ಬೆಂಗಳೂರು: ಕೆಲವೇ ತಿಂಗಳ ಅಂತರದಲ್ಲಿ ರಾಜ್ಯದ ದಾಳಿಂಬೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬಂದಿದ್ದು, ಇಲ್ಲಿನ ದಾಳಿಂಬೆ ಸುಮಾರು 36 ಯೂರೋಪ್ ರಾಷ್ಟ್ರಗಳಲ್ಲಿ ಫೇಮಸ್ ಆಗಿದೆ. ಆದರೆ, ಇದರ ಲಾಭ ಮಾತ್ರ ಬೆಳೆಗಾರರಿಗೆ ಸಿಗುತ್ತಿಲ್ಲ!
ದಾಳಿಂಬೆ ಕೆಲವು ಔಷಧೀಯ ಗುಣಗಳನ್ನು ಹೊಂದಿದೆ. ಕ್ಯಾನ್ಸರ್ ಬೆಳೆಯದಂತೆ ಸ್ಥಿರತೆ ಕಾಪಾಡುವಲ್ಲಿ ಮತ್ತು ನೈಸರ್ಗಿಕವಾದ ಸಿಹಿ ಅಂಶ ಇರುವುದರಿಂದ ಮಧುಮೇಹಿಗಳು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾರೆ. ಹಾಗಾಗಿ, ದಾಳಿಂಬೆಗೆ ವಿದೇಶಿ ಬೇಡಿಕೆಯಿದೆ. ಇದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿ ದಿನ ಒಂದು ಟನ್ ದಾಳಿಂಬೆ ರಫ್ತು ಆಗುತ್ತಿದೆ ಎಂದು ಮೆಂಜೀಸ್ ಏವಿಯೇಷನ್ ಬೊಬ್ಬ (ಬೆಂಗಳೂರು) ಸಿಇಒ ವೆಂಕಟ ರೆಡ್ಡಿ ತಿಳಿಸಿದರು.
“ಕಳೆದ ಒಂದು ವರ್ಷದೊಳಗೆ ದಾಳಿಂಬೆ ರಫ್ತು ಟ್ರೆಂಡ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರಫ್ತುದಾರರು ಮತ್ತು ಆಮದುದರರ ಜತೆ ಚರ್ಚೆ ನಡೆಸಿದಾಗ, ಆರೋಗ್ಯದ ದೃಷ್ಟಿಯಿಂದ ಈ ಬೇಡಿಕೆ ಕಂಡುಬರುತ್ತಿದೆ ಎಂಬುದು ಗೊತ್ತಾಯಿತು. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ,’ ಎಂದು ವೆಂಕಟ ರೆಡ್ಡಿ ಹೇಳಿದರು.
ಉತ್ಪಾದನೆ 2 ಲಕ್ಷ ಟನ್; ರಫ್ತು 300 ಟನ್: ರಾಜ್ಯದಲ್ಲಿ ಸುಮಾರು 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯುತ್ತಿದ್ದು, 2 ಲಕ್ಷ ಟನ್ ಉತ್ಪಾದನೆ ಆಗುತ್ತಿದೆ. ಈ ಪೈಕಿ 200ರಿಂದ 300 ಟನ್ ಮಾತ್ರ ರಫ್ತು ಆಗುತ್ತಿದೆ. ಆದರೆ, ತಾವು ಬೆಳೆದ ದಾಳಿಂಬೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದು, 36 ರಾಷ್ಟ್ರಗಳಿಗೆ ರಫ್ತಾಗುತ್ತಿದೆ ಎಂಬುದು ಬಹುತೇಕ ಬೆಳೆಗಾರರಿಗೆ ಗೊತ್ತಿಲ್ಲ. ಹಾಗೇ ನೇರ ಮಾರುಕಟ್ಟೆ ಬಗ್ಗೆ ಅರಿವೂ ಇಲ್ಲ. ಪರಿಣಾಮ ರೈತರು ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.
ಐದುಪಟ್ಟು ಹೆಚ್ಚು ಬೆಲೆಗೆ ಮಾರಾಟ: ವಿಪರ್ಯಾಸವೆಂದರೆ ರೈತರಿಂದ ಖರೀದಿಸಿದ ಬೆಲೆಗಿಂತ ನಾಲ್ಕೈದು ಪಟ್ಟು ಬೆಲೆಗೆ ವಿದೇಶಗಳಲ್ಲಿ ದಾಳಿಂಬೆ ಮಾರಾಟವಾಗುತ್ತದೆ. ಪ್ರಸ್ತುತ ಸಗಟು ಮಾರುಕಟ್ಟೆಯಲ್ಲಿ ದಾಳಿಂಬೆ ಕೆಜಿಗೆ 60ರಿಂದ 80 ರೂ. ಇದೆ. ಆದರೆ, ವಿದೇಶಗಳಲ್ಲಿ 6ರಿಂದ 7 ಡಾಲರ್‌ಗೆ ಮಾರಾಟವಾಗುತ್ತದೆ. ರಫ್ತು ಮತ್ತಿತರ ಎಲ್ಲ ವೆಚ್ಚ ಕಡಿತಗೊಳಿಸಿದರೂ ರೈತರಿಗೆ ಕನಿಷ್ಠ 150 ರೂ. ಸಿಗಬೇಕು ಎಂದು ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಕೆ.ಎಂ. ಪರಶಿವಮೂರ್ತಿ “ಉದಯವಾಣಿ’ಗೆ ತಿಳಿಸಿದ್ದಾರೆ.
ರೈತರ ಲಾಭಕ್ಕಾಗಿ ಸಮಗ್ರ ಯೋಜನೆ: ಮಾರುಕಟ್ಟೆ ಮಾತ್ರವಲ್ಲದೆ ವಿವಿಧ ಹಂತಗಳಲ್ಲಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗಿದೆ. ಇದರಡಿ 92 ರೈತರ ಗುಂಪುಗಳನ್ನು ರಚಿಸಿದ್ದು, 92 ಸಾವಿರ ರೈತರು ಸದಸ್ಯರಾಗಿದ್ದಾರೆ.
ಈ ಪೈಕಿ 4ರಿಂದ 5 ಸಾವಿರ ದಾಳಿಂಬೆ ಬೆಳೆಗಾರರೂ ಇದ್ದಾರೆ. ಇಲ್ಲಿ ಬಿತ್ತನೆ ಹಂತದಿಂದ ಮಾರುಕಟ್ಟೆ ಹಂತದವರೆಗೂ ಸರ್ಕಾರದ ಪಾಲ್ಗೊಳ್ಳುವಿಕೆ ಇರುತ್ತದೆ. ಜತೆಗೆ ಬಿಗ್ ಬ್ಯಾಸ್ಕೆಟ್, ರಿಲಾಯನ್ಸ್, ಮೋರ್ ಸೇರಿದಂತೆ ದೊಡ್ಡ ಕಂಪನಿಗಳೊಂದಿಗೆ ನೇರ ಸಂಪರ್ಕ ಹೊಂದಲಾಗಿದೆ. ಬೆಳೆದ ಉತ್ಪನ್ನಗಳನ್ನು ನೇರವಾಗಿ ಈ ಕಂಪನಿಗಳಿಗೆ ಪೂರೈಸಲಾಗುವುದು. ಇದರಿಂದ ರೈತರಿಗೆ ಕನಿಷ್ಠ ದುಪ್ಪಟ್ಟು ಬೆಲೆ ಸಿಗಲಿದೆ ಎಂದು ಅವರು ತಿಳಿಸಿದರು.