Advertisement

ಗರುಡ ಪಕ್ಷಿಯ ಚಿಕಿತ್ಸೆಗೆ ನೇತ್ರ ತಜ್ಞರು ಮೈಸೂರಿಗೆ?

03:15 PM Feb 15, 2018 | Harsha Rao |

ಉಡುಪಿ: ಪೇಜಾವರ ಮಠದಲ್ಲಿ ಆರೈಕೆಯಲ್ಲಿದ್ದ ದೃಷ್ಟಿಹೀನ ಗರುಡ ಪಕ್ಷಿಯನ್ನು ವನ್ಯಜೀವಿ ಅಧಿಕಾರಿಗಳು ಚಿಕಿತ್ಸೆಗಾಗಿ ಮೈಸೂರು ಮೃಗಾಲಯಕ್ಕೆ ಕರೆದೊಯ್ದಿದ್ದು, ಅಲ್ಲಿನ ವೈದ್ಯರು ಸಂಪರ್ಕಿಸಿದರೆ ಉಚಿತವಾಗಿ ಚಿಕಿತ್ಸೆ ಕೊಡಲು ಮೈಸೂರಿಗೆ ತೆರಳುವುದಾಗಿ ನೇತ್ರ ತಜ್ಞ, ಉಡುಪಿಯ ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾದ ಪ್ರಸಾದ್‌ ನೇತ್ರಾಲಯದ ಆಡಳಿತ ನಿರ್ದೇಶಕ ಡಾ|ಕೃಷ್ಣಪ್ರಸಾದ್‌ ಕೆ. ಅವರು ಹೇಳಿದ್ದಾರೆ.

Advertisement

ವನ್ಯಜೀವಿ ಅಧಿಕಾರಿಗಳು ಮಂಗಳವಾರ ಗರುಡ ಪಕ್ಷಿಯನ್ನು ಮಠದಿಂದ ಕರೆದೊಯ್ಯುವ ಮೊದಲು ಡಾ| ಕೃಷ್ಣಪ್ರಸಾದ್‌ ಅವರು ಗರುಡನ ಕಣ್ಣಿನ ಪರೀಕ್ಷೆಯನ್ನು ನಡೆಸಿದ್ದಾರೆ. ಅಧಿಕಾರಿಗಳು ಹಕ್ಕಿಯನ್ನು ಮೈಸೂರು ಮೃಗಾಲಯಕ್ಕೆ ದಾಖಲಿಸಿದ್ದಾರೆ ಎಂದು ಉಡುಪಿಯ ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಮೈಸೂರಿನ ವನ್ಯಜೀವಿ ತಜ್ಞ ವೈದ್ಯರು ಕರೆ ಮಾಡುತ್ತಾರೆ ಎಂದು ವನ್ಯಜೀವಿ ಅಧಿಕಾರಿಗಳು ಹೇಳಿದ್ದಾರೆ. ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ಕೇಳಿಕೊಂಡರೆ ಅಗತ್ಯ ಸಲಕರಣೆ, ಯಂತ್ರವನ್ನು ಕೊಂಡೊಯ್ದು ಆಪರೇಶನ್‌ ಮಾಡಲು ನಿರ್ಧರಿಸಿದ್ದೇನೆ. ಗರುಡನಿಗೆ ಕಣ್ಣು ಕಾಣಬೇಕೆನ್ನುವುದೊಂದೇ ನಮ್ಮ ಬಯಕೆ ಎಂದು ಡಾ| ಕೃಷ್ಣಪ್ರಸಾದ್‌ ತಿಳಿಸಿದ್ದಾರೆ.

ಯಾವ ಜೀವವೋ… ಎಂತ ಪುಣ್ಯವೋ…
ಪೇಜಾವರ ಸ್ವಾಮಿಗಳು ಹಾಗೂ ಉಡುಪಿಯ ಸ್ಥಳದಲ್ಲಿ ಸಿಕ್ಕಿದ ಗರುಡ ಪಕ್ಷಿಯ ಭೇಟಿ… ಎಂತಹ ಅದ್ಭುತ ಚಿತ್ರ. ಎನ್ನುವ ಈ ವಾಕ್ಯವನ್ನು ಬಳಸಿ ಕೊಂಡಿರುವ ಕೆಲವರು ಪೇಜಾವರ ಶ್ರೀಪಾದರ ಜತೆಗಿರುವ ಗರುಡನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಎಲ್ಲೆಡೆ ವೈರಲ್‌ ಆಗಿದೆ. ರಾಮ ರಾವಣನನ್ನು ಹುಡುಕಿಕೊಂಡು ಹೊರ ಟಾಗ ರಾಮನಿಗೆ ಮೊದಲಾಗಿ ಸಿಕ್ಕಿದ್ದು ಜಟಾಯು ಪಕ್ಷಿ, ಆಗ ಆ ಪಕ್ಷಿಗೂ ಅಂತಿಮ ಸಂಸ್ಕಾರ ನಡೆಸಿದ್ದು ರಾಮಚಂದ್ರ. ಇದೀಗ ರಾಮದೇವರನ್ನು ಪಟ್ಟದ ದೇವರಾಗಿ 8 ದಶಕ ಪೂಜಿಸಿದ, ಐದನೆಯ ಪರ್ಯಾಯ ಪೂಜೆ ಮುಗಿಸಿದ ಬಳಿಕ, ಗರುಡ ಪಕ್ಷಿ ದೃಷ್ಟಿ ಕಳೆದುಕೊಂಡು ಪೇಜಾವರ ಮಠದ ಆವರಣದಲ್ಲಿ ಬಿದ್ದು ಶ್ರೀಗಳ ದೃಷ್ಟಿಗೆ ಬೀಳಬೇಕಿತ್ತೆ ಎಂಬ ಒಂದು ಜಿಜ್ಞಾಸೆ ಮೂಡುತ್ತದೆ. ಕರ್ಮ ಸಿದ್ಧಾಂತದ ಒಳ ಒಳಗೆ ಎಷ್ಟೇ ಹೋದರೂ ಪರಿಪೂರ್ಣ ವಿರಾಮದ ಉತ್ತರ ಸಿಗುವುದಿಲ್ಲ, ಆದರೆ ಒಳಗೊಳಗೆ ಹೋಗಲು ಕುತೂಹಲವನ್ನು ಮಾತ್ರ ಮತ್ತಷ್ಟು ಹೆಚ್ಚಿಸುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next