ಬೆಂಗಳೂರು: ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಮುಂಬೈನ ಅರ್ಥರ್ ಜೈಲಿನಿಂದ ಬಾಡಿವಾರೆಂಟ್ ಮೂಲಕ ಕರೆತಂದಿರುವ ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರ ಜೈನುಲ್ಲಾಬ್ಬೀನ್ ವಿಚಾರಣೆ ವೇಳೆ ದೇಶದಲ್ಲಿ ನಡೆದ ಬಹುತೇಕ ಬಾಂಬ್ ಸ್ಫೋಟಕ ಕೃತ್ಯಗಳಿಗೆ ಸ್ಫೋಟಕಗಳನ್ನು ಮಂಗಳೂರಿನ ಮೂಲಕವೇ ರವಾನಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ಎಂಬ ವಿಚಾರ ಬಯಲಿಗೆ ಬಂದಿದೆ.
ಐಎಂ ಸಂಸ್ಥಾಪಕ ಯಾಸಿನ್ ಭಟ್ಕಳ್ ಕಟ್ಟಾ ಸಹಚರನಾದ ಜೈನುಲ್ಲಾಬ್ಬೀನ್ ಆತನ ಸೂಚನೆಯಂತೆ ಸ್ಫೋಟಕ ಕೃತ್ಯಗಳಿಗೆ ಸ್ಫೋಟಕಗಳನ್ನು ರವಾನಿಸುವ ಹೊಣೆ ಹೊತ್ತುಕೊಂಡಿದ್ದ. ಈ ಕೃತ್ಯಕ್ಕಾಗಿ ದಕ್ಷಿಣ ಭಾರತದ ಹಲವು ಕಡೆ ತನ್ನ ಸಹಚರರನ್ನು ನೇಮಿಸಿಕೊಂಡಿದ್ದ. ಈತನ ತಂಡದಲ್ಲಿ 2015ರಲ್ಲಿ ಬಂಧಿತರಾಗಿರುವ ಮೂಲದ ಸೈಯದ್ ಇಸ್ಮಾಯಿಲ್ ಅಫಾಕ್, ಅಬ್ದುಲ್ ಸಬೂರ್, ಸದ್ದಾಂ ಹುಸೇನ್, ರಿಯಾಜ್ ಅಹಮದ್ ಸೈಯದಿ ಸಕ್ರಿಯ ಸದಸ್ಯರಾಗಿದ್ದರು.
ಈ ತಂಡವೇ ಮಂಗಳೂರಿನ ಮೂಲಕ 2011ರಿಂದ 2014ರವರೆಗೆ ದೇಶದಲ್ಲಿ ನಡೆದ ಬಾಂಬ್ ಸ್ಫೋಟ ಕೃತ್ಯಗಳಿಗೆ ಸ್ಫೋಟಕಗಳನ್ನು ರವಾನಿಸಿದೆ ಎಂಬುದು ಗೊತ್ತಾಗಿದೆ. ಆರೋಪಿಗಳಿಗೆ ಮಂಗಳೂರಿನಲ್ಲಿ ಸ್ಫೋಟಕಗಳನ್ನು ನೀಡುತ್ತಿದ್ದವರು ಯಾರು? ಅಥವಾ ಆರೋಪಿಗಳೇ ಸ್ಫೋಟಕ ತಯಾರಿಸುತ್ತಿದ್ದರೇ ಎಂಬುದರ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸೌದಿ ಅರೇಬಿಯಾದಲ್ಲಿ ವಾಸ!: 2013ರ ಅಂತ್ಯದಲ್ಲಿ ಉಗ್ರ ಯಾಸಿನ್ ಭಟ್ಕಳ್‌ನನ್ನು ರಾಷ್ಟ್ರೀಯ ತನಿಖಾ ದಳ ( ಎನ್‌ಐಎ) ಬಂಧಿಸಿದ ಬಳಿಕ ಎಚ್ಚೆತ್ತುಕೊಂಡ ಜೈನುಲ್ಲಾಬ್ಬೀನ್ ಸೌದಿ ಅರೇಬಿಯಾಗೆ ಪಲಾಯನ ಮಾಡಿದ್ದ. ಅಲ್ಲಿಂದ ಪಾಕ್‌ನ ಕರಾಚಿ ಹಾಗೂ ದುಬೈನಲ್ಲಿರುವ ಉಗ್ರ ರಿಯಾಜ್ ಭಟ್ಕಳ್‌ನನ್ನು ಸಂಪರ್ಕಿಸಿ ಆತನ ಜತೆಗಿದ್ದ. ಬೆಂಗಳೂರಿನಲ್ಲಿ ವಾಸವಿದ್ದ ಸಹಚರರಾದ ಸೈಯದ್ ಇಸ್ಮಾಯಿಲ್ ಅಫಾಕ್ ಹಾಗೂ ಮತ್ತಿತರರಿಗೆ 2015ರಲ್ಲಿ ದೇಶದಲ್ಲಿ ಸ್ಫೋಟ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ.
ಈ ಬೆಳವಣಿಗೆಗಳ ನಡುವೆಯೇ ಸೈಯದ್ ಅಫಾಕ್ ಸೇರಿದಂತೆ ನಾಲ್ವರು ಶಂಕಿತರನ್ನು ಸಿಸಿಬಿ ಪೊಲೀಸರು ಜನವರಿಯಲ್ಲಿ ಬಂಧಿಸಿತ್ತು. ಮತ್ತೊಂದೆಡೆ 2011ರಲ್ಲಿ ಮುಂಬೈನ ಜವೇರಿ ಬಜಾರ್ ಸೇರಿದಂತೆ ಮೂರು ಕಡೆ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಜೈನುಲ್ಲಾಬ್ಬೀನ್ ವಿರುದ್ಧ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಘಟಕ (ಎಟಿಎಸ್) ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು. ಅಂತಿಮವಾಗಿ 2017ರಲ್ಲಿ ಆತನನ್ನು ಬಂಧಿಸಿತ್ತು ಎಂದು ಮೂಲಗಳು ಹೇಳಿವೆ.
ಗುರುತು ಪತ್ತೆ ಪರೇಡ್!: ಜೈನುಲ್ಲಾಬ್ಬೀನ್‌ನನ್ನು ತೀವ್ರ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದು ಐಡೆಂಫಿಕೇಶನ್ ಪರೇಡ್ (ಆರೋಪಿ ಗುರುತು ಪತ್ತೆ ಹಚ್ಚುವ ಕಾರ್ಯ) ನಡೆಸಿದ್ದಾರೆ. ಜೈಲಿನಲ್ಲಿರುವ ಐಎಂ ಸಂಘಟನೆ ಉಗ್ರರ ಎದುರಿನಲ್ಲಿ ಜೈನುಲ್ಲಾಬ್ಬೀನ್‌ನನ್ನು ಗುರುತು ಪತ್ತೆಹಚ್ಚುವ ಕಾರ್ಯ ನಡೆಸಲಾಗುತ್ತಿದೆ. ಜತೆಗೆ, ಜೈಲಿನಲ್ಲಿರುವ ಶಂಕಿತ ಉಗ್ರರಿಗೂ ಹಾಗೂ ಈತನಿಗಿರುವ ಸಂಪರ್ಕಗಳ ಬಗ್ಗೆ ತನಿಖೆ ನಡೆದಿದೆ ಎಂದು ಮೂಲಗಳು ಹೇಳಿವೆ.
* ಮಂಜುನಾಥ ಲಘುಮೇನಹಳ್ಳಿ