ಹೊಸದಿಲ್ಲಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರಕಾರಿ ಹಸ್ತಕ್ಷೇಪ ತಗ್ಗಿಸಿ, ಖಾಸಗೀಕರಣಗೊಳಿಸುವತ್ತ ಕೇಂದ್ರ ಸರಕಾರ ಈಗಲೇ ಕಾರ್ಯೋನ್ಮುಖವಾಗಿದೆ. ಮುಂದಿನ ದಿನಗಳಲ್ಲಿ ಉದ್ದಿಮೆ ಕ್ಷೇತ್ರ ಮತ್ತು ವಿದೇಶಿ ಬ್ಯಾಂಕ್‌ಗಳನ್ನು ಈ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಮಾಡಲು ಕೆಲವೊಂದು ನಿಯಮಗಳನ್ನು ಸರಳಗೊಳಿಸಲು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ.
ಹೀಗಾಗಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್‌ನ ಷೇರುಗಳ ಮಾರಾಟ ಪ್ರಕ್ರಿಯೆಗೆ ಶುರು ಮಾಡಿದಾಗ ವಿದೇಶಿ ಬ್ಯಾಂಕ್‌ಗಳು ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಆಹ್ವಾನ ನೀಡುವ ಬಗ್ಗೆ ವಿತ್ತ ಸಚಿವಾಲಯ ಚಿಂತನೆ ನಡೆಸುತ್ತಿದೆ.
ಹಣಕಾಸೇತರ ವಹಿವಾಟುಗಳಲ್ಲಿ ಶೇ.60ಕ್ಕಿಂತ ಕಡಿಮೆ ವಹಿವಾಟು ಹೊಂದಿರುವ ಕೈಗಾರಿಕಾ ಸಂಸ್ಥೆಗಳಿಗೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಪ್ರವೇಶಕ್ಕೆ ಅವಕಾಶ ನೀಡಲು ಈಗ ಸಾಧ್ಯವಾಗುತ್ತಿಲ್ಲ. ಶೇ.10ರಷ್ಟು ಪಾಲು ಬಂಡವಾಳ ಹೊಂದಲು ಮಾತ್ರ ಅವಕಾಶ ನೀಡಲಾಗಿದೆ.
ಈ ಅಂಶ ಇನ್ನೂ ಚರ್ಚೆಯ ಹಂತದಲ್ಲಿಯೇ ಇದೆ. ಒಂದು ವೇಳೆ ಇಂಥ ನಿರ್ಧಾರ ಜಾರಿಗೊಂಡರೂ ಗರಿಷ್ಠ ಪ್ರಮಾಣದ ಎಚ್ಚರಿಕೆಯ ನಿಯಮ ಜಾರಿಗೊಳಿಸಲಾ ಗುತ್ತದೆ. ಬ್ಯಾಂಕಿಂಗ್ ಕ್ಷೇತ್ರವನ್ನು ಮತ್ತಷ್ಟು ಮುಕ್ತವಾಗಿಸುವ ಯೋಚನೆ ಇದೆ. ಆದರೆ ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸಿರುವ ಬ್ಯಾಂಕ್, ಕೈಗಾರಿಕಾ ಸಂಸ್ಥೆಗಳಿಗೆ ಷೇರು ಖರೀದಿಯ ಆಹ್ವಾನ ನೀಡುವದಕ್ಕಿಂತ ಮುನ್ನ ದೇಶದ ಅರ್ಥ ವ್ಯವಸ್ಥೆಗೆ ಧಕ್ಕೆ ಬರದಂತೆ ನಿಯಮಗಳನ್ನು ಜಾರಿ ಗೊಳಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು “ಇ.ಟಿ.ನೌ’ ಸುದ್ದಿವಾಹಿನಿಗೆ ತಿಳಿಸಿದ್ದಾರೆ.