Advertisement

ಮಲೆನಾಡಲ್ಲಿ ಮಾಯವಾದ ಮಳೆ

11:06 PM Jul 22, 2019 | Lakshmi GovindaRaj |

ಶಿವಮೊಗ್ಗ: ರಾಜ್ಯಕ್ಕೆ ವಿದ್ಯುತ್‌ ಪೂರೈಸುವ, ಐದು ಜಿಲ್ಲೆಗಳಿಗೆ ನೀರು ಕೊಡುವ ಜಿಲ್ಲೆಯ ಜಲಾಶಯಗಳು ಮಳೆಗಾಲ ಶುರುವಾಗಿ ಒಂದೂವರೆ ತಿಂಗಳು ಕಳೆದರೂ ಕಾಲುಭಾಗ ಕೂಡ ತುಂಬಿಲ್ಲ. ಈ ಬಾರಿ ವರುಣ ದೇವ ಮಲೆನಾಡಿನ ಮೇಲೆ ಮುನಿಸಿಕೊಂಡಂತೆ ಕಾಣುತ್ತಿದ್ದು, ಮಳೆ ಮಾರುತಗಳು ಕರಾವಳಿ ದಾಟಿ ಮಲೆನಾಡತ್ತ ಬರುತ್ತಲೇ ಇಲ್ಲ.

Advertisement

ಜೂನ್‌ ಮೊದಲ ವಾರದಲ್ಲಿ ಶುರುವಾಗುವ ನೈಋತ್ಯ ಮಾನ್ಸೂನ್‌ ಜೂನ್‌, ಜುಲೈ, ಆಗಸ್ಟ್‌ನಲ್ಲಿ ಅಬ್ಬರಿಸಬೇಕು. ಜೂನ್‌ನಲ್ಲಿ ಮಳೆ ನಾಪತ್ತೆಯಾಗಿದ್ದು, ಜೂನ್‌ ಕೊನೆಯ ದಿನ ಡ್ಯಾಂಗಳಿಗೆ ಒಳಹರಿವು ಶುರುವಾಗಿದೆ. ಮಲೆನಾಡಲ್ಲಿ ಒಂದು ವಾರ ಕಾಲ ಮಳೆ ವಾತಾವರಣ ಕಂಡು ಬಂದಿದ್ದು ಬಿಟ್ಟರೆ ಪ್ರಸ್ತುತ ಮಳೆ, ಬಿಸಿಲು ಆಟ ಮುಂದುವರಿದಿದೆ.

ಶೇ.25ರಷ್ಟೂ ಭರ್ತಿಯಾಗಿಲ್ಲ: 3 ತಿಂಗಳ ಮಳೆಯಲ್ಲಿ ಒಂದೂವರೆ ತಿಂಗಳು ಕಳೆದಿದ್ದು ಲಿಂಗನಮಕ್ಕಿ, ಭದ್ರಾ ಜಲಾಶಯಗಳು ಶೇ.25ರಷ್ಟೂ ಭರ್ತಿಯಾಗಿಲ್ಲ. ತುಂಗೆಯಲ್ಲಿ 50 ಸಾವಿರ ಕ್ಯೂಸೆಕ್‌ಗೂ ಹೆಚ್ಚು ಒಳಹರಿವು ಇರಬೇಕಿತ್ತು. ಆದರೆ, ತುಂಗೆಯ ಒಳಹರಿವು 30 ಸಾವಿರ ದಾಟಿಲ್ಲ. ಇನ್ನು ಭದ್ರೆ, ಶರಾವತಿಯಲ್ಲಿ ಈ ವರ್ಷದಲ್ಲಿ 25 ಸಾವಿರ ಕ್ಯೂಸೆಕ್‌ ತಲುಪೇ ಇಲ್ಲ. ಭದ್ರೆಯಲ್ಲಿ 12 ಸಾವಿರ ಕ್ಯೂಸೆಕ್‌ ತಲುಪಿದ್ದೇ ಈ ಬಾರಿಯ ಅತಿದೊಡ್ಡ ಒಳಹರಿವು. ಶರಾವತಿಯಲ್ಲೂ ಸಹ ಒಳಹರಿವು ಉತ್ತಮವಾಗಿಲ್ಲ. ಈವರೆಗೂ ನೀರು 25 ಸಾವಿರ ಕ್ಯೂಸೆಕ್‌ಗೂ ಮುಟ್ಟಿಲ್ಲ.

ನಾಲೆಗಳಲ್ಲಿ ನೀರು ಹರಿಯೋಲ್ಲ: ಜಲಾಶಯಗಳು ಶೇ.25ರಷ್ಟೂ ತುಂಬದ ಹಿನ್ನೆಲೆಯಲ್ಲಿ ಈ ವರ್ಷ ಮುಂಗಾರು ಹಂಗಾಮಿಗೆ ನಾಲೆಗಳಿಗೆ ನೀರು ಹರಿಸಿದಲ್ಲಿ ಬೇಸಿಗೆಯಲ್ಲಿ ಬೆಳೆ ಬೆಳೆಯುವುದಿರಲಿ, ತೋಟದ ಬೆಳೆಗಳನ್ನು ಉಳಿಸಿಕೊಳ್ಳಲು ಮತ್ತು ಕುಡಿಯುವುದಕ್ಕೂ ನೀರು ಇರುವುದಿಲ್ಲ. ಜಲಾಶಯಗಳಲ್ಲಿ ಸದ್ಯ ಇರುವ ನೀರು ಒಂದು ತಿಂಗಳ ಕಾಲ ನಿರಂತರವಾಗಿ ನಾಲೆಗಳಿಗೆ ಹರಿಸಲು ಸಹ ಸಾಲುವುದಿಲ್ಲ. ಭತ್ತ ಬೆಳೆಯಲು 85ರಿಂದ 100 ದಿನ ನೀರು ಬೇಕು.

ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆ ಬರುವ ಆಶಾವಾದದಲ್ಲಿ ನೀರು ಹರಿಸಬಹುದು. ಆದರೆ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆ ಬಂದರೂ ನದಿಗಳಲ್ಲಿ ಜೋರು ನೀರು ಹರಿಯುವಷ್ಟು, ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಬರುವ ಸಾಧ್ಯತೆ ಕಡಿಮೆ. ಜಲಾಶಯಕ್ಕೆ ನೀರು ಬಂದರೂ ನಾಲೆಗಳಿಗೆ ಹರಿಯುವುದರಿಂದ ನೀರಿನ ಮಟ್ಟ ಏರುವುದಿಲ್ಲ. ಅಂತಿಮವಾಗಿ ಇದು ಬೇಸಿಗೆ ಹಂಗಾಮಿನ ಮೇಲೆ ಪರಿಣಾಮ ಬೀರಲಿದೆ.

Advertisement

ನೀರು ಉಳಿಸಿಕೊಳ್ಳುವ ಅನಿವಾರ್ಯತೆ: 2017ರಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಮುಂಗಾರು ಹಂಗಾಮಿಗೆ ನೀರು ಬಿಟ್ಟಿರಲಿಲ್ಲ. ಬೇಸಿಗೆ ಹಂಗಾಮಿನಲ್ಲಿ ಭತ್ತ ಬೆಳೆದುಕೊಂಡಿದ್ದಲ್ಲದೆ ತೋಟದ ಬೆಳೆಗಳನ್ನೂ ಉಳಿಸಿಕೊಂಡು ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಕೊಡಲಾಗಿತ್ತು. ಇದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿತ್ತು. ಈ ಬಾರಿಯೂ ಜಲಾಶಯದ ನೀರನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಮಳೆ ಮಾಯ: ಬೇಸಿಗೆಯಲ್ಲಿ ವಾಡಿಕೆ ಮಳೆಯಾಗಿ ಜೂನ್‌ನಲ್ಲಿನ ಕೊರತೆ ಸುಧಾರಿಸುತ್ತಿತ್ತು. ಆದರೆ, ಈ ವರ್ಷ ಬೇಸಿಗೆಯಲ್ಲೂ ಮಳೆ ಮಾಯವಾಗಿದ್ದಲ್ಲದೆ ನೈಋತ್ಯ ಮಾನ್ಸೂನ್‌ ಸಹ ಒಂದು ತಿಂಗಳು ತಡವಾಯಿತು. ಜುಲೈನಲ್ಲಿ ಮೊದಲ 10 ದಿನ ಜೋರಾಗಿ ಸುರಿದ ಮಳೆ ವಾರದಿಂದ ಮತ್ತೆ ಮಾಯವಾಗಿದೆ. ಹೀಗಾಗಿ, ನದಿಗಳಲ್ಲಿ ನೀರಿನ ಹರಿವು ಮತ್ತೆ ಕಡಿಮೆಯಾಗಿದೆ. ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಭತ್ತ ನಾಟಿಗೆ ನಾಲೆಗಳಲ್ಲಿ ಯಾವಾಗ ನೀರು ಹರಿದೀತು ಎಂದು ರೈತರು ಎದುರು ನೋಡುತ್ತಿದ್ದಾರೆ. ಆದರೆ, ಸಸಿಮಡಿ ಮಾಡಲು ಸಹ ನೀರಿಲ್ಲ. ಹೀಗಾಗಿ, ಈ ಬಾರಿ ಮುಂಗಾರು ಹಂಗಾಮು ಬೆಳೆಗೆ ಅನಿಶ್ಚಿತತೆ ಎದುರಾಗಿದೆ.

ಭದ್ರಾ ಜಲಾಶಯ: ಜಲಾಶಯವು ಸುಮಾರು 2.5 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, ಬಲ ದಂಡೆ ನಾಲೆಯು ದಾವಣಗೆರೆ ಜಿಲ್ಲೆ ಮತ್ತು ಎಡ ದಂಡೆ ನಾಲೆಯು ಭದ್ರಾವತಿ, ಶಿವಮೊಗ್ಗ ತಾಲೂಕುಗಳಿಗೆ ನೀರುಣಿಸುತ್ತದೆ. ದಾವಣಗೆರೆ ನಾಲೆ ಅತಿದೊಡ್ಡ ಅಚ್ಚುಕಟ್ಟು ಹೊಂದಿದ್ದು, ನೀರಿನ ಗರಿಷ್ಠ ಬಳಕೆ ಆಗೋದು ಇಲ್ಲಿ. ಇದರ ಜತೆಗೆ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಗದಗ ಜಿಲ್ಲೆಗಳಿಗೂ ಕುಡಿವ ನೀರಿಗೂ ಇದೇ ಮೂಲವಾಗಿದೆ.

ಲಿಂಗನಮಕ್ಕಿ: ರಾಜ್ಯದಲ್ಲೇ ಅತಿ ಕಡಿಮೆ ಬೆಲೆಗೆ ವಿದ್ಯುತ್‌ (44 ಪೈಸೆ) ಪೂರೈಸುವ ಜಲಾಶಯ ಇದಾಗಿದ್ದು, ಪ್ರತಿ ದಿನ ಗರಿಷ್ಠ 24 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಉತ್ಪಾದನೆ ಮಾಡಬಹುದಾಗಿದೆ. ರಾಜ್ಯದಲ್ಲಿ ಪ್ರತಿ ದಿನ ಗರಿಷ್ಠ 230 ಮಿಲಿಯನ್‌ ಯೂನಿಟ್‌ ಬೇಡಿಕೆ ಇದ್ದು, ರಾಜ್ಯದ ಬೇಡಿಕೆಯ ಶೇ.10ರಷ್ಟು ವಿದ್ಯುತ್‌ನ್ನು ಇದೊಂದೇ ಜಲಾಶಯ ಕೊಡುವಷ್ಟು ಶಕ್ತವಾಗಿದೆ. ಈ ಬಾರಿ ಡ್ಯಾಂ ಅರ್ಧದಷ್ಟು ತುಂಬುವುದು ಕಷ್ಟವಾಗಿದೆ.

ಜಲಾಶಯದ ಇತಿಹಾಸದಲ್ಲೇ ಇಂತಹ ದಾರಿದ್ರ್ಯ ಬಂದಿರಲಿಲ್ಲ. ಆಗಸ್ಟ್‌ನಲ್ಲಿ ಉತ್ತಮ ಮಳೆಯಾದರೆ ಮಾತ್ರ ಡ್ಯಾಂ ತುಂಬಬಹುದು. ಕಳೆದ ಬಾರಿ ಡ್ಯಾಂ ತುಂಬಿತ್ತು. ಕುಡಿವ ನೀರು ಬಿಡುವ ವಿಚಾರದಲ್ಲಿ ಸಾಕಷ್ಟು ನೀರು ಪೋಲು ಮಾಡಲಾಗಿದೆ. ಜವಾಬ್ದಾರಿಯುತವಾಗಿ ಬಳಸುತ್ತಿಲ್ಲ. ಈ ಬಾರಿ ನೀರು ಕಡಿಮೆಯಾಗಿರುವುದರಿಂದ ಮುಖ್ಯವಾಗಿ ಭತ್ತ ಬೆಳೆಯುವ ರೈತರು ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಬೇಕು.
-ಕೆ.ಟಿ.ಗಂಗಾಧರ್‌, ಮಾಜಿ ಅಧ್ಯಕ್ಷರು, ರಾಜ್ಯ ರೈತಸಂಘ

* ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next