Advertisement

ಕೆನರಾ ಕಾಲೇಜಿನಲ್ಲಿ ಅನ್ವೇಷಣಾ – 2018ರ ಉದ್ಘಾಟನೆ

10:12 AM Jan 13, 2018 | Team Udayavani |

ಮಹಾನಗರ: ನಾವಿಂದು ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲಿ ಬಾಳುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳು ನಮ್ಮೆಲ್ಲರನ್ನು ನಿಯಂತ್ರಿಸುತ್ತಿವೆ. ಅವುಗಳ ಅತಿಯಾದ ಬಳಕೆ ಅಪಾಯಕಾರಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ| ಎ. ಎಂ ಖಾನ್‌ ಹೇಳಿದರು.

Advertisement

ನಗರದ ಕೆನರಾ ಕಾಲೇಜಿನಲ್ಲಿ ಜನವರಿ 12ರಂದು ನಡೆದ ರಾಷ್ಟ್ರಮಟ್ಟದ ಅಂತರ್‌ ಕಾಲೇಜು ಸ್ಪರ್ಧಾವಳಿಗಳ ಉತ್ಸವ ಅನ್ವೇಷಣಾ 2018ರ ಕಾರ್ಯಕ್ರಮಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಜನರಂತೂ ಮೊಬೈಲ್‌ ವ್ಯಾಟ್ಸಾಪ್‌, ಅಂತರ್‌ ಜಾಲಗಳ ಗುಂಗಿನಲ್ಲೇ ಮೈಮರೆತಿರುವುದು ವಿಪರ್ಯಾಸವಾಗಿದೆ. ದೇಶದ ನಿಜವಾದ ಸಂಪತ್ತೆಂದರೆ ಅದು ಯುವಜನತೆ. ದೇಶವನ್ನು ಕಟ್ಟ ಬೇಕಾಗಿರುವ ಯುವಜನತೆ ಬಹುತೇಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಪರಸ್ಪರ ಸಂಬಂಧಗಳು ಗಟ್ಟಿಗೊಳ್ಳುವುದರ ಬದಲು ಅಪರಿಚಿತರಂತೆ ಮಾತನಾಡುವುದನ್ನೇ ಮರೆತು ಬಾಳುವ ಪರಿಸ್ಥಿತಿಯು ನಮ್ಮ ಮುಂದೆ ಸೃಷ್ಟಿಯಾಗಿದೆ. ಆಧುನಿಕತೆ ಸೃಷ್ಟಿಸಿದ ಮಾಯಾ ಜಾಲದಿಂದ ಹೊರಬಂದು ಶಿಸ್ತು ಸನ್ನಡತೆ, ಬುದ್ಧಿ, ಜ್ಞಾನ ವಿಕಾಸದೊಂದಿಗೆ ಗುರಿ ತಲುಪುವಲ್ಲಿ ಯುವಜನಾಂಗ ದಿಟ್ಟ ಹೆಜ್ಜೆಯನ್ನಿಡಬೇಕಾಗಿದೆ ಎಂದರು.

ಪ್ರತಿಭೆ ಅನಾವರಣಕ್ಕೆ ಸಹಕಾರಿ
ಅಧ್ಯಕ್ಷತೆ ವಹಿಸಿದ್ದ ಕೆನರಾ ಹೈಸ್ಕೂಲ್‌ ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ರಂಗನಾಥ್‌ ಭಟ್‌ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಸ್ವ ಸಾಮರ್ಥ್ಯಗಳ ಅನಾವರಣಕ್ಕೆ ಇಂತಹ ಉತ್ಸವಗಳು ಸಹಕಾರಿಯಾಗಲಿ ಎಂದರು. 

ಕಾಲೇಜಿನ ಸಂಚಾಲಕ ಮಾರೂರು ಸುಧೀರ್‌ ಪೈ, ಅನ್ವೇಷಣಾ 2018ರ ಸಂಘಟಕರಾಗಿರುವ ಪ್ರೊ| ಇಗ್ನೇಶಿಯಸ್‌ ನೆವಿಲ್‌ ನೊರೊನ್ಹಾ, ಪ್ರೊ| ಸುಶಾಮ, ಪ್ರೊ| ಜಯಭಾರತಿ, ಪ್ರೊ| ಪ್ರತಿಮಾ ಬಾಳಿಗಾ, ಪ್ರೊ| ಧನ್ಯಶ್ರೀ, ಪ್ರೊ| ಕೀರ್ತಿ ಆಳ್ವ, ಪ್ರೊ| ರಕ್ಷಾ, ಪ್ರೊ| ಹಾರ್ದಿಕ್‌ ಹಾಗೂ ವಿದ್ಯಾರ್ಥಿ ಸಂಘಟಕರಾಗಿರುವ ಮಾಧವ ಪೈ, ಸುಧಾ ಸಿಂಗ್‌, ವಾಸುದೇವ ಪ್ರಭು, ರಾಮಕೃಷ್ಣ ಭಟ್‌, ರಾಮ್‌ನಾಥ್‌ ಪ್ರಭು, ಪ್ರಸನ್ನ ಭಾಗವತ್‌ ಉಪಸ್ಥಿತರಿದ್ದರು.

Advertisement

ಕಾಲೇಜಿನ ಪ್ರಾಂಶುಪಾಲೆಯಾಗಿರುವ ಡಾ| ಕೆ.ವಿ. ಮಾಲಿನಿ ಸ್ವಾಗತಿಸಿದರು. ಅನ್ವೇಷಣಾ 2018 ಸಂಯೋಜಕಿ ಪ್ರೊ| ಪುಷ್ಪಲತಾ ಪ್ರಾಸ್ತಾವನೆಗೈದರು. ಕಾಲೇಜಿನ ಉಪ ಪ್ರಾಂಶುಪಾಲೆ ಡಾ| ಮನೋಹರ ಜೋಷಿ ಕೆ. ವಂದಿಸಿದರು.  ವಿದ್ಯಾರ್ಥಿ ಸಂಘಟಕರಾಗಿರುವ ಸುಧಾ ಸಿಂಗ್‌ ಮತ್ತು ವಾಸುದೇವ ಪ್ರಭು ಸೈಂಟಿಕಾ ಮತ್ತು ಕ್ಯಾನ್‌ ಪೆಸ್ಟಿನ ಬಗ್ಗೆ ಕಿರು ಪರಿಚಯ ನೀಡಿದರು. 

ಸಂಶೋಧನ ಕ್ಷೇತ್ರದಲ್ಲಿ ತೊಡಗಿ
ವಿದ್ಯಾರ್ಥಿಗಳು ತಮ್ಮ ಕಲಿಕಾಸಕ್ತಿಯೊಂದಿಗೆ ಸಂಶೋಧನ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಾಗ ನವ ಸಮಾಜ ನಿರ್ಮಾಣ ಸಾಧ್ಯ. ಯಾವುದು ಸರಿ ಯಾವುದು ತಪ್ಪು ಎಂಬ ಜಾಗೃತ ಪ್ರಜ್ಞೆಯೊಂದಿಗೆ ತಮ್ಮ ಅಂತಃಶಕ್ತಿಯನ್ನು ಅಭಿವ್ಯಕ್ತಿಸಬೇಕಾದ ಅಗತ್ಯವಿದೆ. ಉತ್ತಮ ಮಾರ್ಗದರ್ಶಕರ ಚಿಂತನೆಗಳನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕಾಗಿದೆ. ಸ್ವಾಮಿ ವಿವೇಕಾನಂದರು ಭವ್ಯಭಾರತದ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ವಿಸ್ತರಿಸಿದ ಮಹಾನ್‌ ಚೇತನ. ಅವರ 155ನೇ ಜಯಂತಿಯನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಯುವಕರಿಗಾಗಿ ಏರ್ಪಡಿಸಿರುವ ಅನ್ವೇಷಣಾ 2018ರ ಸದವಕಾಶಗಳನ್ನು ಬಳಸಿಕೊಂಡು ಯುವಕರು ತಮ್ಮ ವ್ಯಕ್ತಿತ್ವವನ್ನು ರೂಪಿಸುವಂತಾಗಲಿ.
 – ಡಾ| ಎ. ಎಂ ಖಾನ್‌, ಪರೀಕ್ಷಾಂಗ ಕುಲಸಚಿವ,
    ಮಂಗಳೂರು ವಿಶ್ವವಿದ್ಯಾನಿಲಯ

Advertisement

Udayavani is now on Telegram. Click here to join our channel and stay updated with the latest news.

Next