Advertisement

ನಿರೀಕ್ಷಿತರಿಗೇ ದಕ್ಕಿತು ಬಿಜೆಪಿ ಟಿಕೆಟ್‌

12:12 PM Apr 17, 2018 | Team Udayavani |

ಬಳ್ಳಾರಿ: ಬಿಜೆಪಿ ಎರಡನೇ ಪಟ್ಟಿಯಲ್ಲಿ ಜಿಲ್ಲೆಯ 5 ಕ್ಷೇತ್ರಗಳಿಗೆ ನಿರೀಕ್ಷಿತ ಅಭ್ಯರ್ಥಿಗಳ ಹೆಸರುಗಳನ್ನೇ ಪ್ರಕಟಿಸಿದೆ. ನಾಲ್ವರು ಮಾಜಿ ಶಾಸಕರು, ಓರ್ವ ಮಾಜಿ ಸಂಸದರಿಗೆ ಟಿಕೆಟ್‌ ಘೋಷಿಸಲಾಗಿದೆ. ಆದರೆ ಕೂಡ್ಲಿಗಿ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಮಾತ್ರ ಬಾಕಿ ಉಳಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ. ಟಿಕೆಟ್‌ ಕೈ ತಪ್ಪಿದ ಹಡಗಲಿಯ ನಿವೃತ್ತ ಇಂಜನಿಯರ್‌ ಓದೋ ಗಂಗಪ್ಪ ಮಂಗಳವಾರ ಬೆಂಬಲಿಗರ ಸಭೆ ಕರೆದು ಮುಂದಿನ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದ್ದು, ಉಳಿದಂತೆ ಬಿಜೆಪಿಗೆ ಬಂಡಾಯದ ಬಿಸಿ ತಟ್ಟುವ ಸಾಧ್ಯತೆ ಕಡಿಮೆ ಇದೆ.

Advertisement

ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸಂಡೂರು ಕ್ಷೇತ್ರಕ್ಕೆ ಡಿ. ರಾಘವೇಂದ್ರ, ವಿಜಯನಗರ-ಎಚ್‌. ಆರ್‌.ಗವಿಯಪ್ಪ, ಕಂಪ್ಲಿ ಕ್ಷೇತ್ರಕ್ಕೆ ಹಾಲಿ ಶಾಸಕ ಟಿ.ಎಚ್‌.ಸುರೇಶ್‌ ಬಾಬು ಅವರ ಹೆಸರು ಪ್ರಕಟಿಸಿತ್ತು. ಈಗ ಎರಡನೇ ಪಟ್ಟಿಯಲ್ಲಿ ಹಡಗಲಿ ಕ್ಷೇತ್ರಕ್ಕೆ ಮಾಜಿ ಶಾಸಕ ಚಂದ್ರಾನಾಯ್ಕ, ಹಗರಿ ಬೊಮ್ಮನಹಳ್ಳಿಗೆ ಮಾಜಿ ಶಾಸಕ ನೇಮಿರಾಜ್‌ ನಾಯ್ಕ, ಸಿರುಗುಪ್ಪಕ್ಕೆ ಮಾಜಿ ಶಾಸಕ ಎಂ.ಎಸ್‌. ಸೋಮಲಿಂಗಪ್ಪ, ಬಳ್ಳಾರಿ ನಗರಕ್ಕೆ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ರಾಯಚೂರು ಮಾಜಿ ಸಂಸದ ಸಣ್ಣಫಕ್ಕೀರಪ್ಪ ಅವರಿಗೆ ಟಿಕೆಟ್‌ ನೀಡಲಾಗಿದೆ. ಕೂಡ್ಲಿಗಿ ಕ್ಷೇತ್ರದಿಂದ ಕೋಡಿಹಳ್ಳಿ ಭೀಮಣ್ಣ ಸೇರಿ ಹಲವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರೂ, ಹೆಸರು ಪ್ರಕಟಿಸದಿರುವುದು ಕುತೂಹಲ ಮೂಡಿಸಿದೆ. 

ಗೊಂದಲಕ್ಕೆ ತೆರೆ: ಕಳೆದ 2008ರಲ್ಲಿ ಬಿಜೆಪಿಯಿಂದ ಜಯಗಳಿಸಿ, 2013ರಲ್ಲಿ ಚುನಾವಣೆಯಿಂದ ಹಿಂದೆ ಸರಿದಿದ್ದ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ, 2018ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಪ್ರಬಲ ಆಕಾಂಕ್ಷಿ. ವರ್ಷದಿಂದಲೇ ಜನರೊಂದಿಗೆ ಬೆರೆಯುತ್ತಿದ್ದ ಇವರಿಗೆ ಟಿಕೆಟ್‌ ದೊರೆಯುವುದು ಅನುಮಾನ ಎಂಬ ಮಾತು ಎಲ್ಲೆಡೆ ಕೇಳಿಬಂದಿತ್ತು. ಮೇಲಾಗಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠದಡಿ ಡಾ| ಬಿ.ಕೆ. ಸುಂದರ್‌ ಅವರಿಗೆ ಟಿಕೆಟ್‌ ನೀಡಲಾಗುತ್ತದೆ ಎನ್ನಲಾಗುತ್ತಿತ್ತು. ಹೀಗೆ ಒಂದೆರಡು ದಿನ ಸೋಮಶೇಖರರೆಡ್ಡಿಗೆ ಟಿಕೆಟ್‌ ಖಚಿತ ಎಂದರೆ, ಮತ್ತೂಂದೆರಡು ದಿನ ಬಿ.ಕೆ. ಸುಂದರ್‌ ಅವರಿಗೆ ನೀಡಲಾಗುತ್ತದಂತೆ ಎಂಬ ಅಂತೆಕಂತೆಗಳ ಮಾತುಗಳು ಕೇಳಿಬಂದವು. ಇದು ಪಕ್ಷ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದರೆ, ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಜಿ.ಸೋಮಶೇಖರರೆಡ್ಡಿ ಅವರಿಗೆ ಟಿಕೆಟ್‌ ನೀಡಿದ್ದು, ಗೊಂದಲಗಳಿಗೆ ತೆರೆಬಿದ್ದಿದೆ.

ಪ್ರಭಾವ ಬೀರದ ಬಂಡಾಯ: ಇನ್ನು ಎಸ್‌ಸಿ ಮೀಸಲು ಕ್ಷೇತ್ರಗಳಾದ ಹಡಗಲಿ, ಹಗರಿಬೊಮ್ಮನಹಳ್ಳಿ, ಎಸ್‌ಟಿ ಮೀಸಲು ಕ್ಷೇತ್ರಗಳಾದ ಸಿರುಗುಪ್ಪ, ಬಳ್ಳಾರಿ ಗ್ರಾಮೀಣ ಕ್ಷೇತ್ರಗಳಿಗೆ ನಿರೀಕ್ಷಿತ ಅಭ್ಯರ್ಥಿಗಳ ಹೆಸರುಗಳನ್ನೇ ಪ್ರಕಟಿಸಲಾಗಿದೆ. ಹಡಗಲಿಯಲ್ಲಿ ಬಿಜೆಪಿ ಟಿಕೆಟ್‌ಗಾಗಿ ಓದೋ ಗಂಗಪ್ಪ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೂ, ಇವರಿಗೆ ಟಿಕೆಟ್‌ ದಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಗಂಗಪ್ಪ ಅವರ ಮನೆಯ ಬಳಿ ತೆರಳಿದ ಬೆಂಬಲಿಗರು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಇನ್ನು ಹ.ಬೊ.ಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹ್ಯಾಂಡ್‌ ಎಂದು ಹೇಳಿಕೊಂಡಿದ್ದ ರಾಜೇಂದ್ರ ನಾಯ್ಕ, ತಿರುಮಲೇಶ್‌ ಅವರು ಟಿಕೆಟ್‌ ವಂಚಿತರಾಗಿದ್ದು, ಬಂಡಾಯ ಏಳುವ ಸಾಧ್ಯತೆ ತೀರಾ ಕಡಿಮೆಯಿದೆ. ಅದೇ ರೀತಿ ಸಿರುಗುಪ್ಪ ಮತ್ತು ಬಳ್ಳಾರಿ ಗ್ರಾಮೀಣ, ನಗರ ಕ್ಷೇತ್ರಗಳಲ್ಲಿ ಬಂಡಾಯದ ಪ್ರಭಾವ ಹೇಳಿಕೊಳ್ಳುವಷ್ಟು ಇಲ

ಮೇಲುಗೈ ಸಾಧಿಸಿದ ರಾಮುಲು ಜಿಲ್ಲೆಯ ಮೂರು ಕ್ಷೇತ್ರಗಳಿಗೆ ರೆಡ್ಡಿ ಪಾಳಯದಲ್ಲಿ ಗುರುತಿಸಿಕೊಂಡ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡಿಸುವಲ್ಲಿ ಶ್ರೀರಾಮುಲು ಮೇಲುಗೈ ಸಾಧಿಸಿದ್ದಾರೆ. ಕಂಪ್ಲಿ ಕ್ಷೇತ್ರದ ಟಿ.ಎಚ್‌.ಸುರೇಶ್‌ಬಾಬು, ಗ್ರಾಮೀಣ ಕ್ಷೇತ್ರದಿಂದ ಸಣ್ಣ ಫಕ್ಕೀರಪ್ಪ ಮತ್ತು ನಗರ ಕ್ಷೇತ್ರದಿಂದ ಜಿ.ಸೋಮಶೇಖರ ರೆಡ್ಡಿಯವರಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Advertisement

„ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next