ಸಿರುಗುಪ್ಪ: ಈ ಭಾಗದ ಸಕ್ಕರೆ ಕಾರ್ಖಾನೆಯನ್ನು ನಂಬಿ ಸುಮಾರು 7 ಸಾವಿರ ಎಕರೆ ಪ್ರದೇಶದಲ್ಲಿ 2.5 ಲಕ್ಷ ಟನ್ ಕಬ್ಬು ಬೆಳೆದ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಎಂ.ಎಸ್. ಸೋಮಲಿಂಗಪ್ಪ ತಿಳಿಸಿದರು.
ತಾಲೂಕಿನ ದೇಶನೂರು ಗ್ರಾಮದ ಎನ್‌ಎಸ್ ಎಲ್ ಸಕ್ಕರೆ ಕಾರ್ಖಾನೆ ಪುನರ್ ಪ್ರಾರಂಭಿಸಲು ಗುರುವಾರ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಕಾರ್ಖಾನೆ ಆಡಳಿತ ಮಂಡಳಿಯವರು ಹೇಳಿದಾಗ ಇಲ್ಲಿನ ಕಬ್ಬು ಬೆಳೆದ ರೈತರಲ್ಲಿ ಆತಂಕ ಉಂಟಾಗಿ, ಕಾರ್ಖಾನೆಯನ್ನು ಪುನಃ ಪ್ರಾರಂಭಿಸುವಂತೆ ರೈತರು ಅನೇಕ ಹೋರಾಟ ಮಾಡಬೇಕಾಯಿತು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ| ರಾಮ್ ಪ್ರಸಾದ್ ಮನೋಹರ್ ಅವರಿಗೆ ರೈತರ ಬಗ್ಗೆ ಇದ್ದ ಕಾಳಜಿ ಹಾಗೂ ರೈತರ ಹೋರಾಟದ ಫಲವಾಗಿ ಕಾರ್ಖಾನೆ ಆಡಳಿತ ಮಂಡಳಿಯವರು ರೈತರ ಬಗ್ಗೆ ಕಾಳಜಿ ವಹಿಸಿ ಕಾರ್ಖಾನೆಯಲ್ಲಿ ಕಬ್ಬು ನುರಿಸಲು ಮುಂದಾಗಿರುವುದು ತಾಲೂಕಿನ ರೈತರಲ್ಲಿ ಖುಷಿ ತಂದಿದೆ. ಅಲ್ಲದೇ ಅಲ್ಪ ಸ್ವಲ್ಪ ಲಾಭ ಪಡೆಯುವ ಭರವಸೆಯಲ್ಲಿ ರೈತರಿದ್ದಾರೆ ಎಂದು ತಿಳಿಸಿದರು.
ರೈತ ಮುಖಂಡ ಅಶೋಕ್ ಭೂಪಾಲ್ ಮಾತನಾಡಿ, ಕಳೆದ ನವೆಂಬರ್ ತಿಂಗಳಲ್ಲಿ ಕಬ್ಬು ಕಟಾವಿಗೆ ಬಂದಿದ್ದು, ಎರಡು ತಿಂಗಳಾದರೂ ಕಬ್ಬು ಕಟಾವು ಮಾಡಲಾಗದೆ ನಮಗೆ ಸಂಕಷ್ಟ ಎದುರಾಗಿತ್ತು. ಶಾಸಕರು, ರೈತರು, ರೈತ ಮುಖಂಡರು ಸೇರಿದಂತೆ ಜಿಲ್ಲಾಧಿಕಾರಿ ಡಾ| ರಾಮ್‌ಪ್ರಸಾದ್ ಮನೋಹರ್ ಅವರೊಂದಿಗೆ ಸಮಾಲೋಚಿಸಿದಾಗ ಜಿಲ್ಲಾಧಿಕಾರಿಗಳು ರೈತರ ಕಷ್ಟಗಳನ್ನು ಮನಗಂಡು ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಿ ಕೆಲವು ಷರತ್ತುಗಳೊಂದಿಗೆ ಇತರೆ ಕಾರ್ಖಾನೆಗಳಿಗೆ ಕಬ್ಬು ರವಾನಿಸಲು ಪ್ರಯತ್ನಿಸಿದ್ದರು. ಇದರಿಂದ ಕಾರ್ಖಾನೆ ಮಾಲೀಕರು ಪುನಃ ಕಾರ್ಖಾನೆ ಕಬ್ಬು ನುರಿಸಲು ಚಾಲನೆ ನೀಡಿರುವುದರಿಂದ ರೈತರಲ್ಲಿ ಸಂತಸ ತಂದಿದೆ ಎಂದರು.
ಕಾರ್ಖಾನೆಯ ಸಿಒಒ (ಚೀಫ್ ಆಪರೇಟಿಂಗ್ ಆಫಿಸರ್) ಪ್ರಸಾದ್ ಮಾತನಾಡಿ, ಕಾರ್ಖಾನೆಯನ್ನು ಜ.5ರಂದು ಕಬ್ಬು ನುರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಮಗೆ ಎಷ್ಟೇ ನಷ್ಟವಾದರೂ ರೈತರ ಅನುಕೂಲಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ ಪ್ರಾರಂಭಿಸುತ್ತಿದ್ದೇವೆ. ರೈತರು ಪ್ರತಿದಿನ 2,500 ಟನ್ ಕಬ್ಬು ಕಾರ್ಖಾನೆಗೆ ರವಾನಿಸಿದರೆ ನಮಗೆ ತುಂಬಾ ಅನುಕೂಲವಾಗುತ್ತದೆ. ಇಲ್ಲದಿದ್ದರೆ ನಮಗೆ ಹೆಚ್ಚಿನ ನಷ್ಟವಾಗಲಿದೆ. ಆದ್ದರಿಂದ ರೈತರು ನಮಗೆ ಅನುಕೂಲಕ್ಕೆ ತಕ್ಕಂತೆ ಕಬ್ಬು ರವಾನಿಸಬೇಕೆಂದು ಮನವಿ ಮಾಡಿದರು.
ಕಾರ್ಖಾನೆಯ ಜನರಲ್ ಮ್ಯಾನೇಜರ್ ರೂಪೇಶ್‌ಕುಮಾರ್, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ್, ಗ್ರೇಡ್-2 ತಹಶೀಲ್ದಾರ್ ಬಿ.ಮಲ್ಲೇಶಪ್ಪ, ಸಹಾಯಕ ಕೃಷಿ ನಿರ್ದೇಶಕ ಪಾಲಾಕ್ಷಿಗೌಡ, ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯಸ್ವಾಮಿ, ಕಬ್ಬು ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಗೌಸ್‌ಸಾಬ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ, ರೈತ ಮುಖಂಡರಾದ ಹನುಮನಗೌಡ, ಮೊಹನ್‌ಕುಮಾರ್, ಪಾಲಾಕ್ಷಿರೆಡ್ಡಿ, ಬೇವೂರು ಬಸವನಗೌಡ, ಗೋಪಾಲರೆಡ್ಡಿ ಹಾಗೂ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.