ಶಹಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ವಿವಿಧೆಡೆ 18 ಸೇವಾ ಕೇಂದ್ರ ತೆರೆಯಲಾಗಿದ್ದು, ಆ ಮೂಲಕ ಗ್ರಾಮೀಣ ಭಾಗದ ರೈತಾಪಿ ಜನರಿಗೆ ಇದುವರೆಗೂ 10,501 ಇ-ಶ್ರಮ ಕಾರ್ಡ್, 1250 ಪಾನ್ ಕಾರ್ಡ್ ಹಾಗೂ 598 ಕೆವೈಸಿ ಅಪ್ಡೇಟ್ ಕಾರ್ಯ ಉಚಿತವಾಗಿ ಮಾಡಿಕೊಡಲಾಗಿದೆ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಕಮಲಾಕ್ಷ ತಿಳಿಸಿದರು.
ನಗರದ ಧರ್ಮಸ್ಥಳ ಯೋಜನೆ ಶಾಖೆಯಲ್ಲಿ ನಡೆದ ಗ್ರಾಮ ಮಟ್ಟದ ಕಾರ್ಯ ನಿರ್ವಾಹಕರ ಆಯ್ಕೆಯ ನೇರ ಸಂದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಮೊದಲು 18 ಕೇಂದ್ರಗಳ ಜೊತೆಗೆ ಇನ್ನೂ 15 ಹೊಸ ಸೇವಾ ಸಿಂಧು ಕೇಂದ್ರ ತೆರೆಯಲಾಗಿದ್ದು, ಕಾರ್ಯ ನಿರ್ವಹಿಸಲು ಕಾರ್ಯ ನಿರ್ವಾಹಕರನ್ನು ನೇರವಾಗಿ ಸಂದರ್ಶಿಸಿ ನೇಮಿಸಲಾಗುತ್ತದೆ. ನೇಮಕಗೊಂಡವರು ಸಮರ್ಪಕವಾಗಿ ಸಂಸ್ಥೆ ನಿರ್ದೇಶನದಂತೆ ಕಾರ್ಯ ನಿರ್ವಹಿಸಬೇಕು ಎಂದರು.
ಇಲ್ಲಿವರೆಗೂ 18 ಕೇಂದ್ರಗಳಲ್ಲಿ ಗ್ರಾಮೀಣ ಭಾಗದ ಜನರ ಅಗತ್ಯಕ್ಕೆ ತಕ್ಕಂತೆ ಪಾನ್ ಹಾಗೂ ಇ-ಶ್ರಮ ಕಾರ್ಡ್ ಮಾಡಿಕೊಡಲಾಗಿದೆ. ಸೇವೆ ಇನ್ನಷ್ಟು ಪ್ರಗತಿದಾಯಕಗೊಳಿಸಲು 15 ಹೆಚ್ಚಿನ ಕೇಂದ್ರ ತೆರೆಯಲಾಗಿದೆ. ಕಳೆದ 6 ವರ್ಷಗಳಿಂದ ಸ್ವ-ಸಹಾಯ ಸಂಘ, ಪ್ರಗತಿ ಬಂಧು ಸಂಘಗಳ ಮೂಲಕ ಆರ್ಥಿಕ ಹಾಗೂ ಸಾಮಾಜಿಕವಾಗಿ ಜನ ಸಾಮಾನ್ಯರನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುತ್ತಿರುವುದು ಹೆಮ್ಮೆಯ ವಿಷಯ. ಎಲ್ಲರೂ ಆಯಾ ಕೆಲಸ ಸೇವಾ ಮನೋಭಾವದೊಂದಿಗೆ ಅಚ್ಚುಕಟ್ಟಾಗಿ ಮಾಡುವ ಮೂಲಕ ಸಂಸ್ಥೆ ಯಶಸ್ವಿ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಒಟ್ಟು ತಾಲೂಕಿನಲ್ಲಿ ಇನ್ಮುಂದೆ 33 ಕೇಂದ್ರಗಳು ಕೆಲಸ ಮಾಡಲಿವೆ ಎಂದರು.
ಈ ವೇಳೆ ತಾಲೂಕು ಯೋಜನಾಧಿಕಾರಿ ಪ್ರದೀಪ್ ಹೆಗ್ಡೆ, ಸಿಎಸ್‌ಸಿ ಜಿಲ್ಲಾ ನೋಡಲ್ ಅಧಿಕಾರಿ ಸಚಿನ್, ತಾಲೂಕಿನ ಹಣಕಾಸು ಪ್ರಬಂಧಕ ಮಾರುತಿ, ನೋಡಲ್ ಅಧಿಕಾರಿಗಳು ಸೇರಿದಂತೆ ಸಂದರ್ಶನಕ್ಕೆ ಆಯ್ಕೆಯಾದ ವಿಎಲ್‌ವಿಗಳು ಇದ್ದರು.