Advertisement

ಸರಕಾರಕ್ಕೆ ಬೆಳೆ ಹಾನಿ ವರದಿ ರವಾನೆ

08:05 AM Jan 30, 2019 | Team Udayavani |

ಕೊಟ್ಟೂರು: ಕೊಟ್ಟೂರು ಮತ್ತು ಕೂಡ್ಲಿಗಿ ತಾಲೂಕಿನಲ್ಲಿ ಬರದ ಭೀಕರತೆ ಹೆಚ್ಚಾಗಿದ್ದು, 3500 ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಹಿಂಗಾರು ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, 197.88 ಕೋಟಿ ರೂ. ನಷ್ಟ ಅನುಭವಿಸಿದ್ದಾರೆ. ಈ ಸಂಬಂಧ ಸರಕಾರಕ್ಕೆ ವರದಿ ಕಳುಹಿಸಿದ್ದು, ಸರಕಾರ ಪರಿಹಾರಧನ ನೀಡಿದ ನಂತರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು.

Advertisement

ಮಂಗಳವಾರ ಪಟ್ಟಣದ ಇಟ್ಟಿಗಿ ರಸ್ತೆಯಲ್ಲಿನ ರೈತರ ಹೊಲದಲ್ಲಿನ ಬೆಳೆಯನ್ನು ಪರಿಶೀಲಿಸಿದ ಬಳಿಕ‌ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತತ ಬರಗಾಲವನ್ನು ಈ ತಾಲೂಕಿನ ಜನತೆ ಅನುಭವಿಸುತ್ತಿದ್ದಾರೆ. ಸೂರ್ಯಕಾಂತಿ ಮತ್ತು ಕಡ್ಲೆಕಾಯಿ ಬೆಳೆ ಸಾಕಷ್ಟು ಹಾನಿಯಾಗಿದೆ ಎಂದು ತಿಳಿಸಿದರು.

ಬೆಳೆ ಹಾನಿ ಪರಿಶೀಲಿಸಲು ರಾಜ್ಯ ಸಚಿವ ಸಂಪುಟದ ಉಪ ಸಮಿತಿಯಾದ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್‌ ನೇತೃತ್ವದ ಸಮಿತಿ ಜ.31ರಂದು ಜಿಲ್ಲೆಗೆ ಭೇಟಿ ನೀಡಲಿದೆ. ಇದಕ್ಕೆಂದೇ ಪೂರ್ವಭಾವಿಯಾಗಿ ತಾವು ಕೊಟ್ಟೂರು ತಾಲೂಕಿಗೆ ಭೇಟಿ ನೀಡಿ ಬೆಳೆ ಹಾನಿಯಾಗಿರುವ ಬಗ್ಗೆ ಸಂಪೂರ್ಣ ವಿವರ ಪಡೆದು ಉಪ ಸಮಿತಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಸಚಿವ ಸಂಪುಟದ ಉಪ ಸಮಿತಿಯಲ್ಲಿ ಬಂಡೆಪ್ಪ ಕಾಶಂಪೂರ್‌, ಪ್ರಿಯಾಂಕ ಖರ್ಗೆ, ವೆಂಕಟಗೌಡ ನಾಡಗೌಡ, ಪಿ.ಟಿ.ಪರಮೇಶ್ವರ್‌ನಾಯ್ಕ, ಈ.ತುಕಾರಾಂ ಸೇರಿದಂತೆ ಇನ್ನಿತರರಿದ್ದು, ಈ ತಂಡ ಜಿಲ್ಲೆಯಲ್ಲಿ ಸಂಚರಿಸಿ ಪರಿಶೀಲಿಸುವ ಪಟ್ಟಿಯನ್ನು ಜಿಲ್ಲಾಡಳಿತ ಸಿದ್ಧಗೊಳಿಸಲಿದೆ. ಇದರ ಆಧಾರದ ಮೇಲೆ ಸಚಿವ ಸಂಪುಟ ಉಪ ಸಮಿತಿಯ ಸದಸ್ಯರು ಜಿಲ್ಲೆಯಲ್ಲಿ ಸಂಚಾರ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೊಟ್ಟೂರು ಪಟ್ಟಣ ಪಂಚಾಯತ್‌ಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಸರ್ಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಲಾಗಿದೆ. ಬರಲಿರುವ ದಿನಗಳಲ್ಲಿ ಕೊಟ್ಟೂರು ಸ್ಥಳೀಯ ಆಡಳಿತ ಪುರಸಭೆಯಾಗುವುದು ನಿಶ್ಚಿತ ಎಂದು ತಿಳಿಸಿದರು.

ನೂತನ ಕೊಟ್ಟೂರು ತಾಲೂಕಿನಲ್ಲಿ ಇದೀಗ ಕಂದಾಯ ಇಲಾಖೆ ಕಚೇರಿ ಕಾರ್ಯನಿರ್ವಹಿಸುತ್ತಿದ್ದು ಉಳಿದ ಇಲಾಖೆಗಳ ಕಚೇರಿಗಳು ಶೀಘ್ರವೇ ಕಾರ್ಯಾರಂಭಗೊಳಿಸಲು ಸರಕಾರ ಈಗಾಗಲೇ ತಯಾರಿ ಕೈಗೊಂಡಿದೆ ಎಂದು ತಿಳಿಸಿದ ಅವರು, ಕೊಟ್ಟೂರು ತಾಲೂಕನ್ನು ಹರಪನಹಳ್ಳಿ ಉಪ ವಿಭಾಗಕ್ಕೆ ಸೇರಿಸಲಾಗಿದ್ದು ಈ ಸಂಬಂಧ ಸರಕಾರ ಈಗಾಗಲೇ ಆದೇಶ ಹೊರಡಿಸಿದೆ. ಹರಪನಹಳ್ಳಿ ಇದೀಗ ಪೂರ್ಣ ಪ್ರಮಾಣದಲ್ಲಿ ಬಳ್ಳಾರಿ ಜಿಲ್ಲೆಗೆ ಸೇರಿದ ಉಪ ವಿಭಾಗ ಕೇಂದ್ರವಾಗಿದೆ ಎಂದು ತಿಳಿಸಿದರು.

Advertisement

ಗಣಿ ಅಭಿವೃದ್ಧಿ ನಿಧಿಯ ಅನುದಾನವನ್ನು ಶೇ.40ರಷ್ಟು ಪ್ರಮಾಣದಲ್ಲಿ ಗಣಿ ಪ್ರದೇಶವಲ್ಲದ ಜಿಲ್ಲೆಯ 7 ತಾಲೂಕುಗಳು ಅಭಿವೃದ್ಧಿ ಕಾಮಗಾರಿಗಳಿಗೆ ನೀಡಲಾಗುವುದು. ಶೇ.60ರಷ್ಟು ಪ್ರಮಾಣದಲ್ಲಿ ಈ ಅನುದಾನವನ್ನು ಬಳ್ಳಾರಿ, ಹೊಸಪೇಟೆ ಮತ್ತು ಸಂಡೂರು ತಾಲೂಕಿಗೆ ನೀಡಲಾಗುವುದು. ಗಣಿ ಅಭಿವೃದ್ಧಿ ನಿಧಿಯಿಂದ ಶೀಘ್ರದಲ್ಲಿಯೇ ಅನುದಾನವನ್ನು ಎಲ್ಲಾ ತಾಲೂಕಿಗೂ ಬಿಡುಗಡೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೊಟ್ಟೂರು ಪಟ್ಟಣ ಪಂಚಾಯತ್‌ ಕಚೇರಿ ಸ್ಥಳದ ಬಗ್ಗೆ ಇದ್ದ ವಿವಾದ ಬಗೆಹರಿದಿದ್ದು, ಕಚೇರಿಯ ನೂತನ ಕಟ್ಟಡ ಕಾರ್ಯ ಇದೀಗ ಆರಂಭಗೊಂಡಿದೆ. ಹಂಪಿ ಉತ್ಸವ ಆಯೋಜನೆಗೆ ಸರಕಾರದಿಂದ ಮತ್ತಷ್ಟು ಹಣ ಬಿಡುಗಡೆಯಾಗಬೇಕಿದ್ದು ಈ ಹಣ ಬರುತ್ತಿದ್ದಂತೆಯೇ ಉತ್ಸವವನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ನಿತೀಶ್‌, ಕೊಟ್ಟೂರು ತಹಶೀಲ್ದಾರ್‌ ಕೆ.ಮಂಜುನಾಥ್‌, ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಎಚ್.ಎಫ್‌.ಬಿದರಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next