Advertisement

ಕಣ್ಣಲ್ಲಿ  ಒಲಿಂಪಿಕ್ಕು, ಕೊರಳಲ್ಲಿ  ಮೆಡಲ್ಲು !

04:26 PM Oct 20, 2017 | |

ಕಾಲೇಜಿನಲ್ಲಿ ಪ್ರಾಜೆಕ್ಟ್ ಕೊಟ್ಟಿದ್ದಾರೆ, “ಹಳೇ ಸಾಮಾನುಗಳನ್ನು ಬಳಸಿ ಏನಾದರೂ ಪ್ರಾಡಕr… ಮಾಡ್ಕೊಂಡು ಬನ್ನಿ’ ಅಂತ. ಏನ್‌ ಮಾಡ್ಲಿ ಅಂತ ಯೋಚನೆ ಮಾಡುವಾಗ ನೆನಪಾಗಿದ್ದು ನಮ್ಮ ಮನೆಯ “ಅಟ್ಟ’! ಬೇಡದೆ ಇರೋ ಹಳೇ ಸಾಮಾನುಗಳನ್ನು ಇಡೋ ಜಾಗ ಅದು. 

Advertisement

ಒಂದಿಷ್ಟು ಹಳೇ ಪೈಪುಗಳು ಸಿಕ್ಕಿದ್ರೂ ಸಾಕು ಅಂದುಕೊಂಡು ಅಟ್ಟ ಹತ್ತಿದೆ. ಸಾಮಾನುಗಳನ್ನು ಹುಡುಕುವಾಗ ಕಣ್ಣಿಗೆ ಬಿದ್ದಿದ್ದು ನಾನು ಚಿಕ್ಕವಳಿರುವಾಗ ಆಡುತ್ತಿದ್ದ ಗೊಂಬೆ. ಆ ಗೊಂಬೆಯ ಒಂದು ಕೈ ಮುರಿದುಹೋಗಿತ್ತು. ಕಣ್ಣುಗಳೆರಡು ಕಿತ್ತುಹೋಗಿದ್ದವು. ಅದಕ್ಕೆ ತೊಡಿಸಿದ್ದ ಬಟ್ಟೆ ಹರಿದುಹೋಗಿತ್ತು. ಆದ್ರೂ ಏನೂ ಆಗಿಲ್ಲವೇನೋ ಅನ್ನೋ ಥರಾ ಅದು ಅಟ್ಟದಲ್ಲೇ ತಣ್ಣಗೆ ಕುಳಿತು ಬಿಟ್ಟಿತ್ತು.
ಅಲ್ಲೇ ಇದ್ದ ಒಂದಿಷ್ಟು ಚೀಲಗಳ ಮೇಲೆ ನನ್ನ ಕಣ್ಣು ಬಿತ್ತು. ಅದರ ಲ್ಲೇನಿದೆ ಎಂದು ಬಿಚ್ಚಿ ನೋಡಿದ್ರೆ ನಾನು ಚಿಕ್ಕವಳಿದ್ದಾಗ ಆಡುತ್ತಿದ್ದ ಆಟದ ಸಾಮಾನುಗಳು, ಅದರ ಜೊತೆ ತುಂತುರು, ಚಂದಮಾಮ, ಬಾಲಮಿತ್ರದಂಥ ಕತೆಪುಸ್ತಕಗಳು! ಅವನ್ನೆಲ್ಲಾ ನೋಡುತ್ತಿದ್ದವಳಿಗೆ ಬಾಲ್ಯದ ದಿನಗಳು ತುಂಬಾ ನೆನಪಾದವು.

ಚಿಕ್ಕವಳಾಗಿದ್ದಾಗ ಅದ್ಯಾಕೋ ಗೊತ್ತಿಲ್ಲ, ಅಡುಗೆ ಆಟ ಆಡೋದು ನಂಗೆ ತುಂಬಾ ಇಷ್ಟವಾಗಿತ್ತು, ಜಾತ್ರೆಯಲ್ಲಿ ಬರೋ ಆಟಿಕೆ ಅಡುಗೆ ಸೆಟ್ಟನ್ನು ತಂದುಕೊಡು ಅಂತ ಅಪ್ಪನ ಹತ್ರ ತುಂಬಾ ಹಠ ಮಾಡ್ತಿದ್ದೆ. ನನ್ನ ಹಠ ನೋಡಲಾರದೆ ಅಪ್ಪ ಅಂಗಡಿಗಳನ್ನು ಸುತ್ತಿ ಕಡೆಗೂ ಅಡುಗೆ ಸೆಟ್ಟನ್ನು ಹುಡುಕಿ ತಂದುಕೊಟ್ಟಿದ್ರು. ಆ ಸೆಟ್ಟಿನಲ್ಲಿ ಅಡುಗೆ ಮಾಡೋ ಪಾತ್ರೆಗಳು, ಮಿಕ್ಸರ್‌, ಪುಟ್ಟ ಪುಟ್ಟ ಲೋಟಗಳು, ಪ್ಲೇಟುಗಳಿದುÌ. ಅದನ್ನೆಲ್ಲಾ ಮನೆ ಅಂಗಳದಲ್ಲಿ ಹರಡಿಕೊಂಡು ಆಡುತ್ತಿದ್ದೆ. ಅಲ್ಲೇ ಗಿಡದಲ್ಲಿರೋ ಸೊಪ್ಪುಗಳನ್ನು ಕತ್ತರಿಸಿ ಪಲ್ಯ ಅಂತಿದ್ದೆ. ಮಣ್ಣನ್ನು ಕಲಸಿ ಅದನ್ನು ನೆಲದ ಮೇಲೆ ತಟ್ಟಿ ಅದಕ್ಕೊಂದಿಷ್ಟು ಹೂವಿನ ಅಲಂಕಾರ ಮಾಡಿ ಕೇಕ್‌ ಅಂತಾ ಕತ್ತರಿಸ್ತಿದ್ದೆ. ತುಂಬಾ ಚೆನ್ನಾಗಿತ್ತು ಆ ಆಟ!

ಮನೆಯಲ್ಲಿ ಅಮ್ಮ ಸೀರೆ ಉಟ್ಟುಕೊಂಡು ಅಡುಗೆ ಮಾಡ್ತಾಳೆ ಅಂತ ನಾನೂ ಅಡುಗೆ ಮನೆ ಆಟ ಆಡೋವಾಗ ಸೀರೆ ಬೇಕು ಅಂತ ಅಮ್ಮನ ಬಳಿ ಸೀರೆ ಉಡಿಸು ಅಂತ ಗೋಗರೆಯುತ್ತಿದ್ದೆ. ನನ್ನ ರಗಳೆ ತಾಳ್ಳೋಕಾಗದೆ ಅಮ್ಮ ಸೀರೆ ಅಂಗಿಯನ್ನು ಹೊಲಿದುಕೊಟ್ಟರು. ಅದನ್ನು ತೊಟ್ಟು ನಾನು ಸಂಭ್ರಮ ಪಟ್ಟಿದ್ದೇ ಪಟ್ಟಿದ್ದು. ಅದನ್ನು ಹಾಕಿಕೊಂಡು ಅಡುಗೆ ಮನೆ ಆಟ ಆಡುತ್ತಿದ್ದರೆ ನಾನು ಅರಮನೆಯಲ್ಲಿರೋ ರಾಜಕುಮಾರಿ ಆಗಿಬಿಡುತ್ತಿದ್ದೆ. ತುಂಬಾ ಚೆನ್ನಾಗಿ ಅಡುಗೆ ಮಾಡ್ತಿದ್ದೀನಿ ಅಂತೆಲ್ಲಾ ನನ್ನಷ್ಟಕ್ಕೇ ನಾನೇ ಅಂದುಕೊಳ್ಳುತ್ತಿದ್ದೆ. ಅವೆಲ್ಲವೂ ಈಗ ನೆನಪಾಗಿತ್ತು.

ಅಡುಗೆ ಸೆಟ್ಟಿನ ಮೇಲಿದ್ದ ಕಣ್ಣು ಪುಸ್ತಕದ ರಾಶಿ ಮೇಲೆ ಹೋಯಿತು, ಶಿರಸಿಗೆ ಹೋದಾಗಲೆಲ್ಲಾ ತುಂತುರು ಕತೆ ಪುಸ್ತಕ ಬೇಕು ಅಂತ ಪುಸ್ತಕದ ಅಂಗಡಿ ಮುಂದೆ ಹೋಗಿ ನಿಂತುಕೊಂಡುಬಿಡುತ್ತಿದ್ದೆ. ಆ ಅಂಗಡಿಯವನಿಗೆ ಇಂದಿಗೂ ನನ್ನ ನೆನಪಿದೆ. ತುಂತುರು ಜೊತೆ ನನ್ನ ಕನ್ನಡ ಶಾಲೆಯ ಪುಸ್ತಕಗಳು, ಗ್ರೀಟಿಂಗ್‌ ಕಾರ್ಡ್‌ಗಳು ಎಲ್ಲಾ ಹಾಗೆ ಇವೆ. ನಾನು ದೊಡ್ಡವಳಾಗುತ್ತಿದ್ದ ಹಾಗೆ ಅಡುಗೆ ಆಟದ ಮೇಲೆ ಬೇಜಾರು ಬಂದಿತು. ಅಕ್ಕಪಕ್ಕದ ಮನೆಗಳಲ್ಲಿ ಹುಡುಗಿಯರು ಇಲ್ಲದೇ ಇದ್ದಿದ್ದರಿಂದ ಅಡುಗೆ ಆಟ ಆಡಲು ಯಾರೂ ಜೊತೆ ಸಿಕ್ಕಿರಲಿಲ್ಲ. ಆಮೇಲೆ ತಮ್ಮನ ಜೊತೆ ಕ್ರಿಕೆಟ್‌ ಆಡೋಕೆ ಶುರುಮಾಡಿದೆ. 

Advertisement

ಮನೆ ಮುಂದೆ ವಿಶಾಲವಾದ ಅಂಗಳವಿದ್ದಿದ್ದರಿಂದ ಬಾಲ… ಕಳೆದು ಹೋಗುತ್ತಿರಲಿಲ್ಲ. ನಂಗೆ ಬೌಲಿಂಗ್‌ಗಿಂತ ಬ್ಯಾಟಿಂಗ್‌ ಮೇಲೆ ಆಸೆ ಜಾಸ್ತಿ. ಆದ್ರೆ ತಮ್ಮ ಬ್ಯಾಟಿಂಗ್‌ ಮಾಡೋಕೆ ಅವಕಾಶಾನೇ ಕೊಡುತ್ತಿರಲಿಲ್ಲ. ಅದಕ್ಕಾಗಿ ಜಗಳ ಮಾಡಿಕೊಂಡ ಮೇಲೆ ಒಂದು ತೀರ್ಮಾನಕ್ಕೆ ಬಂದಿದ್ವಿ. ಒಬ್ಬೊಬ್ಬರಿಗೆ 3 ಓವರ್‌ ಅಂತ ರೂಲ್‌ ಮಾಡಿಕೊಂಡು ಆಟ ಆಡುತ್ತಿದ್ವಿ.

ಆಟ ಎಂದರೆ ಎಷ್ಟು ಇಷ್ಟವೆಂದರೆ ಮಳೆ ಬರ್ತಾ ಇರಲಿ, ಸುಡೋ ಬಿಸಿಲಿರಲಿ, ಯಾರಾದ್ರೂ “ಆಡೋಕೆ ಬರ್ತಿàಯಾ’ ಅಂತಾ ಕೇಳಿದ್ರೆ ಸಾಕು ಅಮ್ಮನಿಗೆ ಹೇಳಿ ಓಡುತಿದ್ದೆ.ಬಾಲ್ಯದ ದಿನಗಳಲ್ಲಿ ನನ್ನೊಳಗೊಂದು ಮುಗ್ಧತೆ, ಮುಖದ ಮೇಲೊಂದು ನಿಷ್ಕಲ್ಮಷ ನಗು ಇರುತ್ತಿತ್ತು. ತುಂಬಾ ಚೆನ್ನಾಗಿತ್ತು ಆ ದಿನಗಳು. ಮನುಷ್ಯ ಎಷ್ಟೇ ಬೆಳೆದರೂ ಅವನ ಮನಸ್ಸಿನ ಮೂಲೆಯಲ್ಲೊಂದು ಮಗು ಅಡಗಿರುತ್ತೆ ಅಂತ ನಾನು ತಿಳಿದಿದ್ದೀನಿ! ಈಗಲೂ ಆಡಲು ಮನಸ್ಸಾದಾಗ ಗೆಳತಿಯರನ್ನು ಕರೆಯುತ್ತೇನೆ. ಅವರು, “ಇಷ್ಟು ದೊಡ್ಡವಳಾಗಿದ್ದೀಯಾ, ಈಗೆಂತಾ ಆಟ ಆಡ್ತೀಯೆ ನೀನು?’ ಅಂತ ಮರುಪ್ರಶ್ನೆ ಕೇಳಿ ತಣ್ಣೀರೆರೆಚಿಬಿಡುತ್ತಾರೆ. 

ವಿಪರ್ಯಾಸ ಅಂದರೆ “ಆಟ ಆಡೋಕೆ ನಾವೇನು ಮಕ್ಕಳಾ?’ ಎಂದು ಹೇಳುವವರೇ ಮೊಬೈಲು ಹಿಡಿದುಕೊಂಡು ಆಂಡ್ರಾಯ್ಡ ಆಟಗಳಲ್ಲಿ ಮುಳುಗಿರುತ್ತಾರೆ! ನಾನಂತೂ ಆ ಮಗುವಿನ ನಿಷ್ಕಲ್ಮಶ ನಗುವನ್ನು ನನ್ನಲ್ಲಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದೇನೆ. 

ಇಷ್ಟೆಲ್ಲಾ ಆಲೋಚನೆಗಳು ಹರಿಯುವಷ್ಟರಲ್ಲಿ ಅಮ್ಮ “ಊಟಕ್ಕೆ ಬಾರೇ…’ ಎಂದು ಕರೆದಿದ್ದು ಕೇಳಿಸಿತು. ನಾನು ಆಲೋಚನಾ ಸರಣಿಯಿಂದ ಹೊರಬಂದೆ. ಅಟ್ಟದಿಂದ ಇಳಿದು ಬಂದೆ. ಊಟ ಮುಗಿಸಿ ಮತ್ತೆ ಅಟ್ಟ ಹತ್ತಬೇಕು ಅಂದುಕೊಂಡೆ. ಇಳಿಯುವಾಗ ಕಣ್ಣು ಕಿತ್ತುಹೋಗಿರೊ ಗೊಂಬೆ ನನ್ನನ್ನೇ ನೋಡಿ ನಗುತ್ತಿದ್ದ ಹಾಗನ್ನಿಸಿತು.

– ಮೇಘಾ ಹೆಗಡೆ ಕತ್ರಿಮನೆ 

Advertisement

Udayavani is now on Telegram. Click here to join our channel and stay updated with the latest news.

Next