ಕೋಲಾರ: ರಾಜ್ಯಾದ್ಯಂತ ಸರಕಾರ ಕರೆ ನೀಡಿದ್ದ 36 ಗಂಟೆಗಳ ಕರ್ಫ್ಯೂಗೆ ಜಿಲ್ಲೆಯಲ್ಲೂ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದ್ದು, ತರಕಾರಿ, ಹೂ, ಹಣ್ಣು, ಹಾಲು, ಮಾಂಸ ಮಾರಾಟ ಹೊರತುಪಡಿಸಿ ಉಳಿದಂತೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೂ ಕೊರೊನಾ ಮಾರಿಯಿಂದ ರಕ್ಷಣೆಗಾಗಿ ಸರ್ಕಾರ ಸೂಚಿ ಸಿದ್ದ 36 ಗಂಟೆಗಳ ಕರ್ಫ್ಯೂಗೆ ಜನ ಬೆಂಬಲ ನೀಡಿದರು.
ಭಾನುವಾರ ಬೆಳಗ್ಗೆ 10 ಗಂಟೆ ಯವರೆಗೂ ಅಲ್ಲಲ್ಲಿ ಮುಂದುವರಿದಿದ್ದ ತರಕಾರಿ, ದಿನಸಿ ವ್ಯಾಪಾರವೂ ನಂತರ ಬಂದ್ ಆಗಿದ್ದು, ಭಾನುವಾರ ಮಾಂಸ ಪ್ರಿಯರ ದಂಡು ಅಂಗಡಿಗಳ ಮುಂದೆ ನೆರೆದಿತ್ತು. ನಗರದ ಮಾಂಸದ ಅಂಗಡಿಗಳ ಮುಂದೆ ಮಾಸ್ಕ್ ಹಾಕಿಕೊಂಡು ನೂರಾರು ಮಂದಿ ಸರದಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು. ನಗರದ ಎಲ್ಲಾ ಪ್ರಮುಖ ವೃತ್ತಗಳಲ್ಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸಾರ್ವಜನಿಕ ಸಾಗಾಣಿಕೆಯ ಯಾವುದೇ ವಾಹನಗಳ ಓಡಾಟಕ್ಕೂ ಅವಕಾಶ ನೀಡಿರಲಿಲ್ಲ.
ಜನರಿಲ್ಲದೆ ಅಂಗಡಿ ಬಂದ್: ಪೊಲೀಸರು ನಗರದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡದೇ ಅಲ್ಲಲ್ಲಿ ಬ್ಯಾರಿಕೇಡ್ ಹಾಕಿದ್ದರು. ಆದರೂ, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ನಗರದ ಹಳೆ ಬಸ್ ನಿಲ್ದಾಣದಲ್ಲಿರುವ ಹೂವಿನ ಮಾರುಕಟ್ಟೆ ಬೆಳಗ್ಗೆ ಕೆಲ ಹೊತ್ತು ವಹಿವಾಟು ನಡೆಸಿತ್ತಾ ದರೂ ಗ್ರಾಹಕರಿಲ್ಲದೇ ಬಣಗುಡುತ್ತಿದ್ದು, ಕೆಲವು ಅಂಗಡಿ ಮಾಲಿಕರು ಬಂದ್ ಮಾಡಿ ಕೊಂಡು ಹೋದರು.
ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ನೀಡಲಾಗಿದ್ದು, ಕೆಲವು ಸಣ್ಣಪುಟ್ಟ ಹೋಟೆಲ್‌ಗಳು ತೆರೆದಿದ್ದು, ಬೆಳಗ್ಗೆ 11 ಗಂಟೆ ವರೆಗೂ ಗ್ರಾಹಕರಿಗೆ ಪಾರ್ಸಲ್ ನೀಡಿದವು. ಮಾಂಸದೂಟದ ವಿಶೇಷ ಭಾನುವಾರವಾದ ಕಾರಣ ಹೋಟೆಲ್‌ಗಳಿಗೆ ಪಾರ್ಸಲ್‌ಗಾಗಿ ಬರುವ ಜನರ ಸಂಖ್ಯೆಯೂ ವಿರಳವಾಗಿದ್ದು, ಕೆಲವು ಹೋಟೆಲ್ ಮಾಲಿಕರು ಗ್ರಾಹಕರಿ ಲ್ಲದೇ 10 ಗಂಟೆಗೆ ಬಾಗಿಲು ಮುಚ್ಚಿದವು.
ರಸ್ತೆಗಳು ಖಾಲಿ: ಕರ್ಫ್ಯೂ ಹಿನ್ನೆಲೆಯಲ್ಲಿ ಬಸ್ ಸಂಚಾರ ಇರುವುದಿಲ್ಲ ಎಂದು ಮೊದಲೇ ತಿಳಿದಿದ್ದ ಕಾರಣ ಪ್ರಯಾಣಿಕರ್ಯಾರು ನಿಲ್ದಾ ಣದ ಕಡೆ ಸುಳಿಯಲೇ ಇಲ್ಲ. ಕೆಲವು ಮಂದಿ ವಾಹನಗಳಿಗಾಗಿ ನಗರದ ಟೋಲ್‌ಗೇಟ್ ಬಳಿ ಕಾಯುತ್ತಿದ್ದುದು ಕಂಡು ಬಂತು. ನಗರದ ಬಸ್ ನಿಲ್ದಾಣದಲ್ಲಿ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡದಂತೆ ಮರಗಳು, ಕಲ್ಲುಗಳನ್ನು ಹಾಕಿ ಅಡ್ಡಿಪಡಿಸಲಾಗಿತ್ತು. ಅಲ್ಲಲ್ಲಿ ಆಟೋ ಸಂಚಾರ ಕಂಡು ಬಂತಾ ದರೂ, ಪೊಲೀಸರು ಅವರನ್ನು ವಾಪಸ್ ಕಳುಹಿಸಿದರು. ಈ ನಡುವೆ ಸೋಮವಾರದ ರಂಜಾನ್ ಆಚರಣೆಗಾಗಿ ಮುಸ್ಲಿಮರು ಸಂಭ್ರಮದ ಸಿದತೆ ನಡೆಸುತ್ತಿದ್ದುದು ಕಂಡು ಬಂತು.