ಹೊಸದಿಲ್ಲಿ: ದೀಪಾವಳಿ ಹಬ್ಬ ಸನಿಹವಾಗುತ್ತಿದೆ. ಈ ಹಬ್ಬಕ್ಕೆಂದು ವಿಶೇಷ ಉಡುಗೆಯನ್ನು ಪರಿಚಯಿಸಲು ಹೋದ ಫ್ಯಾಬ್‌ಇಂಡಿಯಾ ಸಂಸ್ಥೆ, ದೀಪಾವಳಿ ಹಬ್ಬವನ್ನುಜಶ್ನ್-ಎ-ರಿವಾಜ್ (ಸಂಪ್ರದಾಯಗಳ ಸಂಭ್ರಮ) ಎಂದು ಕರೆದಿದ್ದು, ಸಂಕಷ್ಟಕ್ಕೆ ಸಿಲುಕಿದೆ. ಹಲವಾರು ಮಂದಿ ಕಂಪೆನಿಯ ಈ ನಡೆಯನ್ನು ಟೀಕಿಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ಜಾಹೀರಾತನ್ನು ಸಂಸ್ಥೆ ಅಳಿಸಿಹಾಕಿದೆ.
ಸೋಮವಾರ ಫ್ಯಾಬ್ ಇಂಡಿಯಾ ಬಹಿಷ್ಕಾರಕ್ಕೆ ಟ್ವಿಟರ್‌ನಲ್ಲಿ ಅಭಿಯಾನವನ್ನೇ ನಡೆಸಲಾಯಿತು. ಇದಕ್ಕಾಗಿ ರಚಿಸಲಾಗಿದ್ದ #BoycottFabindia ಎಂಬ ಹ್ಯಾಶ್‌ಟ್ಯಾಗ್ ಸೋಮವಾರ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು. ಜಾಹೀರಾತಿನ ಬಗ್ಗೆ ತೀವ್ರ ಆಕ್ರೋಶ ಕೇಳಿಬಂದ ಬೆನ್ನಲ್ಲೇ ಸಂಸ್ಥೆ ಜಾಹೀರಾತನ್ನು ತೆಗೆದುಹಾಕಿದೆ.
ಏನಿದು ವಿವಾದ?: ಕೆಂಪು ಬಣ್ಣದ ಸೀರೆಯನ್ನುಟ್ಟ ಹೆಂಗಳೆಯರು ಮತ್ತು ಅದೇ ಬಣ್ಣದ ಕುರ್ತಾಗಳನ್ನು ತೊಟ್ಟ ಪುರುಷರ ಪೋಸ್ಟರ್ ಅನ್ನು ಅ. 9ರಂದು ಹಂಚಿಕೊಂಡಿದ್ದ ಸಂಸ್ಥೆ, ಇದು ದೀಪಗಳ ಹಬ್ಬವಾದ “ಜಶ್ನ್-ಎ-ರಿವಾಜ್’ ಸಮಯ ಎಂದು ಹೇಳಿತ್ತು. ಈ ವಿಚಾರವಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸೇರಿ ಅನೇಕ ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಮೋಹನ್‌ದಾಸ್ ಪೈ ಖಂಡನೆ: ಫ್ಯಾಬ್ ಇಂಡಿಯಾದ ಜಾಹೀರಾತನ್ನು ಮಣಿಪಾಲ್ ಗ್ಲೋಬಲ್ ಎಜುಕೇಶನ್‌ನ ಮುಖ್ಯಸ್ಥ ಮೋಹನ್‌ದಾಸ್ ಪೈ ಅವರೂ ಖಂಡಿಸಿದ್ದಾರೆ. “ಇದೊಂದು ಅವಮಾನಕರ ಹೇಳಿಕೆ. ಬೇರೆ ಧರ್ಮದವರಿಗೆ ಕ್ರಿಸ್‌ಮಸ್, ಈದ್ ಹೇಗೋ ನಮಗೂ ದೀಪಾವಳಿ ಹಾಗೆಯೇ. ಇದು ಹಿಂದೂ ಧಾರ್ಮಿಕ ಹಬ್ಬವನ್ನು ನಾಶಮಾಡಲು ಉದ್ದೇಶಪೂರ್ವಕವಾಗಿ ಮಾಡಿರುವ ಪ್ರಯತ್ನ’ ಎಂದು ಅವರು ಹೇಳಿದ್ದಾರೆ.
ದೀಪಾವಳಿಯು ಜಶ್ನ್-ಎ-ರಿವಾಜ್ ಅಲ್ಲ. ಹಿಂದೂಗಳ ಹಬ್ಬಗಳನ್ನು ಅಬ್ರಹಾಮೀಕರಣ ಮಾಡುವ, ಸಾಂಪ್ರದಾಯಿಕ ಹಿಂದೂ ಉಡುಗೆಗಳನ್ನು ತೊಡದ ಮಾಡೆಲ್‌ಗಳನ್ನು ಜಾಹೀರಾತಿನಲ್ಲಿ ಪ್ರದರ್ಶಿಸುವ ಉದ್ದೇಶಪೂರ್ವಕ ಯತ್ನವನ್ನು ಎಲ್ಲರೂ ಖಂಡಿಸಬೇಕು. ಇಂಥ ದುಸ್ಸಾಹಸ ಮಾಡಿದ ಫ್ಯಾಬ್‌ಇಂಡಿಯಾ ಇದಕ್ಕೆ ಬೆಲೆ ತೆರಬೇಕು.
-ತೇಜಸ್ವಿ ಸೂರ್ಯ, ಬಿಜೆಪಿ ಸಂಸದ