ್ದು ತಿಂದ ಖುಷಿಗೆ ಸಾಟಿಯೇ ಇಲ್ಲ. ಆ ರುಚಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತೋಟದ ಯಜಮಾನ ಬಂದರು ಎಂಬ ಸನ್ನೆ ಸಿಕ್ಕಿದ್ದೆ ತಡ ಓಟಕ್ಕಿತ್ತ ನೆನಪು, ಕೈ ಕಾಲುಗಳೆಲ್ಲಾ ಗಾಯದ ಕಲೆ ಆದರೂ ಆ ನೋವಲ್ಲೂ ಖುಷಿ ಇರುತ್ತಿತ್ತು.
ಮಾವಿನ ಋತುವಿನಲ್ಲಂತೂ ದಿನನಿತ್ಯ ವಿವಿಧ ಬಗೆಯ ಮಾವಿನ ಖಾದ್ಯವೇ. ಮಾವಿನ ರಸಾಯನ, ಮಿಡಿ ಉಪ್ಪಿನಕಾಯಿ, ಮಾವಿನ ಚಟ್ನಿ ಹೀಗೆ ಬಾಯಲ್ಲಿ ನೀರೂರಿಸುವ ಬಗೆ ತಿಂಡಿಗಳು. ಏನೇ ಹೇಳಿ ಹಳ್ಳಿಯ ಸೊಬಗಿಗೆ ಸರಿಸಾಟಿ ಇನ್ನೊಂದಿಲ್ಲ.
ಗದ್ದೆ, ಹೊಲ, ತೋಟಗಳಲ್ಲಿ ಪ್ರಕೃತಿ ಮಡಿಲಲ್ಲಿ ಕೆಲಸ ಮಾಡುತ್ತಾ ಜಾನಪದ ಸೊಗಡುಗಳನ್ನು ಆಹ್ಲಾದಿಸುತ್ತಾ ಜೀವನ ಸಾಗಿಸುವ ಪರಿ ಈಗ ಕಾಣಸಿಗುವುದು ಬಲು ಅಪರೂಪ. ತಾವು ಬೆಳೆಸಿದ ಹಣ್ಣು, ತರಕಾರಿ ಗಿಡಗಳಲ್ಲಿ ಬಂದ ಫಸಲನ್ನು ಹಂಚಿಕೊಂಡು ತಿನ್ನುವ ಮನಸ್ಥಿತಿ ಹಳ್ಳಿಯಲ್ಲಿ ಮಾತ್ರ ಕಾಣಸಿಗುವುದು. ಕೂಡು ಕುಟುಂಬ, ಎಲ್ಲರ ಜತೆಗೊಂದಿಷ್ಟು ಹರಟೆ ಮಾತುಗಳು ಈಗಂತು ಎಲ್ಲವೂ ಕಣ್ಮರೆಯಾಗಿವೆ ಎಂದರೆ ತಪ್ಪಿಲ್ಲ.
ಹಬ್ಬ ಹರಿದಿನ ಬಂತೆಂದರೆ ನಮ್ಮ ಖುಷಿಗೆ ಪಾರವೇ ಇಲ್ಲ. ಹೊಸ ಬಟ್ಟೆ, ಮನೆತುಂಬ ಜನ, ನಗು, ತುಂಟಾಟ. ಆದರೆ ಈಗ ನಮ್ಮ ಯಾಂತ್ರಿಕ ಬದುಕು ಸಾಂಪ್ರದಾಯಿಕ ಕ್ಷಣಗಳನ್ನು ಕಸಿದುಕೊಂಡಿದೆ. ಅಲ್ಲಲ್ಲಿ ಕಾಣಸಿಗುವ ಹಳೆ ನೆನಪುಗಳು, ಸಾಂಪ್ರಾದಾಯಿಕ ತಿನಸುಗಳು, ಆಚರಣೆಗಳು ನಮ್ಮನ್ನು ಮತ್ತೂಮ್ಮೆ ಹಳ್ಳಿ ಜೀವನಕ್ಕೆ ಕೊಂಡೊಯ್ಯುವಂತ ಸ್ಥಿತಿ ಈಗಿ ಬಂದೊದಗಿದೆ. ಬದಲಾಗಬೇಕಿದೆ ಹಳ್ಳಿ ಸೊಬಗನ್ನು ಇನ್ನಷ್ಟು ಹೆಚ್ಚಿಸಬೇಕಿದೆ.
-ಕಾವ್ಯಾ ಪ್ರಜೇಶ್ ಗಟ್ಟಿ
ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು