Advertisement

ಸುಡುಗಾಡು ಸಿದ್ಧರಿಗೆ ಜಾತಿ ಪ್ರಮಾಣ ಪತ್ರ ನೀಡದೆ ಶೋಷಣೆ

05:22 PM Sep 17, 2018 | Team Udayavani |

ಚಿತ್ರದುರ್ಗ: ಸುಡುಗಾಡು ಸಿದ್ಧರಿಗೆ ಜಾತಿ ಪ್ರಮಾಣ ಪತ್ರಗಳನ್ನು ನೀಡದೆ ಶೋಷಣೆ ಮಾಡಲಾಗುತ್ತಿದೆ ಎಂದು
ಅಖೀಲ ಕರ್ನಾಟಕ ಸುಡುಗಾಡು ಸಿದ್ಧರ ಮಹಾಸಭಾ ರಾಜ್ಯಾಧ್ಯಕ್ಷ ಲೋಹಿತಾಕ್ಷ ಹೇಳಿದರು. ಇಲ್ಲಿನ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುಡುಗಾಡು ಸಿದ್ಧ ಸಮುದಾಯದ ಮುಖಂಡರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯಾ ಬಂದು 72 ವರ್ಷ ಕಳೆದರೂ ಸುಡುಗಾಡು ಸಿದ್ಧರಿಗೆ ಇನ್ನೂ ಸ್ವಾತಂತ್ರ್ಯಾ ಸಿಕ್ಕಿಲ್ಲ. ಸುಡುಗಾಡು ಸಿದ್ಧರು ಎಂದು ಹೇಳಿಕೊಳ್ಳಲು ಸರ್ಕಾರ ನಮಗೆ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲವಾದ್ದರಿಂದ ಮಕ್ಕಳನ್ನು ಶಾಲೆಗೆ ಸೇರಿಸುವಂತಿಲ್ಲ. ಜಾತಿ ಪ್ರಮಾಣ ಪತ್ರ ಕೊಡಿ ಎಂದು ಸಾಕಷ್ಟು ಹೋರಾಟ ಮಾಡುತ್ತಿದ್ದರೂ ಇಂದಿಗೂ ಜಾತಿ ಪ್ರಮಾಣ ಪತ್ರ ನೀಡದೆ ಸುಡುಗಾಡು ಸಿದ್ಧರನ್ನು ಜಿಲ್ಲಾಡಳಿತ ಅವಮಾನಿಸುತ್ತಿದೆ ಎಂದು ದೂರಿದರು.

Advertisement

ಸಾಮಾಜಿಕವಾಗಿ ಅತ್ಯಂತ ಶೋಷಣೆಗೆ ಒಳಗಾಗಿರುವ ಸುಡುಗಾಡು ಸಿದ್ಧರಿಗೆ ಒಂದು ನೆಲೆಯಿಲ್ಲ. ಹೊಟ್ಟೆಪಾಡಿಗಾಗಿ
ಊರೂರು ಅಲೆಯುತ್ತಿರುವ ಸಮುದಾಯಕ್ಕೆ ದಿಕ್ಕು ದೆಸೆ ಎನ್ನುವುದಿಲ್ಲ. ಜೋರಾಗಿ ಗಾಳಿ ಬೀಸಿದರೆ ಹಾರುವ,
ಮಳೆಗಾಲದಲ್ಲಿ ಸೋರುವ ಟೆಂಟ್‌ಗಳಲ್ಲೇ ಸುಡುಗಾಡು ಸಿದ್ಧರು ದಿನದೂಡುವಂತಾಗಿದೆ. ಶೇ. 90ರಷ್ಟು ಮಂದಿಗೆ
ಸೂರಿಲ್ಲ ಎಂದರು. ಶಾಶ್ವತ ಸೂರಿಗಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಜಿಲ್ಲಾಡಳಿತ ಕನಿಷ್ಟ ಸ್ಪಂದನೆ ಮಾಡುತ್ತಿಲ್ಲ. ಮತದಾರರ ಗುರುತಿನ ಚೀಟಿ, ಆಧಾರ್‌ ಚೀಟಿಗೂ ನಿರಂತರ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಅಲೆಮಾರಿಗಳಾಗಿರುವ ಸುಡುಗಾಡು ಸಿದ್ಧರ ಮಕ್ಕಳಿಗೆ ಶಿಕ್ಷಣ ಇಲ್ಲವಾಗಿದೆ. ಊರೂರು ಅಲೆದು ಸಂಜೆಯಾಗುತ್ತಿದ್ದಂತೆ ಊರ ಹೊರಗಿನ ಬಯಲು ಪ್ರದೇಶದಲ್ಲಿ ಬಿಡಾರ ಹೂಡಿ ಜೀವನ ಸಾಗಿಸುವುದೇ ದೊಡ್ಡ ಸಾಧನೆ ಎಂಬಂತಾಗಿದೆ. ಮಕ್ಕಳನ್ನು ಕಂಕುಳಲ್ಲಿಟ್ಟುಕೊಂಡು ಕೂದಲು ಮತ್ತು ಪ್ಲ್ಯಾಸ್ಟಿಕ್‌ ಸಂಗ್ರಹಣೆ ಮೂಲಕ ಹೊಟ್ಟೆ ಹೊರೆಯಲಾಗುತ್ತಿದ್ದು ಬಡತನವನ್ನೇ ಹಾಸಿ ಹೊದ್ದಿದ್ದು ಮಕ್ಕಳು ಶಾಲೆ ಮುಖ ಕಾಣುತ್ತಿಲ್ಲ. ಕೇವಲ ಹೊಟ್ಟೆಬಟ್ಟೆ ತುಂಬಿದರೆ ಸಾಕೆನ್ನುವ ಇರಾದೆ ಸಮುದಾಯದ್ದಾಗಿದೆ ಎಂದರು.

ಪಾರಂಪರಿಕ ವತ್ತಿ ನಂಬಿ ಅಲೆಮಾರಿಯಾಗಿ ನಿತ್ಯ ಊರೂರು ಅಲೆಯಬೇಕಿದೆ. ಬಿಪಿಎಲ್‌ ಪಡಿತರ ಚೀಟಿ ನೀಡುತ್ತಿಲ್ಲ. ನಿವೇಶನ ಮತ್ತು ವಸತಿ ಸೇರಿದಂತೆ ಸರ್ಕಾರದ ಯಾವ ಸೌಲಭ್ಯಗಳೂ ಸಮುದಾಯಕ್ಕೆ ದಕ್ಕುತ್ತಿಲ್ಲ. ರಾಜ್ಯ
ಸರ್ಕಾರ ಅಲೆಮಾರಿಗಳ ಕೋಶ ಆರಂಭಿಸಿದೆ. ಆದರೆ ಅದು ಬೇರೆಯವರ ಪಾಲಾಗುತ್ತಿದೆ ಎಂದು ದೂರಿದರು.

ಅಖೀಲ ಕರ್ನಾಟಕ ಸುಡುಗಾಡು ಸಿದ್ಧರ ಮಹಾಸಭಾ ಜಿಲ್ಲಾಧ್ಯಕ್ಷ ಹಿರಿಯೂರು ಕೃಷ್ಣಪ್ಪ ಮಾತನಾಡಿ, ಸುಡುಗಾಡು
ಸಿದ್ಧ ಸಮುದಾಯದವರನ್ನು ಸರ್ಕಾರ ಮನುಷ್ಯರಂತೆ ಕಾಣಲಿ. ಇಂದಿಗೂ ಸುಡುಗಾಡು ಸಿದ್ಧರಿಗೆ ನಿವೇಶನವಿಲ್ಲ,
ಮನೆಯಿಲ್ಲ, ಇದ್ದರೂ ಬಟ್ಟೆ ಟೆಂಟ್‌ ಗಳು ಇದ್ದು ವಿದ್ಯುತ್‌, ಕುಡಿವ ನೀರು, ಶೌಚಾಲಯ ಸೇರಿದಂತೆ ಬಹುತೇಕ
ಸೌಲಭ್ಯಗಳು ಮರೀಚಿಕೆಯಾಗಿವೆ ಎಂದರು.

ರಾಜ್ಯ ಸರ್ಕಾರ ಕೂಡಲೇ ಎಲ್ಲ ಸುಡುಗಾಡು ಸಿದ್ಧರಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಆದೇಶ ನೀಡಬೇಕು.
ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ವಕೀಲ ದಾವಣಗೆರೆ ವೀರೇಶ್‌, ಸಮುದಾಯದ ಮುಖಂಡರಾದ ಕೆ.ಎಂ. ನಾಗರಾಜ್‌, ಕುರಿ ಜಯಣ್ಣ, ಅಪ್ಪಣ್ಣ, ಗೌರಿಪುರದ ಹೊನ್ನೂರಪ್ಪ, ಗಂಗಣ್ಣ, ನಾಯಕನಹಟ್ಟಿ ಸತ್ಯಪ್ಪ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next