Advertisement

ಪಠ್ಯೇತರ ಚಟುವಟಿಕೆ ಪ್ರತಿಯೊಬ್ಬರಿಗೂ ಅಗತ್ಯ   

12:25 PM May 08, 2022 | Team Udayavani |

ಬಾಗಲಕೋಟೆ: ಪ್ರತಿಯೊಬ್ಬ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳಿಗೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಆಗ ಓದಿನ ಜತೆಗೆ ಉಲ್ಲಾಸ-ಉತ್ಸಾಹ, ದೈಹಿಕ ಚಟುವಟಿಕೆ ದೊರೆಯುತ್ತದೆ ಎಂದು ಅಬಕಾರಿ ಆಯುಕ್ತ ಸಂಗನಗೌಡ ಪಿ. ಹೊಸಹಳ್ಳಿ ಹೇಳಿದರು.

Advertisement

ತೋಟಗಾರಿಕೆ ವಿವಿಯ ಮುಖ್ಯ ಆವರಣದಲ್ಲಿ ಹಮ್ಮಿಕೊಂಡಿದ್ದ ತೋಟಗಾರಿಕೆ ಕಾಲೇಜುಗಳ ಮತ್ತು ವಸತಿ ನಿಲಯಗಳ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಪಠ್ಯಕ್ರಮದಷ್ಟೇ ಮಹತ್ವದ್ದಾಗಿವೆ. ವಿದ್ಯಾರ್ಥಿಗಳು ಬರೀ ತೋಟಗಾರಿಕೆ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗದೆ, ಐಎಎಸ್‌, ಕೆಎಎಸ್‌, ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ಮಾಡಿಕೊಳ್ಳಬೇಕು. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಿ, ದೇಶಕ್ಕೆ ಒಳ್ಳೆಯ ಸೇವೆ ನೀಡಿ ಯಶಸ್ವಿಯಾಗಬೇಕು ಎಂದು ತಿಳಿಸಿದರು.

ತೋಟಗಾರಿಕೆ ವಿವಿಯ ಕುಲಪತಿ ಡಾ|ಕೆ.ಎಂ. ಇಂದಿರೇಶ, ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳ ಅಮೋಘ ಸಾಧನೆಯ ಶ್ಲಾಘಿಸಿದರು. ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವ ಪ್ರಯುಕ್ತ ಮಹಾವಿದ್ಯಾಲಯದಿಂದ ವಿವಿಧ ಸ್ಪರ್ಧಾತ್ಮಕ, ವ್ಯಕ್ತಿತ್ವ ವಿಕಸನ ತರಬೇತಿ ಆಯೋಜನೆ ಮಾಡಲಾಗುತ್ತಿದೆ. ಅವುಗಳ ಪ್ರಯೋಜನ ಪಡೆಯಬೇಕು. ಶೈಕ್ಷಣಿಕವಾಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವುದರ ಬಗ್ಗೆ ಹಾಗೂ ವಿದ್ಯಾರ್ಥಿಗಳು, ಶಿಕ್ಷಕ, ಶಿಕ್ಷಕೇತರ ಪ್ರಯತ್ನವು ಅಮೋಘವಾಗಿದೆ ಎಂದು ಹೇಳಿದರು.

ತೋಟಗಾರಿಕೆ ವಿವಿಯ ಶಿಕ್ಷಣ ನಿರ್ದೇಶಕ ಡಾ|ಎಂ.ಎಸ್‌. ಕುಲಕರ್ಣಿ, ಪಠ್ಯಕ್ರಮ ಮಾತ್ರ ಅಷ್ಟೇ ಮುಖ್ಯ ಅಲ್ಲ, ಅದರ ಜೊತೆಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಕೂಡ ಅತ್ಯಂತ ಮಹತ್ವವಾಗಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಶಕ್ತಿ ಸಾಮರ್ಥ್ಯವನ್ನು ಸರಿಯಾಗಿ ಸದ್ಭಳಕೆ ಮಾಡಿಕೊಂಡು ದೇಶಕ್ಕೆ, ಈ ಸಮಾಜಕ್ಕೆ ಒಂದು ಉತ್ತಮ ಕೊಡುಗೆ ನೀಡಬೇಕು ಎಂದು ತಿಳಿಸಿದರು.

Advertisement

ಅಧ್ಯಕ್ಷತೆ ವಹಿಸಿದ್ದ ವಿವಿಯ ಡೀನ್‌ ಡಾ| ಬಾಲಾಜಿ ಎಸ್‌. ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವುದು ನಮಗೆಲ್ಲ ಹೆಮ್ಮೆ. ತೋಟಗಾರಿಕೆ ಕಾಲೇಜಿನ 7 ವಿದ್ಯಾರ್ಥಿಗಳು ಜೆ.ಆರ್‌.ಎಫ್‌. ಪರೀಕ್ಷೆಯಲ್ಲಿ ಹಾಗೂ 8 ವಿದ್ಯಾರ್ಥಿಗಳು ಎಸ್‌ಆರ್‌ ಎಫ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದರು.

ವಿವಿ ವ್ಯಾಪ್ತಿಯ ವಿವಿಧ ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳಾದ ಮಧುಮತಿ, ಸುನೀತಾ ಹಾದಿಮನಿ, ಸುಧಾ, ಮಲ್ಲಿಕಾರ್ಜುನ ಮಿಣಜಗಿ, ಆನಂದ, ಸೂಜಯ, ವರುಣ ಅವರು 2021-22ನೇ ಸಾಲಿನಲ್ಲಿ ನಡೆದ ಅಖೀಲ ಭಾರತ ಅಂತರ್‌ ಕೃಷಿ ವಿಶ್ವ ವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಪಾರಿತೋಷಕ ಪಡೆದಿದ್ದು, ಅವರನ್ನು ವಿವಿಯ ದೈಹಿಕ ಶಿಕ್ಷಣ ವಿಭಾಗದ ಉಪ ನಿರ್ದೇಶಕ ಡಾ|ಆರ್‌.ಎಂ. ಹಿರೇಮಠ ಸನ್ಮಾನಿಸಿದರು.

ಕುಲಸಚಿವ ಡಾ|ಟಿ.ಬಿ. ಅಳ್ಳೊಳ್ಳಿ, ಸಂಶೋಧನಾ ನಿರ್ದೇಶಕ ಡಾ|ಎಚ್‌.ಪಿ. ಮಹೇಶ್ವರಪ್ಪ, ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್‌ ಡಾ|ರವಿಂದ್ರ ಮುಲಗೆ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್‌ ಡಾ|ರಾಮಚಂದ್ರ ನಾಯಕ, ಡಾ|ಎನ್‌. ತಮ್ಮಯ್ಯ, ವಿಜಯಭಾಸ್ಕರ ಎಂ.ಭಜಂತ್ರಿ ಹಾಗೂ ಕಾಲೇಜು, ವಸತಿ ನಿಲಯಗಳ ವಿದ್ಯಾರ್ಥಿ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.

ಬಳಿಕ ಹಾಸ್ಯ ಕಲಾವಿದರಾದ ನರಸಿಂಹ ಜೋಶಿ ತಮ್ಮ ಮಾತಿನ ಶೈಲಿಯಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ತದನಂತರ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ವಿವಿಧ ಭರತ ನಾಟ್ಯ, ದೇಶ ಭಕ್ತಿ ಗೀತೆ, ನಾಟಕ, ಏಕಾಭಿನಯ ಹಾಗೂ ಇನ್ನಿತರೆ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಚಿನ್ಮಯಿ ಪ್ರಾರ್ಥಿಸಿದರು. ಡಾ|ಐ.ಬಿ. ಬಿರಾದಾರ ಸ್ವಾಗತಿಸಿದರು. ಅಭಿಷೇಕ ನರೇಂದ್ರಮಠ ಪರಿಚಯಿಸಿದರು. ನಾಗೇಶ ಮತ್ತು ಮಾನಸ ಟಿ ವರದಿ ವಾಚಿಸಿದರು. ಶ್ರೀದೇವಿ ಬಡಿಗೇರ ಮತ್ತು ವಿಜಯ ನೇಕಾರ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next